ರೈತರ ಹೋರಾಟಕ್ಕೆ ಮಣಿದು ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟ ಸರ್ಕಾರ: ರೈತರ ಸಂಭ್ರಮಾಚರಣೆ

| Published : Jul 24 2025, 12:45 AM IST

ಸಾರಾಂಶ

ಕೊಟ್ಟ ಮಾತಿನಂತೆ ದೇವನಹಳ್ಳಿ ಮತ್ತು ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ಕೈ ಬಿಟ್ಟಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಭೂ ಸ್ವಾಧೀನ ಕೈ ಬಿಟ್ಟಿರೋ ಬಗ್ಗೆ ಸರ್ಕಾರ ಈ ಕೂಡಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ದೇವನಹಳ್ಳಿ ಮತ್ತು ಚನ್ನರಾಯಪಟ್ಟಣ ಸೇರಿದಂತೆ ಇತರೆಡೆ ರೈತರ ಹೋರಾಟಕ್ಕೆ ಮಣಿದು ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿರುವ ಸರ್ಕಾರದ ಕ್ರಮ ಸ್ವಾಗತಿಸಿದ ರೈತ ಸಂಘದ ಕಾರ್ಯಕರ್ತರು, ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು.

ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಸಿ.ಉಮೇಶ್ ನೇತೃತ್ವದಲ್ಲಿ ನೂರಾರು ರೈತರು, ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಮಳವಳ್ಳಿ ರಸ್ತೆಯ ರೈತಪರ ಹೋರಾಟಗಾರ ಕೀರ್ತಿಶೇಷ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ದೇವನಹಳ್ಳಿ ಹೋರಾಟದ ವಿಜಯೋತ್ಸವ ಆಚರಿಸಿದರು.

ಕೊಟ್ಟ ಮಾತಿನಂತೆ ದೇವನಹಳ್ಳಿ ಮತ್ತು ಚನ್ನರಾಯಪಟ್ಟಣದ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ಕೈ ಬಿಟ್ಟಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು. ಭೂ ಸ್ವಾಧೀನ ಕೈ ಬಿಟ್ಟಿರೋ ಬಗ್ಗೆ ಸರ್ಕಾರ ಈ ಕೂಡಲೇ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು ಎಂದು ಆಗ್ರಹಿಸಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಬೇಕು, ಕೇಂದ್ರ ಸರ್ಕಾರದ ಕೃಷಿ ಮಾರುಕಟ್ಟೆ ನೀತಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಖಾಸಗೀಕರಣ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ಅವೈಜ್ಞಾನಿಕ ಎಫ್‌ಆರ್‌ಪಿ ದರ ಕೈ ಬಿಟ್ಟು ಪ್ರತಿ ಟನ್ ಗೆ 5 ಸಾವಿರ ಬೆಲೆ ನಿಗದಿ ಸೇರಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಈ ವೇಳೆ ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಲಿಂಗಪ್ಪಾಜಿ, ಜಿ.ಎ.ಶಂಕರ, ಶೆಟ್ಟಿಹಳ್ಳಿ ರವಿಕುಮಾರ್, ಸಾದೊಳಲು ಸಿದ್ದೇಗೌಡ, ಕೆ. ಮಲ್ಲಯ್ಯ, ರತ್ತಮ್ಮ, ರಮೇಶ, ಮಂಡ್ಯ ಸಂಘಟನೆಯ ಅಣ್ಣಯ್ಯ, ಮಲ್ಲಯ್ಯ, ರಾಮನಗರ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಶ್ರೀರಂಗಪಟ್ಟಣ ಘಟಕದ ಅಧ್ಯಕ್ಷ ಶಂಭುಗೌಡ ಮತ್ತಿತರರು ಭಾಗವಹಿಸಿದ್ದರು.

--------------

ಗ್ರಾಪಂಗಳು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಕೈಬಿಡದಿದ್ದಲ್ಲಿ ಹೋರಾಟ ಅನಿವಾರ್ಯ, ಎಚ್ಚರಿಕೆ

ಮದ್ದೂರು: ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಕೈಬಿಡದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ರೈತ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತ ಮುಖಂಡರು, ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕರು ನಗರಸಭೆ ವ್ಯಾಪ್ತಿಗೆ ಗ್ರಾಮಗಳನ್ನು ಸೇರ್ಪಡೆ ಮಾಡುವಾಗ ಗ್ರಾಪಂನ ಜನಪ್ರತಿನಿಧಿಗಳು, ರೈತ ಮುಖಂಡರು ಮತ್ತು ಗ್ರಾಮಸ್ಥರೊಂದಿಗೆ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ. ಹೀಗಾಗಿ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಶನ್ ಅನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಆರ್ ಎಸ್ ಜಲಾಶಯ ಅವಧಿಗೆ ಮೊದಲೇ ಭರ್ತಿಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆ ನಡೆಸಲು ನಾಲೆಗಳಲ್ಲಿ ನಿರಂತರವಾಗಿ ನೀರು ಹರಿಸಬೇಕು. ನಾಲೆಗಳ ಆಧುನೀಕರಣ ಕಾಮಗಾರಿಗೆ ಹೆಸರಿನಲ್ಲಿ ರೈತರಿಗೆ ತೊಂದರೆ ನೀಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.