ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಆಡಳಿತ ಪಕ್ಷದಲ್ಲಿ ನಡೆಯುತ್ತಿರುವ ಬಣ ರಾಜಕಾರಣದಿಂದ ಆಡಳಿತ ದುರ್ಬಲ ವಾಗಿದೆ. ಬಡವರ ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮೂರೂವರೆ ದಶಕದಿಂದ ರಾಜಕೀಯದಲ್ಲಿದ್ದೇನೆ. ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆ ಮಾಡದಷ್ಟು ದುಸ್ಥಿತಿ ಯಾವಾಗಲೂ ಬಂದಿರಲಿಲ್ಲ. ಔಷಧಿಗೆ ಹಣ ನೀಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ.
ಓಲೈಕೆ ರಾಜಕಾರಣ ಮಿತಿ ಮೀರಿದೆ. ಕಾಂಗ್ರೆಸ್ ಶಾಸಕರ ಸಂಖ್ಯೆ136, ಆದರೆ, 157 ಮಂದಿಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ₹37 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದು, ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಎಸ್‌ಇಪಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡುತ್ತಿದೆ ಎಂದು ಹೋರಾಟ ನಡೆಸಿದರೂ ಕಿವಿಗೊಡುವವರಿಲ್ಲ ಎಂದರು.ಈ ಸರ್ಕಾರದಲ್ಲಿ ಕೇವಲ ಕುರ್ಚಿ ಕಿತ್ತಾಟ, ಭ್ರಷ್ಟಾಚಾರ, ಓಲೈಕೆ ನಡೆಯುತ್ತಿದೆ. ಈ ಸರ್ಕಾರ ಇದ್ದರೆಷ್ಟು, ಹೋದರೆಷ್ಟು ಎಂದು ಜನರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲಿಸಿ ತಪ್ಪು ಮಾಡಿದ್ದೇವೆ ಎನ್ನುವ ಮನೋಸ್ಥಿತಿಗೆ ಬಂದಿದ್ದಾರೆ. ಅಪಘಾತದ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಚಿಕ್ಕಮಗಳೂರು ಡಿಪೋಗೆ ಸೇರಿದ 2 ಕೆಎಸ್‌ಆರ್‌ಟಿಸಿ ಬಸ್ಸನ್ನು ಕೋರ್ಟ್ ವಶಕ್ಕೆ ಪಡೆದಿದೆ. ಇದಕ್ಕಿಂತ ದೊಡ್ಡ ಅಪಮಾನ ಸರ್ಕಾರಕ್ಕೆ ಇಲ್ಲ. ಸ್ವಾಭಿಮಾನ ಕಳೆದು ಕೊಂಡ ಸರ್ಕಾರಕ್ಕೆ ಈ ಎಲ್ಲವೂ ನಿದರ್ಶನ ಎಂದು ವಾಗ್ದಾಳಿ ನಡೆಸಿದರು.
ಗುಂಪುಗಾರಿಕೆ, ವಿದೇಶಕ್ಕೆ ಪ್ರವಾಸ ಮಾಡಲಿ ಎಂಸು ಜನ ಇವರ ಆಯ್ಕೆ ಮಾಡಿಲ್ಲ. ಜನರ ಕೆಲಸ ಮಾಡಲಿ ಎಂದು ಆಯ್ಕೆ ಮಾಡಿದ್ದಾರೆ. ಬರೀ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುತ್ತಾರೆ. ಅದರಲ್ಲೂ ಗೃಹ ಲಕ್ಷ್ಮಿಯ ₹5000 ಕೋಟಿ ಎಲ್ಲಿ ಹೋಗಿದೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನಕ್ಕೆ ಈವರೆಗೆ ಉತ್ತರ ಕೊಟ್ಟಿಲ್ಲ. ಬಡವರ ಹೆಸರಲ್ಲಿ ಲೂಟಿ ಮಾಡುವುದಕ್ಕೆ ಸಿಕ್ಕ ಲೈಸೆನ್ಸ್ ಎಂದು ಕೊಂಡಿದ್ದ. ನಿಗಮಗಳಿಗೆ ಅನುದಾನವಿಲ್ಲ. ಆದರೆ, ನಿಗಮ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ನೀಡಿ ಮೂಗಿಗಿಂತ ಮೂಗುತಿ ಬಾರ ಎಂಬಂತೆ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
(ಸಿ.ಟಿ.ರವಿ ಫೋಟೋ ಬಳಸಿ)
