ಕನ್ನಡಪ್ರಭ ವಾರ್ತೆ ಕಾರವಾರ
ಅಂಕೋಲಾ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಗೃಹಸಚಿವ ಡಾ. ಜಿ.ಪರಮೇಶ್ವರ್ ಆಪ್ತ ಗೋಪಾಲಕೃಷ್ಣ ನಾಯಕ ಮೇಲೆ ನಡೆದ ಭೀಕರ ಹತ್ಯೆ ಯತ್ನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೇವಲ 24 ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಗುರುವಾರ ತಮ್ಮ ಕಚೇರಿಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.ಬಂಧಿತ ಆರೋಪಿಗಳನ್ನು ಗೋವಾ ಮೂಲದ ಜಾಕಿರ್, ನೈಜರ್, ಸದ್ದಾಂ ಮತ್ತು ಇರ್ಫಾನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗೋವಾದಲ್ಲಿ ಚಾಲಕರು, ಬೌನ್ಸರ್‌ಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಘಟನಾ ಸ್ಥಳದಲ್ಲಿದ್ದ ಗೋವಾ ನೋಂದಣಿಯ ಒಂದು ವಾಹನ, ಎರಡು ಪಲ್ಸರ್ ಬೈಕ್ ಹಾಗೂ ಕೃತ್ಯದ ಬಳಿಕ ಪರಾರಿಯಾಗಲು ಬಳಸಿದ್ದ ಒಂದು ಸ್ಥಳೀಯ ಬಾಡಿಗೆ ಕಾರನ್ನು ಜಪ್ತಿ ಮಾಡಿದ್ದಾರೆ.ಮಾ. 25ರ ಬುಧವಾರ ಬೆಳಗ್ಗೆ 10.15ರ ಸುಮಾರಿಗೆ ಅಂಕೋಲಾದ ಆಕ್ಸಿಸ್ ಬ್ಯಾಂಕ್ ಬಳಿಯ ಸಲೂನ್‌ನಿಂದ ಗೋಪಾಲಕೃಷ್ಣ ನಾಯಕ್ ಹೊರಬರುತ್ತಿದ್ದಾಗ, ಮಾರಕಾಸ್ತ್ರ ಹಿಡಿದು ಹೊಂಚು ಹಾಕಿದ್ದ ಐದಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ಅವರ ಮೇಲೆ ಮುಗಿ ಬಿದ್ದಿದೆ. ಈ ವೇಳೆ ಅವರ ನೆರವಿಗೆ ಧಾವಿಸಿದ ರಾಘವೇಂದ್ರ ನಾಯಕ ಅವರಿಗೂ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ. ಹಂತಕರಿಂದ ತಪ್ಪಿಸಿಕೊಳ್ಳಲು ಗೋಪಾಲಕೃಷ್ಣ ಅವರು ತಕ್ಷಣವೇ ಪಕ್ಕದಲ್ಲಿದ್ದ ಬ್ಯಾಂಕ್ ಒಂದರೊಳಗೆ ನುಗ್ಗಿ ಶಟರ್ ಎಳೆದುಕೊಳ್ಳುವ ಮೂಲಕ ಪವಾಡಸದೃಶವಾಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಂಧಿತ ಆರೋಪಿಗಳ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಆದರೂ, ಇವರು ಇಷ್ಟು ದೊಡ್ಡ ಸಾಹಸಕ್ಕೆ ಕೈಹಾಕಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ರಾಜಕೀಯ ದ್ವೇಷದ ಹಿನ್ನೆಲೆ ನಡೆದ ದಾಳಿಯೇ ಅಥವಾ ಹಣಕ್ಕಾಗಿ ಪಡೆದ ಸುಪಾರಿ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಾಳಿ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕುಗೊಂಡಿದೆ.ನಾಲ್ಕು ವಿಶೇಷ ತಂಡಗಳ ರಚನೆಪ್ರಕರಣದ ತೀವ್ರತೆಯನ್ನು ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಹಾಗೂ ಈ ಕೃತ್ಯದ ಹಿಂದಿನ ನೈಜ ‘ಮಾಸ್ಟರ್ ಮೈಂಡ್’ ಅನ್ನು ಹುಡುಕಲು ನಾಲ್ಕು ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ. ಅಪರಾಧಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಬಿಡುವುದಿಲ್ಲ, ಶೀಘ್ರದಲ್ಲೇ ಉಳಿದವರನ್ನು ಬಂಧಿಸಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
