ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ನಡೆಯದೆ ೬ ವರ್ಷಗಳಿಂದ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಕಳೆದೊಂದು ವರ್ಷದಿಂದ ಚುನಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರ ವಕ್ರದೃಷ್ಟಿ ಬೀರಿರುವಂತೆ ಕಂಡುಬರುತ್ತಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ನಡೆಯದೆ ೬ ವರ್ಷಗಳಿಂದ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಕಳೆದೊಂದು ವರ್ಷದಿಂದ ಚುನಾವಣೆ ನಡೆದಿಲ್ಲ. ಸ್ಥಳೀಯ ಸಂಸ್ಥೆಗಳ ಮೇಲೆ ಸರ್ಕಾರ ವಕ್ರದೃಷ್ಟಿ ಬೀರಿರುವಂತೆ ಕಂಡುಬರುತ್ತಿದೆ. ಚುನಾವಣೆಯನ್ನು ವಿಳಂಬ ಮಾಡುತ್ತಲೇ ಸ್ಥಳೀಯ ಮಟ್ಟದ ಪ್ರತಿನಿಧಿಗಳು ಆಯ್ಕೆಯಾಗದಂತೆ ತಡೆದು ಅಧಿಕಾರವನ್ನು ಕೇಂದ್ರೀಕರಣಗೊಳಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮಟ್ಟದಲ್ಲಿ ಪ್ರತಿನಿಧಿಗಳಿಲ್ಲದೆ ಗ್ರಾಮೀಣಾಭಿವೃದ್ಧಿ ಕುಂಠಿತಗೊಂಡಿದೆ. ಸ್ಥಳೀಯ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆಯೇ ಸಿಗದಂತಾಗಿದೆ. ಎಲ್ಲೆಡೆ ಅಧಿಕಾರಿಗಳ ದರ್ಬಾರ್ ನಡೆದಿದೆ. ಊರಿನ ಅಭಿವೃದ್ಧಿಗೆ ಶಾಸಕರನ್ನೇ ಹುಡುಕಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ಅಧಿಕಾರ ಈ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. ಆಯೋಗವೇ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸುವ ಅಧಿಕಾರ ಹೊಂದಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿತ್ತು.
ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್ ಮೊರೆ ಹೋಗಿತ್ತು. ಆನಂತರ ಈ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಹೈಕೋರ್ಟ್‌ಗೆ ಮೂರು ವರ್ಷಗಳ ಹಿಂದೆಯೇ ಪ್ರಮಾಣಪತ್ರ ಸಲ್ಲಿಸಿತ್ತು. ಆ ನಂತರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಒಪ್ಪಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕ್ಷೇತ್ರ ಪುನರ್ ವಿಂಗಡಣೆಗೊಳಿಸಿ, ಸದಸ್ಯರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದ್ದು ಇನ್ನೂ ಮೀಸಲು ನಿಗದಿಪಡಿಸುವುದು ಬಾಕಿ ಇದೆ. ೨೦೨೬ರ ಏಪ್ರಿಲ್ ಒಳಗೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವುದಾಗಿ ಹೇಳಿದ್ದ ಸರ್ಕಾರ ಇದೀಗ ೨೦೨೭ರ ಫೆಬ್ರವರಿ ವೇಳೆಗೆ ನಡೆಸುವುದಾಗಿ ಮುಂದೂಡುತ್ತಲೇ ಇದೆ.