ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ಅನುದಾನ

ಹೊನ್ನಾವರ: ಬಡವರನ್ನು ಹಾದಿ ಮೇಲೆ ಹಾಕುವ ಯೋಜನೆ ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್‌ ಜಿಲ್ಲಾಧ್ಯಕ್ಷ ಸೂರಜ್‌ ನಾಯ್ಕ, ಆಡಳಿತ ನಡೆಸುವಲ್ಲಿ ಸರ್ಕಾರ ವಿಫಲವಾಗಿದ್ದು ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರು ಸಿಎಂ ಆದ ಮೇಲೆ ₹ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರೂ ಅನ್ಯ ಕೆಲಸಕ್ಕೆ ಅನುದಾನದ ಕೊರತೆ ಆಗಿರಲಿಲ್ಲ. ಈಗಿನ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಖಜಾನೆಯಲ್ಲಿ ಹಣವಿಲ್ಲವೆಂದು ಹೇಳುತ್ತಿದೆ. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದ್ದು ಇತ್ತೀಚಿಗೆ ನಡೆದ ಮಹಿಳಾ ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ಸೇರಿದ್ದರು ಎಂದ ಅವರು, ಮುಂಬರುವ ಜಿಪಂ-ತಾಪಂ ಚುನಾವಣೆ ಎದುರಿಸಲು ಪಕ್ಷ ಸನ್ನದ್ಧವಾಗಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸಲು ಸಿದ್ಧರಿದ್ದೇವೆ. ಈ ಕುರಿತು ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈತ್ರಿ ಕುರಿತ ಪ್ರಶ್ನೆಗೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆಶಯದಂತೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿದ್ದರು. ಅದು ಈ ವರೆಗೂ ಮುಂದುವರಿದಿದ್ದು ಮೈತ್ರಿ ಗಟ್ಟಿಯಾಗಿದೆ. ಆದರೂ ನಮ್ಮ ಪಕ್ಷದ ಸಂಘಟನೆ ಮಾಡುತ್ತೇವೆ ಎಂದರು.

ಪಪಂಗೆ ಸಿಬ್ಬಂದಿ ನೇಮಿಸಿ: ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಚೀಪ್ ಆಫೀಸರ್, ಹೆಲ್ತ್ ಇನ್‌ಸ್ಪೆಕ್ಟರ್‌, ಎಂಜಿನಿಯರ್‌ ಪ್ರಮುಖ ಮೂರು ಹುದ್ದೆ ಖಾಲಿ ಇರುವುದರಿಂದ ಆಡಳಿತ ವ್ಯವಸ್ಥೆ ಕುಂಠಿತವಾಗಿದೆ. ತಕ್ಷಣ ಸಿಬ್ಬಂದಿ ನೇಮಿಸಿ ಜನರಿಗೆ ಸೇವೆ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬರಗಾಲ ಪ್ರದೇಶ ಎಂದು ಘೋಷಿಸಿ:ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೊರತೆಯಿಂದ ಬರ ಛಾಯೆ ಆವರಿಸುವ ಸಾಧ್ಯತೆ ಇದೆ. ಕಾರ್‌ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಪರಿಸ್ಥಿತಿ ಇಲ್ಲ. ಹೀಗಾಗಿ ಸರ್ಕಾರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿದರು.

ಮರಳಿನ ಕೊರತೆ: ಜಿಲ್ಲೆಯಲ್ಲಿ ಮರಳಿನ ಕೊರತೆ ಉಂಟಾಗಿದ್ದರಿಂದ ಮನೆ ಕಟ್ಟುವ ಪರಿಸ್ಥಿತಿ ಇಲ್ಲ. ಸಿಕ್ಕರೂ ದುಬಾರಿ ಬೆಲೆ ತೆರಬೇಕು. ಹೀಗಾಗಿ ಸರ್ಕಾರ ಮರಳಿನ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜೆಪಿಎಸ್ ಪ್ರಿಮಿಯರ್ ಲೀಗ್: ಜೆಪಿಎಸ್ ಜನತಾದಳ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕೆಳಮಟ್ಟದ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿ ಪಕ್ಷದ ಪ್ರತಿಯೊಬ್ಬರು ಒಟ್ಟು ಗೂಡುವ ಕೆಲಸ ಮಾಡುತ್ತೇವೆ. ವ್ಯವಸ್ಥಿತವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಟಿ.ಟಿ. ನಾಯ್ಕ ಮೂಡ್ಕಣಿ, ಸತೀಶ್ ಭಟ್ಟ ಆರೋಳ್ಳಿ, ರತ್ನಾಕರ ನಾಯ್ಕ, ಪ್ರೇಮಾ ಮೇಸ್ತ, ಮಂಗಲದಾಸ ನಾಯ್ಕ್, ಸುಬ್ಬಯ್ಯ ನಾಯ್ಕ, ಸಚಿನ್ ನಾಯ್ಕ, ಶ್ರೀಪಾದ ನಾಯ್ಕ, ರಾಮ ಹೆಗಡೆ, ಲಕ್ಷ್ಮಿಕಾಂತ್ ಹೆಗಡೆ, ಸುಬ್ರಹ್ಮಣ್ಯ ಗೌಡ, ಮಂಜುನಾಥ ಗೌಡ, ಗಣಪತಿ ಮುಕ್ರಿ, ಪ್ರೇಮಾ ಮೇಸ್ತ ಇದ್ದರು.