ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಭಾನುವಾರ ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಭೀಮಾ ನದಿ ಪ್ರವಾಹದಿಂದಾದ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.ಬೆಳಿಗ್ಗೆ ಅಲ್ಲಿಪುರ ತಾಂಡಾ, ಅಲ್ಲಿಪುರಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಭತ್ತ, ಇತರೆ ಬೆಳೆ ಪರಿಶೀಲಿಸಿದರು. ನಂತರ ನಗರದ ಡಾನ್ ಬಾಸ್ಕೋ ಶಾಲೆ ಹತ್ತಿರದ ಸೇತುವೆ ತುಂಬಿ ಹರಿಯುತ್ತಿರುವ ಬಗ್ಗೆ ಪರಿಶೀಲನೆಯನ್ನು ನಡೆಸಿದರು. ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿ, ಅತಿವೃಷ್ಟಿ, ಭೀಮಾ ಹಾಗೂ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ರೈತರ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಹಿಂದಿನ ಬೆಳೆ ಸಮೀಕ್ಷೆಯನ್ವಯ 25- ರಿಂದ 27 ಸಾವಿರ ಹೆಕ್ಟೇರ್ ಬೆಳೆನಾಶವಾದ ಬಗ್ಗೆ ವರದಿಯಾಗಿತ್ತು. ಈಗ ಸುಮಾರು 1.11 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ನಾಶವಾದ ಬಗ್ಗೆ ಅಂದಾಜಿಸಲಾಗಿದೆ. ಆದರೆ, ಈ ಕುರಿತು ಪುನರ್ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ಬೆಳೆನಾಶ ವರದಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಎಲ್ಲ ಪರಿಸ್ಥಿತಿಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮೊಬೈಲ್ ಕರೆ ಮಾಡಿ ಗಮನಕ್ಕೆ ತರಲಾಗಿದೆ,ಕಂದಾಯ ಸಚಿವರು ಕೂಡ ಜಿಲ್ಲೆಗೆ ಭೇಟಿ ನೀಡುವರು. ಜಿಲ್ಲೆಯ ಜನತೆಯೊಂದಿಗೆ ಪಕ್ಷಭೇದ ಮರೆತು ನಾವಿದ್ದೇವೆ. ವಿವಿಧ ಪಕ್ಷ, ಸಂಘಟನೆ, ಜನರು ಕೂಡ ಪರಸ್ಪರ ಸಹಾಯಕ್ಕೆ ಬರುತ್ತಿದ್ದಾರೆ ಎಂದರು.
ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹತ್ತಿ, ಭತ್ತ, ಹೆಸರು, ತೊಗರಿಬೇಳೆ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಬೆಳೆನಾಶ ಅನುಭವಿಸಿರುವ ಪ್ರತಿ ರೈತರ ಜಮೀನಿನ ಪುನರ್ ಸಮೀಕ್ಷೆ ಆಗಲಿದೆ. ಜಿಲ್ಲಾಡಳಿತ ಕೂಡ ಈ ಹಿಂದೆ ಕೃಷ್ಣ ಹಾಗೂ ಭೀಮಾ ನದಿ ಪ್ರವಾಹ ನಿರ್ವಹಿಸಿದ ಅನುಭವ ಹೊಂದಿದ್ದು, ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗುರುಮಠಕಲ್, ಯಾದಗಿರಿ ಹಾಗೂ ವಡಗೇರಾ ತೀವ್ರ ತೊಂದರೆಗೆ ಒಳಗಾಗಿದ್ದು, ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ವಿವಿಧೆಡೆ ಪರಿಶೀಲನೆ: ಸಚಿವ ದರ್ಶನಾಪುರ ನಂತರ, ಭೀಮಾ ನದಿ ಬ್ರಿಡ್ಜ್ ಕಂ ಬ್ಯಾರೇಜ್, ಮುಳುಗಡೆಯಾದ ಜಲಶುದ್ಧೀಕರಣ ಘಟಕ, ಹಾನಿಯಾದ ಭತ್ತದ ಬೆಳೆ, ಹಾಲಗೇರಾ ಕ್ರಾಸ್, ಗೋಡಿಹಾಳ, ಕುಮನೂರ, ಹುರಸಗುಂಡಗಿ ಹಾಗೂ ರೋಜಾ ಶಿರವಾಳದಲ್ಲಿ ಕಾಳಜಿ ಕೇಂದ್ರಗಳಿಗೆ, ಮನೆಗಳಿಗೆ ಭೇಟಿ ನೀಡಿ ನಾಗರಿಕರನ್ನು ಭೇಟಿ ಮಾಡಿದರು. ನಾಯ್ಕಲ್, ಅಣಬಿಗಳಲ್ಲಿ ಬೆಳೆಹಾನಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಡಿಸಿ ಹರ್ಷಲ್ ಭೋಯರ್, ಎಸ್ಪಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಸ್ಯಾಮ್ಸನ್ ಮಾಳಿಕೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.