ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

| Published : Aug 29 2024, 12:54 AM IST / Updated: Aug 29 2024, 01:19 PM IST

ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ವ ನಿಗದಿಯಂತೆ ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. 

 ಸಕಲೇಶಪುರ :  ಪೂರ್ವ ನಿಗದಿಯಂತೆ ಎತ್ತಿನಹೊಳೆಯಿಂದ ನೀರೆತ್ತಲು ಸರ್ಕಾರ ಯಶಸ್ವಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ತಾಲೂಕಿನ ಎತ್ತಿನಹಳ್ಳ ಗ್ರಾಮದಲ್ಲಿ ಬುಧವಾರ ಎತ್ತಿನಹೊಳೆ ಯೋಜನೆಗೆ ನಿರ್ಮಿಸಲಾಗಿರುವ ಚೆಕ್ ಡ್ಯಾಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೂಜೆ ಸಲ್ಲಿಸಿದ ನಂತರ ಪ್ರಾಯೋಗಿಕವಾಗಿ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎತ್ತಿನಹೊಳೆ ಕಾಮಗಾರಿಗೆ ವೇಗ ನೀಡಲಾಗಿದೆ. ಕಳೆದ ವರ್ಷ ಇದೇ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಮುಂದಿನ ವರ್ಷದ ಆರಂಭದಲ್ಲಿ ಎತ್ತಿನಹೊಳೆಯಿಂದ ನೀರೆತ್ತಲಾಗುವುದು ಎಂದು ಭರವಸೆ ನೀಡಿದ್ದೆ. ಆದರೆ, ಅದರ ಟ್ರಯಲ್ ರನ್‌ಗೆ ಒಂದೆರಡು ತಿಂಗಳು ವಿಳಂಬವಾದರೂ ಯೋಜನೆ ಯಶಸ್ವಿಯಾಗಿದೆ. ಈಗಾಗಲೇ ೮ ಜಲಾಶಯಗಳ ಪೈಕಿ ಐದು ಜಲಾಶಯಗಳಿಂದ ಯಶಸ್ವಿಯಾಗಿ ನೀರೆತ್ತುವ ಮೂಲಕ ಬಯಲು ಸೀಮೆಗೆ ನೀರು ಹರಿಸಲಾಗಿದೆ ಎಂದು ಹೇಳಿದರು.

ಅರಸೀಕೆರೆ ತಾಲೂಕಿನಲ್ಲಿ ಸುಮಾರು ೧.೫ ಕಿ.ಮೀ. ಕಾಲುವೆ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದ್ದು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಈಗಾಗಲೇ ಕಳೆದ ಒಂದು ತಿಂಗಳಿನಿಂದ ಸುಮಾರು ೧೫ ಸಾವಿರ ಕ್ಯುಸೆಕ್‌ ನೀರು ಮೇಲತ್ತಲಾಗಿದ್ದು ಸಾಕಷ್ಟು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಮಳೆಗಾಲ ಮುಗಿಯುವ ಮುನ್ನ ಎಲ್ಲ ವಿಯರ್‌ಗಳಿಂದ ಟ್ರಯಲ್ ರನ್ ಆರಂಭಿಸಲಾಗುವುದು. ನಂತರ ಶುಭದಿನ ನೋಡಿ ಮುಖ್ಯಮಂತ್ರಿಗಳಿಂದ ಯೋಜನೆಯನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿಯಿಂದ ಹಾನಿಯಾಗಿರುವ ದುರಸ್ತಿಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಒಂದೆಡೆ ಎತ್ತಿನಹೊಳೆ, ಮತ್ತೊಂದೆಡೆ ಹೆದ್ದಾರಿ ಕಾಮಗಾರಿಯಿಂದ ಸಾಕಷ್ಟು ಭೂಮಿ ಕುಸಿದಿದ್ದು ಸಾಕಷ್ಟ ನಷ್ಟ ಸಂಭವಿಸಿದೆ. ಅಧಿಕ ಮಳೆಯಿಂದ ಜನರು ಸಾಕಷ್ಟು ಬೆಳೆ ಕಳೆದುಕೊಂಡಿದ್ದಾರೆ. ಏಳು ಜಿಲ್ಲೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸಲಾಗುವುದು. ಆದರೆ ಇದಕ್ಕೆ ನಮ್ಮದೇನು ವಿರೋಧವಿಲ್ಲ. ಸಾಕಷ್ಟು ತ್ಯಾಗ ಮಾಡಿರುವ ತಾಲೂಕಿಗೆ ಅಭಿವೃದ್ಧಿಗಾಗಿ ಕನಿಷ್ಠ ಒಂದು ಸಾವಿರ ಕೋಟಿ ರು. ಅನುದಾನವನ್ನು ಸರ್ಕಾರ ಘೋಷಿಸಬೇಕು. ತಕ್ಷಣವೇ ಕನಿಷ್ಠ ೫೦೦ ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕನಾಗಿ ಒಂದುವರೆ ವರ್ಷದಲ್ಲಿ ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿಗಾಗಿ ಅನುದಾನ ನೀಡಿ ಎಂದು ತಾಲೂಕಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಯಾವುದೇ ಪ್ರಯೋಜವಾಗಿಲ್ಲ. ಉಪಮುಖ್ಯಮಂತ್ರಿಗಳ ಬಳಿಯೂ ಪ್ರಸ್ತಾವ ಮಾಡುತ್ತೇನೆ. ನಮ್ಮ ಮನವಿಗೆ ಸ್ಪಂದನೆ ಮಾಡಲಿಲ್ಲ ಎಂದರೆ ತಾಲೂಕಿನ ಜನರೊಂದಿಗೆ ಅನುದಾನಕ್ಕಾಗಿ ಹೋರಾಟ ನಡೆಸಲಿದ್ದೇನೆ ಎಂದರು.

ಈ ವೇಳೆ ಸಂಸದ ಶ್ರೇಯಸ್ ಪಟೇಲ್, ಹಿರಿಯೂರು ಶಾಸಕ ಸುಧಾಕರ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮೊದಲಾದವರು ಇದ್ದರು.