ಸರ್ಕಾರಿ ಜಾಗದಲ್ಲಿ ಕಟ್ಟಡ ಕಟ್ಟಿ ನಷ್ಟ ತಪ್ಪಿಸಿ: ಕುಪ್ಪಿ ಮಂಜುನಾಥ್‌ ಒತ್ತಾಯ

| Published : May 31 2024, 02:17 AM IST

ಸರ್ಕಾರಿ ಜಾಗದಲ್ಲಿ ಕಟ್ಟಡ ಕಟ್ಟಿ ನಷ್ಟ ತಪ್ಪಿಸಿ: ಕುಪ್ಪಿ ಮಂಜುನಾಥ್‌ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ವರ್ತೂರು ವಲಯದಲ್ಲಿ ಖಾಸಗಿ ಕಟ್ಟಡಗಳಲ್ಲಿ ಸರ್ಕಾರಿ ಸಂಸ್ಥೆಗಳು ನಡೆಯುತ್ತಿದ್ದು ಅದನ್ನು ವರ್ಗಾವಣೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

ಕನ್ನಡಪ್ರಭ ಮಹದೇವಪುರ

ಸರ್ಕಾರಿ ಜಮೀನುಗಳನ್ನು ರಕ್ಷಿಸಿ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸ್ವಾಭಿಮಾನಿ ಬಳಗ ಕುಪ್ಪಿ ಮಂಜುನಾಥ್ ತಿಳಿಸಿದರು.

ವರ್ತೂರಿನ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷಿಯಲ್ಲಿ ಮಾತನಾಡಿದ ಅವರು, ಮಹದೇವಪುರ ವಲಯದ ವರ್ತೂರು ಗ್ರಾಮದಲ್ಲಿ ಅನೇಕ ಸರ್ಕಾರಿ ಜಾಗಗಳಿವೆ, ಆದರೆ ಉಪಯೋಗ ಆಗುತ್ತಿಲ್ಲ. ಇಲ್ಲಿನ ಕೆಇಬಿ ಕಚೇರಿ, ಬಿಬಿಎಂಪಿ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಲಕ್ಷಾಂತರ ರುಪಾಯಿ ಬಾಡಿಗೆ ನೀಡಿ ವ್ಯವಹಾರ ನಡೆಸಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ, ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಕಚೇರಿಗಳನ್ನು ನಿರ್ಮಾಣ ಮಾಡಿದರೆ ನಷ್ಟ ತಪ್ಪಲಿದೆ. ಇದರ ಬಗ್ಗೆ ಸಾಕಷ್ಟು ಬಾರಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಪಾಳು ಬಿದ್ದಿರುವ ಸರ್ಕಾರಿ ಜಮೀನುಗಳಲ್ಲಿ ಸರ್ಕಾರದ ಸಂಸ್ಥೆಗಳನ್ನು ನಿರ್ಮಿಸದೇ ಸರ್ಕಾರದ ಹಣವನ್ನು ಖಾಸಗಿಯವರಿಗೆ ನೀಡಿ ಪೋಲು ಮಾಡುತ್ತಿರುವ ಕ್ರಮ ನಿಜಕ್ಕೂ ಖಂಡನೀಯ ಎಂದರು.

ಇನ್ನು ವರ್ತೂರು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಗೊಳಿಸುತ್ತಿರುವ ಕ್ರಮ ಸರಿಯಲ್ಲ, ಹೊಸ ನ್ಯಾಯಬೆಲೆ ಅಂಗಡಿಗೆ ನಾಲ್ಕೈದು ಕಿ.ಮೀ. ದೂರ ಸಂಚರಿಸಬೇಕಿದೆ, ಇದರಿಂದ ಪಡಿತರ ಪಡೆಯಲು ನೂರಾರು ರೂಪಾಯಿಗಳನ್ನು ಆಟೋಗಳಿಗೆ ನೀಡಬೇಕಿದೆ. ಇದರಿಂದ ಬಡ ಮದ್ಯಮ ವರ್ಗದ ಜನರಿಗೆ ಅನಾನುಕೂಲವಾಗಲಿದ್ದು, ಅಂಗಡಿಯ ಸ್ಥಳಾಂತರ ಮಾಡದಂತೆ ಮನವಿ ಮಾಡಿದರು.

ಒಂದೆಡೆ ಇರುವ ಸರ್ಕಾರಿ ಜಾಗಗಳು ಬಳಕೆಯಾಗುತ್ತಿಲ್ಲ, ಮತ್ತೊಂದೆಡೆ ರಾಜಾರೋಷವಾಗಿ ಸರ್ಕಾರಿ ಜಮೀನುಗಳು ಕಬಳಿಕೆಯಾಗುತ್ತಿವೆ. ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ, ಸರ್ಕಾರಿ ಜಮೀನುಗಳ ಉಳಿವಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸ್ಥಳೀಯ ಮುಖಂಡರಾದ ಕೃಷ್ಣಪ್ಪ, ವಿಜಯ್ ಕುಮಾರ್, ವರಪುರಿ ನಾರಾಯಣಸ್ವಾಮಿ, ಶಿವಶಂಕರ್ ಇದ್ದರು.