ಸಾರಾಂಶ
ಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಬಯಲು ಸೀಮೆ ಜನರ ದಶಕಗಳ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಘಟಕದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಯ ಮಡಿಲಿಗೆ ಹೊಸ ವರ್ಷಕ್ಕೆ ಹೊಸದೊಂದು ಗಿಫ್ಟ್ ದೊರೆತಂತಾಗಿದೆ.ತಾಲೂಕಿನ ರಾಯಾಪುರ ಗ್ರಾಮದ ಅನತಿದೂರದಲ್ಲಿ 150 ಎ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತೆ ಸರ್ಕಾರಿ ಬಸ್ ಘಟಕದ ಬೃಹತ್ ಕಟ್ಟಡ ತಲೆ ಎತ್ತಿ ನಿಲ್ಲುವ ಮೂಲಕ ಕಳಸವಿಟ್ಟಂತೆ ಕಾಣುವ ಬಸ್ ಘಟಕದಿಂದ ತಾಲೂಕಿನ ಅಭಿವೃದ್ಧಿಗೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ.
2022-23ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಆರಂಭದಲ್ಲಿಯೇ ಪಟ್ಟಣದಲ್ಲಿ ಸರ್ಕಾರಿ ಸಾರಿಗೆ ಬಸ್ ನಿಲ್ದಾಣ ಹಾಗೂ 8 ಕೋಟಿ ರು. ವೆಚ್ಚದ ಬಸ್ ಘಟಕ ಮುಂಜೂರು ಮಾಡಿದ್ದರು. 3 ಕೋಟಿಗೂ ಅಧಿಕ ವೆಚ್ಚದಲ್ಲಿ ಬಸ್ ನಿಲ್ದಾಣ ಮಂಜೂರು ಮಾಡಿದ್ದರು. ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ರಾಯಪುರ ಬಳಿಯ ರೇಷ್ಮೆ ಫಾರಂ ಬಳಿಯಲ್ಲಿ ಬಸ್ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಿ ಕಾಮಗಾರಿಗೆ ಶಂಕಸ್ಥಾಪನೆ ನೆರವೇರಿಸಿದ್ದರು. ಅಲ್ಲದೇ ಪಟ್ಟಣದ ಹಳೇ ತಾಲೂಕು ಕಚೇರಿಯ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕೂಡ ಇದೇ ವೇಳೆ ಅಡಿಗಲ್ಲು ಹಾಕಿದ್ದರು. ಇದೀಗ ಬಸ್ ಡಿಪೋ ಸುಣ್ಣಬಣ್ಣ ಬಳಿದುಕೊಂಡು ನವ ವಧುವಿನಂತೆ ಉದ್ಘಾಟನೆಗೆ ಸಿದ್ಧಗೊಂಡಿದ್ದರೆ, ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಮುಕ್ತಾಯದ ಹಂತ ತಲುಪಿದೆ.ಬಸ್ ಘಟಕಕ್ಕೆ ಹೊಸ ಸಿಬ್ಬಂದಿ ನೇಮಕವಾದಲ್ಲಿ ಹೊಸ ವರ್ಷದ ಆರಂಭದಲ್ಲಿಯೇ ಸಾರ್ವಜನಿಕ ಸೇವೆಗೆ ಬಳಕೆಯಾಗಲಿದೆ. ಬಸ್ ನಿಲ್ದಾಣವೂ ಸಕಾಲಕ್ಕೆ ಪೂರ್ಣಗೊಂಡಲ್ಲಿ ಈ ಭಾಗದ ಜನರಿಗೆ ದಶಕಗಳಿಂದ ಕಾಡುತ್ತಿದ್ದ ಸಾರಿಗೆ ಸಮಸ್ಯೆ ನೀಗಲಿದೆ ಎನ್ನುವುದು ಈ ಭಾಗದ ಜನರಲ್ಲಿ ಕೇಳಿ ಬರುತ್ತಿದೆ.
