ಸಾರಾಂಶ
ಚನ್ನರಾಯಪಟ್ಟಣ : ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಹಾಲಿ ಉಪಾಧ್ಯಕ್ಷ ಹಾಗೂ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ತೊರೆದು ಗೌಡಗೆರೆ ಗ್ರಾಮದ ಮುಖಂಡ ಪ್ರಕಾಶ್ ಮತ್ತು ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಟರಾಜ್ ನೇತೃತ್ವದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಸ್ವಾಗತ ಮಾಡಿ ಮಾತನಾಡಿದ ಸಿ.ಎನ್.ಬಾಲಕೃಷ್ಣ, ‘ನಮ್ಮ ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ದೇವೇಗೌಡರ ನಾಯಕತ್ವ, ಕುಮಾರಸ್ವಾಮಿಯವರ ಜನಪ್ರಿಯ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಹಾಸನ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂಬ ಉದ್ದೇಶಕ್ಕೆ ಈ ದಿನ ಗೌಡಗೆರೆಯ ಹಿರಿಯ ನಾಯಕರಾದ ಬೋರೇಗೌಡ ನಾಯಕತ್ವದಲ್ಲಿ ನೂರಾರು ಸಂಖ್ಯೆಯ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಆನೆ ಬಲ ಬಂದಂತಾಗಿದೆ’ ಎಂದು ಹೇಳಿದರು.
‘ಈ ದಿನ ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲಾ ಮುಖಂಡರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ. ನಮ್ಮ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಅಭಿವೃದ್ಧಿಯ ಯೋಜನೆಗಳನ್ನು ಮನದಟ್ಟು ಮಾಡಿಕೊಂಡು ಈ ದಿನ ನೂರಾರು ಸಂಖ್ಯೆಯಲ್ಲಿ ಮುಖಂಡರು ಹಲವಾರು ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಪ್ರಜ್ವಲ್ ರೇವಣ್ಣನವರ ಗೆಲುವಿನ ಮುನ್ಸೂಚನೆಯಾಗಿದೆ’ ಎಂದು ಹೇಳಿದರು,
‘ಗೌಡಗೆರೆ ಗ್ರಾಮಸ್ಥರ ಬೇಡಿಕೆಯಾದ ಪ್ಲೇ ಓವರ್ ರಸ್ತೆಯ ಕಾಮಗಾರಿಯನ್ನು ಲೋಕಸಭಾ ಚುನಾವಣೆ ಮುಗಿದ ತಕ್ಷಣ ಪ್ರಾರಂಭಿಸಲಾಗುವುದು. ಏ.೧೯ ರಂದು ಗೌಡಿಗೆರೆಯಲ್ಲಿ ನಡೆಯಲಿರುವ ಎನ್‌ಡಿಎ ಪಕ್ಷದ ಮೈತ್ರಿ ಅಭ್ಯರ್ಥಿಯ ಪರವಾದ ಚುನಾವಣಾ ಪ್ರಚಾರದಲ್ಲಿ ಗೌಡಗೆರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗೌಡಗೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಟರಾಜ್ ಮಾತನಾಡಿ, ‘ಕಳೆದ ೧೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಬಾಲಕೃಷ್ಣರ ವಿರೋಧವಾಗಿ ಕೆಲಸ ಮಾಡಿದ್ದರೂ ಸಹ ನಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಟ್ಟಿರುತ್ತಾರೆ. ಶಾಸಕರ ಮನೆಗೆ ಬಂದು ನಮ್ಮ ಸಮಸ್ಯೆ ಹೇಳಿದ ಸಂದರ್ಭದಲ್ಲಿ ಯಾವುದೇ ಕಾರಣದಲ್ಲೂ ನಮ್ಮನ್ನು ಬರಿಗೈಯಲ್ಲಿ ಕಳಿಸಿಲ್ಲ. ನಮ್ಮೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ನಮ್ಮನ್ನು ಉತ್ತಮ ರೀತಿ ನಡೆಸಿಕೊಂಡಿದ್ದಾರೆ’ ಎಂದು ಹೇಳಿದರು.
ಜನಪ್ರಿಯ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರ ಅಭಿವೃದ್ಧಿ ಯೋಜನೆಗಳನ್ನು ಕಣ್ಣಾರೆ ಕಂಡು ಹಾಗೂ ಅವರಲ್ಲಿರುವ ಜನಪರವಾದ ಆಲೋಚನೆಗಳನ್ನು ಮನಗಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ. ಬಾಲಕೃಷ್ಣ ಅವರು ಎಲ್ಲಿವರೆಗೂ ರಾಜಕಾರಣದಲ್ಲಿ ಮುಂದುವರೆಯುತ್ತಾರೋ ಅಲ್ಲಿವರೆಗೂ ಬಾಲಕೃಷ್ಣ ಅವರ ಬೆಂಬಲಿಗರಾಗಿ ಅವರ ಜೊತೆಯಲ್ಲೇ ಇರುತ್ತೇವೆ ಎಂದರು.
ಗೌಡಗೆರೆ ಪ್ರಕಾಶ್ ಮಾತನಾಡಿ, ಸಿ.ಎನ್.ಬಾಲಕೃಷ್ಣ ಅವರ ನಿರಂತರ ಜನಸೇವೆಯನ್ನು ನೋಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ ಪ್ರಜ್ವಲ್ ರೇವಣ್ಣರನ್ನು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಲು ಶ್ರಮಿಸುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಮುಖಂಡರಾದ ಕಗ್ಗೆರೆ ನಾಗೇಂದ್ರಬಾಬು, ಬೋರೇಗೌಡ್, ಗೌಡಗೆರೆ ಪ್ರಕಾಶ್, ಗೌಡಗೆರೆ ನಟರಾಜ್, ಶ್ರೀನಿವಾಸ್, ಲೋಕಿ, ರಾಜೇಶ್, ಎಚ್.ಡಿ.ಕುಮಾರ್, ಮಂಜು, ಅವಿನಾಶ್, ಅಣ್ಣಪ್ಪ, ಕಾರ್ತಿಕ್, ವಸಂತ್, ವೆಂಕಟೇಶ್, ರಮೇಶ್ ನಾಯಕ್, ಸತೀಶ್ ಹಾಜರಿದ್ದರು.
ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗೌಡಗೆರೆ ಗ್ರಾಮ ಪಂಚಾಯತಿಯ ಮುಖಂಡರು. ಶಾಸಕ ಸಿ.ಎನ್.ಬಾಲಕೃಷ್ಣ, ಇತರರು ಇದ್ದಾರೆ.