ಸರ್ಕಾರಿ ಶಾಲೆ ಉಳಿವಿಗೆ ರೈತರಂತೆ ಚಳವಳಿ ಅಗತ್ಯ

| Published : Dec 14 2023, 02:00 AM IST

ಸರ್ಕಾರಿ ಶಾಲೆ ಉಳಿವಿಗೆ ರೈತರಂತೆ ಚಳವಳಿ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಮಹದಾಯಿ ಹಾಗೂ ಕಾವೇರಿ ನದಿ ನೀರಿಗಾಗಿ ರೈತರು ಮಾಡುವ ಹೋರಾಟದ ಮಾದರಿಯಲ್ಲಿ ಚಳವಳಿಯನ್ನು ರೂಪಿಸಿ,

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಮಹದಾಯಿ ಹಾಗೂ ಕಾವೇರಿ ನದಿ ನೀರಿಗಾಗಿ ರೈತರು ಮಾಡುವ ಹೋರಾಟದ ಮಾದರಿಯಲ್ಲಿ ಚಳವಳಿಯನ್ನು ರೂಪಿಸುವುದರ ಜತೆಗೆ, ಸರ್ಕಾರವನ್ನು ಎಚ್ಚರಿಸಲು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕ್ಷೇತ್ರಗಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ಕನ್ನಡ ಶಾಲೆಗಳನ್ನು ಉಳಿಸಿ-ಕನ್ನಡವನ್ನು ಬೆಳೆಸಿ’ ವಿಚಾರದ ಕುರಿತ ಚಿಂತನ ಸಭೆಯಲ್ಲಿ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ದುಸ್ಥಿತಿ, ಅವುಗಳನ್ನು ಸರಿಪಡಿಸಲು ಸರ್ಕಾರವನ್ನು ಎಚ್ಚರಿಸುವ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಲಾಯಿತು.

ಮೊದಲಿಗೆ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್‌, ಸರ್ಕಾರಗಳಿಗೆ ಎಷ್ಟೇ ಮನವಿ ಮಾಡಿದರೂ ಅದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಆದರೆ, ನ್ಯಾಯಾಲಯದಿಂದ ಬರುವ ಸೂಚನೆಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗುತ್ತದೆ. ಹೀಗಾಗಿ ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಶಾಲೆಗಳನ್ನು ಉಳಿಸಲು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕು. ಅದೇ ಕನ್ನಡ ಮಾಧ್ಯಮ ಕಡ್ಡಾಯ ಮಾಡಲು ಕಾನೂನಿನಲ್ಲಿ ತೊಡಕಿದೆ. ಆದರೆ, ಶಾಲೆಗಳ ಅಭಿವೃದ್ಧಿ ಮಾತ್ರ ಯಾವುದೇ ತೊಡಕಿಲ್ಲ. ಇದನ್ನು ಸರ್ಕಾರಕ್ಕೆ ಮನದಟ್ಟು ಮಾಡುವ ಕೆಲಸ ಒಗ್ಗಟ್ಟಾಗಿ ಮಾಡಬೇಕು ಎಂದರು.

