ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಮಿಂಚಿನ ಪ್ರಚಾರ

| Published : May 02 2024, 12:20 AM IST / Updated: May 02 2024, 12:21 AM IST

ಸಾರಾಂಶ

ನಾಡು ಕಂಡ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದಾರೆ.

ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಜೊತೆಗೂಡಿ ಶಾಸಕ ಎನ್.ವೈ. ಗೋಪಾಲಕೃಷ್ಣ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಚೆಳ್ಳಗುರ್ಕಿ, ರೂಪನಗುಡಿ, ಶಂಕರಬಂಡೆ, ಗ್ರಾಮಗಳಲ್ಲಿ ಬಾರಿ ಬಹಿರಂಗ ಪ್ರಚಾರ ಮತ್ತು ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೋಪಾಲಕೃಷ್ಣ, ನಾನು ಈ ಹಿಂದೆ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿ ಕೆಲಸ ಮಾಡಿದ್ದು, ಗ್ರಾಮಾಂತರ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ಆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಾಗಿದೆ ಎಂದರು.

ನಾಡು ಕಂಡ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಬಡವರು, ದೀನ ದಲಿತರು, ಹೆಣ್ಣುಮಕ್ಕಳು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ಯುವ ಉತ್ಸಾಹಿ ಬಿ. ನಾಗೇಂದ್ರ ಸಹ ಬಡವರ ಪರ ಕಾಳಜಿ ಉಳ್ಳವರಾಗಿದ್ದಾರೆ.ಹಾಗಾಗಿ, ಬಿಜೆಪಿಯ ಸುಳ್ಳು ಭರವಸೆಗಳಿಗೆ ಮಾರು ಹೋಗದೆ, ಸುಶಿಕ್ಷಿತ, ಸಜ್ಜನ, ಪ್ರಾಮಾಣಿಕ ವ್ಯಕ್ತಿಯೆಂದು ಹೆಸರು ಪಡೆದಿರುವ ಸಂಸತ್ತಿನಲ್ಲಿ ಬಳ್ಳಾರಿ ಜನರ ಧ್ವನಿಯಾಗಬಲ್ಲ ಈ. ತುಕಾರಾಂ ಅವರಿಗೆ ಮತ ನೀಡುವ ಮೂಲಕ ಹೆಚ್ಚಿನ‌ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸುವಂತೆ ಮನವಿ ಮಾಡಿದರು.

ಜಿಲ್ಲಾ ಸಚಿವ ಬಿ. ನಾಗೇಂದ್ರ ಮಾತನಾಡಿ, ಕೇಂದ್ರದ ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಕೇಂದ್ರದ ಬಿಜೆಪಿ ಬರೀ ಸುಳ್ಳುಗಳನ್ನು ಹೇಳುತ್ತ ಬರುತ್ತಿದೆ. ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಕೋಮು ಸೌಹಾರ್ದ ಹಾಳು ಮಾಡಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು. ದೇಶದ ಸಮಗ್ರ ಅಭಿವೃದ್ಧಿಯ ಚಿಂತನೆ ಹೊತ್ತಿರುವ ಕಾಂಗ್ರೆಸ್‌ ಅನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರು ಗೆಲುವು ಸಾಧಿಸುತ್ತಿದ್ದಂತೆಯೇ ಬಳ್ಳಾರಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧರಿದ್ದಾರೆ. ವಿದ್ಯಾವಂತರಾಗಿರುವ ತುಕಾರಾಂ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ತಂದು ಪ್ರಗತಿಗೆ ಮುನ್ನುಡಿ ಬರೆಯುತ್ತಾರೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ ಅಸುಂಡಿ ನಾಗರಾಜಗೌಡ, ಅಸುಂಡಿವನ್ನೂರಪ್ಪ, ವೆಂಕಟೇಶ್ ಪ್ರಸಾದ್ ಮತ್ತಿತರರಿದ್ದರು.