ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿಗೆ ಹೆಚ್ಚು ಆದ್ಯತೆ ಕೊಟ್ಟು ಕರ್ನಾಟಕವನ್ನು ಆರೋಗ್ಯವಂತ ರಾಜ್ಯವನ್ನಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ತಿಳಿಸಿದರು.ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿಜಿಎಸ್ ಆಡಿಟೋರಿಯಂನಲ್ಲಿ ನಡೆದ ಪ್ರಥಮ ವರ್ಷದ ಎಂಬಿಬಿಎಸ್ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಪರಿಶ್ರಮದ ಫಲವಾಗಿ ಗ್ರಾಮೀಣ ಭಾಗದಲ್ಲಿ ಸ್ಥಾಪಿತಗೊಂಡಿರುವ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಡಾ.ನಿರ್ಮಲಾನಂದನಾಥ ಶ್ರೀಗಳು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಮಗೆ ಸಿಕ್ಕಿರುವ ಶ್ರೇಷ್ಟ ಅವಕಾಶ. ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಶ್ರೀಮಠ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಅಗತ್ಯವಿರುವವರಿಗೆ ಕೈಗೆಟಕುವ ದರದಲ್ಲಿ ಅಂಗಾಂಗ ಕಸಿ ಸೇವೆಯ ಚಿಕಿತ್ಸೆ ಸಿಗಬೇಕು ಎನ್ನುವುದು ಸರ್ಕಾರದ ಮುಖ್ಯ ಗುರಿ. ಹಾಗಾಗಿ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಅಂಗಾಂಗ ಕಸಿ ಸಂಸ್ಥೆ ಮೂಲಕ ರಾಜ್ಯದಲ್ಲಿ ಆರೋಗ್ಯ ಸಂಬಂಧಿತ ಹಲವು ಯೋಜನೆ ಜಾರಿಗೊಳಿಸಿ, ಸರ್ಕಾರಿ ಸಂಸ್ಥೆಯಿಂದಲೇ ಅಂಗಾಂಗ ಕಸಿ ಮಾಡಲಾಗುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಮಾಡಿಸಿದರೆ ಲಕ್ಷಾಂತರ ರು. ವೆಚ್ಚ ಮಾಡಬೇಕಾಗುತ್ತದೆ. ಅತ್ಯಾಧುನಿಕ ವೈದ್ಯಕೀಯ ಸಾಧನಗಳೊಂದಿಗೆ ಮಿತವ್ಯಯವಾಗಿ ಅಂಗಾಂಗ ಕಸಿ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ಬೆಂಗಳೂರಿನಲ್ಲಿ ಹತ್ತು ಮಹಡಿಯ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ ಎಂದರು.ವೈದ್ಯಕೀಯ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಹಾಗೂ ಕರುಣೆ ಹೆಚ್ಚಾಗಿರಬೇಕು. ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮನಃಸ್ಥಿತಿ ಇರಬೇಕು. ನಿಮ್ಮ ಕೈಗುಣ ಚೆನ್ನಾಗಿದ್ದರೆ ರೋಗಿಗಳಿಗೆ ಅರ್ಧ ಕಾಯಿಲೆ ವಾಸಿಯಾದಂತೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮುಗಿದ ನಂತರ ವೈದ್ಯರಾಗಿ ಜನರಿಗೆ ಆರೋಗ್ಯ ಸೇವೆ ನೀಡಬೇಕೆಂದು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಪುಣ್ಯತಾಣದಲ್ಲಿ ಸ್ಥಾಪಿಸಿರುವ ಈ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸುರಕ್ಷಿತ ಜಾಗ. ವಿದ್ಯೆ ಕಲಿಯುತ್ತಿರುವ ಮಕ್ಕಳು ಅದೃಷ್ಟಶಾಲಿಗಳು. ಇಲ್ಲಿಂದ ಆಚೆ ಹೋಗಿ ಪಡೆಯುವುದು ಏನೂ ಇಲ್ಲ ಎಲ್ಲವನ್ನೂ ಈ ಕ್ಯಾಂಪಸ್‌ನಲ್ಲಿಯೇ ಕಲ್ಪಿಸಲಾಗಿದೆ ಎಂದರು.ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ವೈದ್ಯರು ಮತ್ತು ವೈದ್ಯಕೀಯ ಸೇವೆ, ಮನುಷ್ಯ ಲೋಕವನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಯಾವ ಕಲ್ಪಿತ ವಸ್ತುಗಳು ಸೃಷ್ಟಿಯಲ್ಲಿ ಇಲ್ಲವೇ ಇಲ್ಲ. ಮೋಕ್ಷವನ್ನು ಪಡೆಯಲು ಬಹುಮುಖ್ಯವಾಗಿರುವುದು ದೇಹ. ಈ ದೇಹ ಉತ್ತಮವಾಗಿದ್ದರೆ ಮನಸ್ಸು ಮತ್ತು ಸಾಧನೆ ಚೆನ್ನಾಗಿರುತ್ತದೆ ಎಂದರು.
ದೇವರ ಆಶೀರ್ವಾದ ಹಾಗೂ ತಂದೆ ತಾಯಿ ಮೂಲಕ ಈ ಜಗತ್ತಿಗೆ ಬಂದಿರುವ ನಮಗೆ ಈ ದೇಹ ಕೆಟ್ಟಾಗ ಅದನ್ನು ಸರಿಮಾಡುವ ಶಕ್ತಿಯಿರುವುದು ವೈದ್ಯರಿಗೆ ಮಾತ್ರ. ಅದ್ಕಕಾಗಿಯೇ ವೈದ್ಯೋನಾರಾಯಣೋ ಹರಿ ಎನ್ನುತ್ತಾರೆ. ಇಂತಹ ಪವಿತ್ರವಾದ ವೈದ್ಯಕೀಯ ಕ್ಷೇತ್ರ ನಿಮ್ಮದು. ಯಾವ ಆಸ್ಪತ್ರೆಯಲ್ಲಿ ಒಳ್ಳೆಯ ವೈದ್ಯರಿದ್ದು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುತ್ತದೆಯೋ, ನಗುಮುಖದಿಂದ ರೋಗಿಗಳಲ್ಲಿರುವ ನೋವನ್ನು ಮರೆಸುವ ವೈದ್ಯರ ಬಳಿ ಹೋಗಲು ರೋಗಿಗಳು ಇಷ್ಟಪಡುತ್ತಾರೆ. ಹಾಗಾಗಿ ಕಲಿಯುವ ಸಂದರ್ಭದಲ್ಲಿ ಶ್ರದ್ಧೆ ಏಕಾಗ್ರತೆಯಿಂದ ಕಲಿತು ವೈದ್ಯ ವೃತ್ತಿ ಆರಂಭಿಸಿದರೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತದೆ ಎಂದರು.ಸಮಾರಂಭದಲ್ಲಿ ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ, ಡಾ.ಅರುಂದತಿ ಚಂದ್ರಶೇಖರ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎನ್.ಎಸ್.ಶ್ರೀಧರ, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪ್ರಾಂಶುಪಾಲ ಡಾ.ಎಂ.ಜಿ. ಶಿವರಾಮು, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))