ಮಹದಾಯಿ ನದಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ನೂರಾರು ದಿನಗಳವರೆಗೆ ಹೋರಾಟ ನಡೆಯಿತು. ಅದೇ ರೀತಿ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವುದರ ವಿರುದ್ಧ ರೈತರು ನಿರಂತರವಾಗಿ ಹೋರಾಟ ಮಾಡುತ್ತಾರೆ. ರೈತರ ಈ ಹೋರಾಟಗಳಿಗೆ ಸರ್ಕಾರಗಳು ಬೆದರಿದ್ದವು. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಅದೇ ಮಾದರಿಯಲ್ಲಿ ಹೋರಾಟ ನಡೆಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಶಿಕ್ಷಣ ತಜ್ಞ ಡಾ। ಗುರುರಾಜ ಕರ್ಜಗಿ ಮಾತನಾಡಿ, ಕನ್ನಡ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆತರೆ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಾರೆ. ಶಿಕ್ಷಣ ಗುಣಮಟ್ಟ ಹೆಚ್ಚಬೇಕೆಂದರೆ ಶಿಕ್ಷಕರ ಗುಣಮಟ್ಟ ಹೆಚ್ಚಬೇಕು. ಹೀಗಾಗಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸೂಕ್ತ ತರಬೇತಿ ದೊರೆಯಬೇಕು. ಅದರ ಜತೆಗೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಪಟ್ಟಿ ಮಾಡಿ ಪ್ರತಿ ವರ್ಷ ನಾಲ್ಕು ಜಿಲ್ಲೆಗಳ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಹಂತಹಂತವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಮಾತನಾಡಿ, ಸರ್ಕಾರಗಳಿಗೆ ಕನ್ನಡ ಆದ್ಯತೆಯ ವಿಷಯವಾಗದ ಕಾರಣ ಕನ್ನಡ ಶಾಲೆಗಳು ಅವನತಿ ಹೊಂದುತ್ತಿವೆ. ಅದರ ಜತೆಗೆ ಕನ್ನಡ ಮಾಧ್ಯಮದ ಬಗ್ಗೆ ಪೋಷಕರಲ್ಲಿ ಕೀಳರಿಮೆಯಿದ್ದು, ಅದನ್ನು ಹೋಗಲಾಡಿಸಬೇಕಿದೆ. ಅದಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೂ ಕೆಲಸ ಸಿಗುವಂತಹ ವಾತಾವರಣ ನಿರ್ಮಿಸಬೇಕು ಎಂದರು.

ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಪ್ರಮುಖರಾದ ಪ್ರಧಾನ್‌ ಗುರುದತ್‌ ಇದ್ದರು.

‘ಅಮರಣಾಂತ ಉಪವಾಸ ಮಾಡುತ್ತೇನೆ’

ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಮಾತನಾಡಿ, ಸರ್ಕಾರಗಳಿಗೆ ಕನ್ನಡ ಶಾಲೆ, ಭಾಷೆ ಬಗ್ಗೆ ಇಚ್ಛಾಶಕ್ತಿಯ ಕೊರತೆಯಿದೆ. ಹೀಗಾಗಿ ಸರ್ಕಾರಗಳನ್ನು ಎಚ್ಚರಿಸಲು ಪ್ರತಿಭಟನೆಯ ಹಾದಿ ಹಿಡಿಯಬೇಕು. ಅದಾಗದಿದ್ದರೆ ಅಮರಣಾಂತ ಉಪವಾಸ ಮಾಡೋಣ. ಯಾರೂ ಅದಕ್ಕೆ ಮುಂದಾಗದಿದ್ದರೆ ನಾನೇ ಅಮರಣಾಂತ ಉಪವಾಸ ಮಾಡುತ್ತೇನೆ. ಸರ್ಕಾರ ಆಗಲಾದರೂ ಎಚ್ಚರಗೊಳ್ಳುತ್ತದೆಯೋ ನೋಡೋಣ. ಕನ್ನಡ ಶಾಲೆಯ ಉಳಿಸುವ ಜತೆಗೆ ಆಂಗ್ಲ ಭಾಷೆಯನ್ನೂ ಕಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು ತಿಳಿಸಿದರು.

ಚಿಂತನ ಸಭೆಯಲ್ಲಿ ಎರಡು ನಿರ್ಣಯ

ಸಭೆಯಲ್ಲಿ ನಡೆದ ಚರ್ಚೆಯನ್ನಾಧರಿಸಿ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಪ್ರಮುಖವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಾಳತ್ವದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸುವಂತೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಗೆ ಸಂಬಂಧಿಸಿಂತೆ ಸೂಕ್ತ ಸಲಹೆ ಹಾಗೂ ಮಾಹಿತಿಯನ್ನು ನೀಡಲು, ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು 5 ಜನ ತಜ್ಞರನ್ನೊಳಗೊಂಡ ಉಪಸಮಿತಿ ರಚಿಸಬೇಕು ಎಂದು ನಿರ್ಧರಿಸಲಾಯಿತು.