ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳ ಪೈಕಿ ಅಭಿವೃದ್ಧಿ ಹೊಂದದ ತಾಲೂಕುಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ತಾಲೂಕಿನ ದೇವಸಮುದ್ರ ಗ್ರಾಮದ ಚೌಕಿ ಮಠದಲ್ಲಿ ಮಂಗಳವಾರ ತಳಕು ಮತ್ತು ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳಿಗೆ ಕಳೆದ 30 ವರ್ಷಗಳಲ್ಲಿ ಸರ್ಕಾರ ನೀಡಿರುವ ಅನುದಾನ ಹಾಗೂ ಎಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ ಎನ್ನುವ ಸಮಗ್ರ ವರದಿಯನ್ನು ಪಡೆದು ಅದರಲ್ಲಿ ಅಭಿವೃದ್ಧಿ ಹೊಂದದ ತಾಲೂಕುಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಆ ಪ್ರಕಾರವಾಗಿ ಮೊಳಕಾಲ್ಮುರು ಅಭಿವೃದ್ಧಿಯಾಗಲಿದೆ ಎಂದರು.ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಾಗಲೇ 2,600 ಕೋಟಿ ಅನುದಾನ ನೀಡಿದೆ. ಜಿಲ್ಲೆಯನ್ನು ಸಮಗ್ರ ನಿರಾವರಿಯನ್ನಾಗಿಸಲು ಸರ್ಕಾರಕ್ಕೆ ಬದ್ಧತೆ ಇದೆ. ಮೊಳಕಾಲ್ಮುರು ತಾಲೂಕಿನ 20 ಕೆರೆಗಳಿಗೂ ನೀರು ತುಂಬಿಸಲಾಗುವುದು ಬರುವ ಅಕ್ಟೋಬರ್ ನಂತರ ಎಲ್ಲಾ ಕೆರೆಗಳಿಗೆ ನೀರು ಬರಲಿದೆ ಎಂದರು.
ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಪ್ರಥಮ ಸಚಿವ ಸಂಪುಟದಲ್ಲಿಯೇ 5 ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ನುಡಿದಂತೆ ನಡೆದುಕೊಂಡಿದೆ. ಆದರೆ ಬಿಜೆಪಿಯವರು ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಗ್ಯಾಸ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಬಳಿ ಹಣ ಇಲ್ಲಾ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಕಾರ್ಯಕರ್ತರು ಎದೆ ಗುಂದಬೇಡಿ. ಜಿಲ್ಲಾ ಮತ್ತು ತಾಪಂ ಚುನಾವಣೆ ಹತ್ತಿರವಾಗುತ್ತಿದೆ. ಸಂಘಟಿತರಾಗಿ ಪಕ್ಷವನ್ನು ಬಲಪಡಿಸುವತ್ತ ಮುಂದಾಗಬೇಕು ಎಂದರು.ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕೆಲ ಕಾರಣಗಳಿಂದ ಕಾರ್ಯಕರ್ತರಿಗೆ ನ್ಯಾಯ ಪೂರ್ಣ ಪ್ರಮಾಣದಲ್ಲಿ ಒದಗಿಸಲು ಆಗಿಲ್ಲ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಬರುವ ದಿನಗಳಲ್ಲಿ ಉತ್ತಮ ಅವಕಾಶ ನಿಮಗೆ ದೊರೆಯಲಿದೆ. ಯಾವಾಗ ಬೇಕಾದರೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬರಬಹುದು ಕಾರ್ಯಕರ್ತರು ಚುನಾವಣಾ ಗೆಲುವಿಗೆ ಪೂರಕವಾಗಿ ಸಂಘಟಿತರಾಗಬೇಕು ಎಂದು ಹೇಳಿದರು.ವೈನ್ ಬೋರ್ಡ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿ, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದ್ದಾರೆ. ಸುಳ್ಳು ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೇಲ್ಮನೆ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ತಾಲೂಕು ಅಧ್ಯಕ್ಷ ಎನ್.ವೈ.ಚೇತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಉಲ್ಲಾ, ತಳಕು ಬ್ಲಾಕ್ ಅಧ್ಯಕ್ಷ ನಾಗೇಶ್ ರೆಡ್ಡಿ, ಪ್ರದಾನ ಕಾರ್ಯದರ್ಶಿ ಬಿ.ಟಿ.ನಾಗ ಭೂಷಣ, ಯುವ ಮುಖಂಡ ಕುಮಾರ ಗೌಡ, ಹಿರಿಯ ಮುಖಂಡರಾದ ಪಟೇಲ್ ಪಾಪನಾಯಕ, ಬಾಲರಾಜ್, ಸುಬಾನ್ ಸಾಬ್, ಎಂ.ಮಂಜುನಾಥ, ಆರ್.ಎಂ.ಅಶೋಕ್, ಅಬ್ದುಲ್, ಖಾದರ್, ಪ್ರಭುಸ್ವಾಮಿ, ಎಸ್ ಟಿ.ಪಾಲಯ್ಯ, ಜಿ.ಪ್ರಕಾಶ್ ಇದ್ದರು.ತಾಲೂಕಿನ ಅಭಿವೃದ್ಧಿ ಕಡೆ ಗಮನ: ಗೋಪಾಲಕೃಷ್ಣ
ನುಂಕಪ್ಪನ ಮೇಲೆ, ಮಾರಮ್ಮನ ಮೇಲೆ ಆಣೆ ಮಾಡಿದವರು ಕ್ಷೇತ್ರ ಬಿಟ್ಟು ಹೊರ ಹೋಗಿದ್ದಾರೆ. ಇನ್ನು ಮೀಸೆ ತಿರುವಿದ ಕೆಲವರು ಮೂಲೆ ಸೇರಿದ್ದಾರೆ ನನ್ನ ಮೇಲೆ ಎಷ್ಟೇ ಆರೋಪಗಳು ಬಂದರೂ ತಾಲೂಕಿನ ಅಭಿವೃದ್ಧಿಯ ಕಡೆ ಗಮನ ಹರಿಸುತ್ತೇನೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೆಲವರು ನನ್ನ ಮೇಲೆ ವೃತಾ ಆರೋಪಗಳನ್ನು ಮಾಡುತ್ತಿದ್ದಾರೆ. ಬಾಯಿ ಚಪಲಕ್ಕೆ ಮಾತಾಡುವವರ ಬಗ್ಗೆ ಗಮನ ಹರಿಸಿಲ್ಲ. ನಾನು ಕ್ಷೇತ್ರದಿಂದ ಹೊರಗಿದ್ದಾಗ ಇಲ್ಲೇ ಇರುತ್ತೇವೆಂದು ಆಣೆ, ಪ್ರಮಾಣ ಮಾಡಿದವರು ಹೊರ ಹೋಗಿದ್ದಾರೆ. ಅವರ ಆಡಳಿತದಲ್ಲಿ ಪಿಎಗಳೇ ಎಂಎಲ್‌ಎಗಳಂತೆ ಆಡಳಿತ ನಡೆಸಿದ್ದಾರೆ. ಇನ್ನು ಮೀಸೆ ತಿರುವಿದವರನ್ನು ನೋಡಿದ್ದೇನೆ. ನನಗೆ ಅಬ್ಬರದ ಪ್ರಚಾರ ಅಗತ್ಯ ಇಲ್ಲ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಹರಿಸುತ್ತೇನೆ ಎಂದು ಇದೆ ಸಂದರ್ಭ ಹೇಳಿದರು.