ಬಸ್ ಘಟಕದಲ್ಲಿ ಗ್ಯಾರೇಜ್. ಬಸ್ ತೊಳೆಯುವುದು, ವಿಶ್ರಾಂತಿ ಗೃಹ, ಕಚೇರಿ, ವಾಹನ ನಿಲುಗಡೆ ಶೆಡ್, ನಾಮ ಫಲಕ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಉಳಿದಂತೆ ಫ್ಲಾಟ್‌ಫಾರಂ ಮತ್ತು ಸಿಸಿ ರಸ್ತೆ ನಿರ್ಮಾಣ ಬಾಕಿ ಇದ್ದು, ನಾಲ್ಕು ಕೋಟಿ ಅನುದಾನ ಬಂದಲ್ಲಿ ಘಟಕದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.ಡಿಪೋ ನಿರ್ಮಾಣದಿಂದ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆಗೆ ಮುಕ್ತಿ:ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕು ಎರಡು ಹೋಬಳಿಗಳನ್ನು ಹೊಂದಿದೆ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸಾರಿಗೆ ಸಮಸ್ಯೆ ಹೆಚ್ಚು ಕಾಡುತ್ತಿದೆ. ವಿಪರ್ಯಾಸವೆಂದರೆ ರಾಷ್ಟ್ರೀಯ ಹೆದ್ದಾರಿ ತಾಲೂಕು ಕೇಂದ್ರ ಸ್ಥಾನದಿಂದ ಕೂಗಳತೆ ದೂರದಲ್ಲಿದ್ದರೂ, ಹೆದ್ದಾರಿಯಲ್ಲಿ ನಿತ್ಯ ಸಂಚರಿಸುವ ನೂರಾರು ಸಾರಿಗೆ ಬಸ್‌ಗಳು ಪಟ್ಟಣದೊಳಗೆ ಬಾರದೆ ಇರುವುದರಿಂದ ಸಾರಿಗೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ದೂರದ ಊರುಗಳಿಗೆ ಚಿಕಿತ್ಸೆಗೆ ತೆರಳುವ ರೋಗಿಗಳು ಇಂದಿಗೂ ಲಗೇಜ್ ವಾಹನಗಳನ್ನೇ ಪ್ರಯಾಣಕ್ಕೆ ಪ್ರಮುಖ ವಾಹನವನ್ನಾಗಿಸಿಕೊಂಡಿದ್ದಾರೆ. ಇದೀಗ ತಾಲೂಕಿನಲ್ಲಿ ಬಸ್ ಡಿಪೋ ಮತ್ತು ಬಸ್ ನಿಲ್ದಾಣ ನಿರ್ಮಾಣದಿಂದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಇಂಬು ನೀಡಲಿದೆ ಎನ್ನುವುದು ಇಲ್ಲಿನ ಜನತೆಯ ಮಾತಾಗಿದೆ.
ಬಸ್ ಘಟಕ ಮತ್ತು ಬಸ್ ನಿಲ್ದಾಣದಿಂದ ಈ ಭಾಗದ ಜನರಿಗೆ ಬಹುದಿನದಿಂದ ಕಾಡುತ್ತಿರುವ ಸಾರಿಗೆ ಸಮಸ್ಯೆಗೆ ಮುಕ್ತಿ ಸಿಗಲಿದೆ. ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ಉಪಕಾರಿಯಾಗಲಿದೆ. ಆದಷ್ಟು ಬೇಗ ಎರಡನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ನೀಡಬೇಕು.- ಜಿ.ಪಿ.ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ರಾಯಪುರ.ಅಭಿವೃದ್ಧಿ ವಂಚಿತ ಗಡಿನಾಡು ಮೊಳಕಾಲ್ಮುರಿಗೆ ಸಾರಿಗೆ ವ್ಯವಸ್ಥೆ ಗಗನ ಕುಸುಮವಾಗಿತ್ತು. ಸ್ವಾತಂತ್ರ್ಯ ನಂತರ ಏಳು ದಶಕಗಳು ಕಳೆದ ನಂತರ ತಾಲೂಕು ಸರ್ಕಾರಿ ಬಸ್ ನಿಲ್ದಾಣ ಮತ್ತು ಡಿಪೋ ಕಾಣುತ್ತಿರುವುದು ಸಂತಸ ತಂದಿದೆ.
- ಡಾ.ಮಂಜುನಾಥ. ಬಿಜಿಪಿ ಮಂಡಲ ಅಧ್ಯಕ್ಷ.