ಜಾತಿ ಗಣತಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನೆಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಲೇ ಇದೆ. ಇದರ ಪರಿಣಾಮ ಸ್ಥಳೀಯ ಸಂಸ್ಥೆಗಳ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಚುನಾವಣೆ ಘೋಷಣೆಯಾಗುವ ದಿನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳಿಲ್ಲದಿರುವುದರಿಂದ ಕಳೆದ ಆರು ವರ್ಷಗಳಿಂದ ಅಧಿಕಾರಿಗಳದ್ದೇ ದರ್ಬಾರ್ ನಡೆದಿದೆ. ಗ್ರಾಮ ಮಟ್ಟದ ಅಭಿವೃದ್ಧಿಯನ್ನು ಕಡೆಗಣಿಸಿರುವ ಬಗ್ಗೆ ಎಲ್ಲೆಡೆ ಆರೋಪಗಳು ಕೇಳಿಬರುತ್ತಿವೆ. ಜನಪರವಾದ ಕಾಳಜಿ ಇರುವ, ಅಭಿವೃದ್ಧಿಯ ಇಚ್ಛಾಶಕ್ತಿ ಇರುವವರಿಗೆ ಚುನಾವಣೆ ಮೂಲಕ ಆಯ್ಕೆಯಾಗುವ ಅವಕಾಶವೇ ದೊರಕದಂತಾಗಿದೆ. ಸರ್ಕಾರದ ವಿಳಂಬ ಧೋರಣೆಯಿಂದ ಅವರೆಲ್ಲರೂ ಅವಕಾಶ ವಂಚಿತರಾಗಿದ್ದಾರೆ. ಇದರ ಪರಿಣಾಮ ಜಿಪಂ- ತಾಪಂ ಜನಪ್ರತಿನಿಧಿಗಳೆಲ್ಲರ ಅಧಿಕಾರವೂ ಶಾಸಕರಲ್ಲೇ ಕೇಂದ್ರೀಕೃತವಾಗಿದೆ. ಶಾಸಕರು ಮತ್ತು ಅಧಿಕಾರಿಗಳೇ ಸುಪ್ರೀಂ ಆಗಿರುವುದರಿಂದ ಕ್ಷೇತ್ರಗಳ ಅಭಿವೃದ್ಧಿ ಪಕ್ಷಾತೀತವಾಗಿ ನಡೆಯದಿರುವ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿದೆ.ಎಷ್ಟೋ ಹಳ್ಳಿಗಳಲ್ಲಿ ರಸ್ತೆ, ಚರಂಡಿಗಳು ಅಭಿವೃದ್ಧಿ ಕಾಣದೆ ನೆನಗುದಿಗೆ ಬಿದ್ದಿವೆ. ಚರಂಡಿ ಕಸವೆಲ್ಲಾ ರಸ್ತೆಯಲ್ಲೇ ಚೆಲ್ಲಾಡುತ್ತಿದ್ದರೂ, ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದರೂ ಕೇಳೋರೇ ದಿಕ್ಕಿಲ್ಲದಂತಾಗಿದೆ. ಅಧಿಕಾರ ವಿಕೇಂದ್ರೀಕರಣವಾಗದೆ ಕೇಂದ್ರೀಕರಣವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಯಾವೊಂದು ಪ್ರಗತಿದಾಯಕ ಚಟುವಟಿಕೆಗಳಿಲ್ಲದೆ ಆಡಳಿತ ಯಂತ್ರ ನಿಷ್ಕ್ರೀಯವಾಗಿರುವಂತೆ ಭಾಸವಾಗುತ್ತಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೂ ಕಳೆದೊಂದು ವರ್ಷದಿಂದ ಚುನಾವಣೆ ನಡೆದಿಲ್ಲ. ಅವುಗಳಿಗೆ ಯಾವಾಗ ಚುನಾವಣೆ ನಡೆಯುವುದೋ ಗೊತ್ತಿಲ್ಲ. ಅಲ್ಲಿಯೂ ಪುರಪ್ರತಿನಿಧಿಗಳಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗದಂತಾಗಿದೆ. ಜನರಿಂದ ಆಯ್ಕೆಯಾದವರು ಸ್ಥಳೀಯ ಜನರಿಗೆ ಹೆದರಿಯಾದರೂ ಅಭಿವೃದ್ಧಿ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿನಿಧಿಗಳೇ ಇಲ್ಲದಿದ್ದರೆ ಅಭಿವೃದ್ಧಿಗೆ, ಸಮಸ್ಯೆಗಳಿಗೆ ಪರಿಹಾರ ದೊರಕುವುದು ವಿಳಂಬವಾಗುತ್ತಿದೆ. ಪ್ರತಿಯೊಂದಕ್ಕೂ ಜನರು ಅಧಿಕಾರಿಗಳು, ಶಾಸಕರನ್ನು ಹುಡುಕಿಕೊಂಡು ಅಲೆದಾಡಲು ಸಾಧ್ಯವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಪಂಚಾಯತ್‌ರಾಜ್ ಕಾಯಿದೆ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಬೇಕು. ಕಳೆದ ೬ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಈ ವಿಳಂಬ ನೀತಿ ಸರಿಯಲ್ಲ. ಇದರಿಂದ ಗ್ರಾಮೀಣಾಭಿವೃದ್ಧಿಗೆ ಹಿನ್ನಡೆಯಾಗಲಿದೆ. ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ದೊರಕಿಸಲಾಗದು.
