ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಟಿ.ರಘುಮೂರ್ತಿ, ಎಂಎಲ್‌ಸಿ ಕೆ.ಎಸ್.ನವೀನ್ ಭೂಮಿಪೂಜೆ ನೆರವೇರಿಸಿದರು.

ಬುಡ್ನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಭೂಮಿಪೂಜೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಮಟ್ಟದಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಗ್ರಾಪಂ ಕಟ್ಟಡವೂ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಹಣ ನೀಡಿದೆ. ಸಾರ್ವಜನಿಕರ ಹಿತವನ್ನು ಕಾಪಾಡುವಲ್ಲಿ ಸರ್ಕಾರ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಭಾನುವಾರ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ಮೇಲ್ಮನೆ ಸದಸ್ಯರ ಅನುದಾನ, ಗ್ರಾಮ ಪಂಚಾಯಿತಿ ಒಗ್ಗೂಡಿಸುವಿಕೆಯಡಿ ಸುಮಾರು 84 ಲಕ್ಷ ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದ ಮೇಲ್ಮನೆ ಸದಸ್ಯರಾದ ಕೆ.ಎಸ್.ನವೀನ್ ಸಹ ಪಂಚಾಯಿತಿ ಮಟ್ಟದ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಅವರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಿದ್ದಾರೆ.

10 ಲಕ್ಷ ವೆಚ್ಚದಲ್ಲಿ ಪೀರಲದೇವರ ಗುಡಿ ನಿರ್ಮಾಣ ಭೂಮಿಪೂಜೆ, 10 ಲಕ್ಷ ವೆಚ್ಚದಲ್ಲಿ ಮಾರಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಲಾಯಿತು.

ಗ್ರಾಮದ ಜನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದೆ ಬರಬೇಕೆಂದರು.

ಮೇಲ್ಮನೆ ಸದಸ್ಯ ಕೆ.ಎಸ್.ನವೀನ್‌ ಮಾತನಾಡಿ, ಶಾಸಕ ಟಿ.ರಘುಮೂರ್ತಿ ತಮ್ಮ ಅಭಿವೃದ್ಧಿ ಕಾಮಗಾರಿಗಳಿಂದಲೇ ಜನಮನ್ನಣೆ ಗಳಿಸಿದವರು.

ನಾನು ಸಹ ಈ ಭಾಗದ ವಿಧಾನ ಪರಿಷತ್ ಸದಸ್ಯನಾಗಿ ಅಗತ್ಯವಿರುಕಡೆ ಅನುದಾನವನ್ನು ನೀಡುತ್ತಿದ್ದೇನೆ. ಗ್ರಾಪಂ ಕಟ್ಟಡಕ್ಕೆ ಅನುದಾನ ನೀಡಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನತೆ ಇದ್ದರೂ ಅಭಿವೃದ್ಧಿ ಕಾಮಗಾರಿ ಜಾರಿಗೊಳಿಸುವಲ್ಲಿ ಯಾವುದೇ ಭಿನ್ನಮತವಿಲ್ಲ. ರಘುಮೂರ್ತಿಯವರ ನಿರಂತರ ಅಭಿವೃದ್ಧಿಯನ್ನು ನಾನು ಶ್ಲಾಘೀಸುತ್ತಲೇ ಬಂದಿದ್ದೇನೆ ಎಂದರು.

ತಾಪಂ ಇಒ ಎಚ್.ಶಶಿಧರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರ ಎಂಜಿನಿಯರ್ ಸಿದ್ದೇಶ್, ಗ್ರಾಪಂ ಲಕ್ಷ್ಮಕ್ಕ, ಉಪಾಧ್ಯಕ್ಷ ರಾಮಣ್ಣ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ಬಾಳೆಮಂಡಿ ರಾಮದಾಸ್, ತಾಪಂ ಮಾಜಿ ಸದಸ್ಯ ಕಳ್ಳಿನಿಂಗಯ್ಯ, ದೊಡ್ಡರಂಗಪ್ಪ, ಬೋರಯ್ಯ, ಶ್ರೀನಿವಾಸ್, ತಿಪ್ಪೇಸ್ವಾಮಿ, ಸುಮಲತಾ, ಜಗದೀಶ್‌ ನಾಯ್ಕ, ಕೃಷ್ಣನಾಯ್ಕ, ರಂಗಸ್ವಾಮಿ, ಪಿಡಿಒ ಮಲ್ಲೇಶಪ್ಪ ಮುಂತಾದವರು ಉಪಸ್ಥಿತರಿದ್ದರು.