- ಬಿ.ಬಸವರಾಜು, ಮಾಜಿ ಅಧ್ಯಕ್ಷರು, ಜಿಲ್ಲಾ ಪರಿಷತ್ಸರ್ಕಾರಗಳು ಚುನಾವಣೆ ನಡೆಸದಿರುವುದೇ ದೊಡ್ಡ ಅಪರಾಧ. ಪ್ರಜಾಪ್ರಭುತ್ವಕ್ಕೆ ಅವಮಾನ. ಅಧಿಕಾರ ವಿಕೇಂದ್ರೀಕರಣ ಎಂದರೆ ಇದೇನಾ. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕಾರಣವೇ ಇಲ್ಲದೆ ಚುನಾವಣೆ ನಡೆಸದಿರುವುದು ಜನರಿಗೆ ಮಾಡಿರುವ ಮಹಾ ದ್ರೋಹ.
- ಎ.ಎಲ್.ಕೆಂಪೂಗೌಡ, ಮಾಜಿ ಸದಸ್ಯರು, ಜಿಪಂರಾಜ್ಯ ಸರ್ಕಾರ ತಡ ಮಾಡದೆ ಚುನಾವಣೆ ನಡೆಸಬೇಕು. ಸ್ಥಳೀಯ ಪ್ರದೇಶಾಭಿವೃದ್ಧಿಗೆ ಸರ್ಕಾರ ನೀಡುವ ಅನುದಾನಗಳು ಸಕಾಲದಲ್ಲಿ ಅಭಿವೃದ್ಧಿಗೆ ಬಳಕೆಯಾಗಬೇಕಾದರೆ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿರಬೇಕು. ಆಗ ವಾಪಸ್ ಹೋಗಲು ಅವಕಾಶವಾಗುವುದಿಲ್ಲ. ಸ್ಥಳೀಯ ಪ್ರದೇಶಗಳು ನಿರೀಕ್ಷೆಯಂತೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
-ಎಚ್.ಎಸ್.ಮಂಜು, ಮಾಜಿ ಅಧ್ಯಕ್ಷರು, ನಗರಸಭೆಆರು ವರ್ಷಗಳಿಂದ ಜಿಪಂ-ತಾಪಂ ಚುನಾವಣೆ ನಡೆದಿಲ್ಲ. ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರ ವಿಕೇಂದ್ರೀಕರಣವಾಗಿದ್ದಾಗ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಲು ಸಾಧ್ಯವಾಗುತ್ತದೆ. ಈಗ ಅಧಿಕಾರ ಒಂದೆಡೆ ಕೇಂದ್ರೀಕರಣವಾಗಿರುವುದಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.
- ಸಿ.ಅಶೋಕ್, ಮಾಜಿ ಸದಸ್ಯರು, ಜಿಪಂಆರು ವರ್ಷವಾದರೂ ಚುನಾವಣೆ ನಡೆಸುವ ಯೋಗ್ಯತೆ ಇಲ್ಲದಿದ್ದ ಮೇಲೆ ಚುನಾವಣೆ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಏಕೆ ಕಸಿದುಕೊಳ್ಳಬೇಕಿತ್ತು. ಸ್ಥಳೀಯ ಪ್ರತಿನಿಧಿಗಳಿಗೆ ಅಧಿಕಾರ ಸಿಗಬಾರದು ಎಂಬ ಒಳಸಂಚು ಇರುವಂತೆ ಕಾಣಿಸುತ್ತದೆ. ಅಧಿಕಾರವನ್ನು ವಿಕೇಂದ್ರೀಕರಣಗೊಳಿಸದೆ ಕೇಂದ್ರೀಕರಿಸಿಕೊಂಡು ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುತ್ತಿದೆ.
- ಎಂ.ವಿ.ಪ್ರಕಾಶ್, ಮಾಜಿ ಅಧ್ಯಕ್ಷರು, ನಗರಸಭೆಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಡೆಸದೆ ರಾಜ್ಯಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ಪುರಸಭೆ ಕಾಯ್ದೆ ೧೯೬೪ರ ಪ್ರಕಾರ ೭೪ರ ತಿದ್ದುಪಡಿ ನಿಯಮ ಮತ್ತು ೨೦೨೬ರ ಜೂನ್‌ನಲ್ಲಿ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರೂ ಈವರೆಗೂ ಚುನಾವಣೆ ನಡೆಸದ ಸರ್ಕಾರವನ್ನು ವಜಾಗೊಳಿಸುವುದೇ ಸೂಕ್ತ.
- ಶಿವಕುಮಾರ್, ಮಾಜಿ ಸದಸ್ಯರು, ನಗರಸಭೆ