ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧ : ತಮ್ಮಯ್ಯ

| Published : Jul 02 2025, 12:19 AM IST

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧ : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬಡವರು, ಶೋಷಿತರಿಗೆ ಶಿಕ್ಷಣ, ಆರೋಗ್ಯ ಮತ್ತು ಬದುಕು ಈ ಮೂರು ಅಂಶಗಳಿಗೆ ಒತ್ತು ನೀಡಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಬಸವನಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಸೈನ್ಸ್‌ ವಿಭಾಗ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಡವರು, ಶೋಷಿತರಿಗೆ ಶಿಕ್ಷಣ, ಆರೋಗ್ಯ ಮತ್ತು ಬದುಕು ಈ ಮೂರು ಅಂಶಗಳಿಗೆ ಒತ್ತು ನೀಡಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಹಾಗೂ ಕಂಪ್ಯೂಟರ್‌ ಸೈನ್ಸ್‌ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ, ಅದೇ ರೀತಿ ಆರೋಗ್ಯ ಸೇವೆಗೆ ಉತ್ತಮ ಸ್ಪಂದನೆ ನೀಡಿದ್ದು, ನಗರದಲ್ಲಿ ನಾಲ್ಕು ಭಾಗದಲ್ಲಿ ನಮ್ಮ ಕ್ಲಿನಿಕ್ ತೆರೆದಿದೆ. ನಾಗರಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ಲಿನಿಕ್‌ನಲ್ಲಿ ಓರ್ವ ವೈದ್ಯ, ಶುಶ್ರೂಷಕಿ ಹಾಗೂ ಸಿಬಂದಿಯನ್ನು ನೇಮಕ ಮಾಡಿದೆ ಎಂದು ತಿಳಿಸಿದರು.

ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಯರಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ರೀತಿ ಸೌಲಭ್ಯಗಳ ಜೊತೆಗೆ ಇಂದು ಕಂಪ್ಯೂಟರ್ ಸೈನ್ಸ್‌ ವಿಭಾಗ ಉದ್ಘಾಟನೆಯಾಗಿರುವುದು ಶಿಕ್ಷಣಕ್ಕೆ ಉಪಯುಕ್ತವಾಗಿದೆ ಎಂದರು.ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿದೆ ಎಂದು ಹೇಳಿದರು.ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 30 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಹೊಸ ಹೆಜ್ಜೆಯ ಯೋಜನೆ ಕಾರಣ ಎಂದರು.ಉತ್ತಮ ಶಿಕ್ಷಣ ಪಡೆದ ಮೆರಿಟ್ ಆಧಾರದಲ್ಲಿ ಶಿಕ್ಷಕರು, ಉಪನ್ಯಾಸಕರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ನೇಮಕ ವಾಗುವುದರಿಂದ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿದೆ ಎಂಬುದನ್ನು ಪೋಷಕರು ಮನಗಾಣಬೇಕಾಗಿದೆ ಎಂದು ಹೇಳಿದರು.ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ನೀಡಿರುವ ಸಂವಿಧಾನದ ಪೀಠಿಕೆ ಓದಿಸಿ ಒಂದು ಪುಟ ವನ್ನಾದರೂ ವಿದ್ಯಾರ್ಥಿಗಳಿಂದ ಪಠಣ ಮಾಡುವ ಪರಿಪಾಠವನ್ನು ಸರ್ಕಾರಿ ಶಾಲೆಯಲ್ಲಿ ಆರಂಭಿಸುವಂತೆ ಶಿಕ್ಷಕ ವೃಂದಕ್ಕೆ ಸಲಹೆ ನೀಡಿದರು.12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಒಳಿತಿಗೆ ಹಲವಾರು ರೀತಿ ವಚನಗಳ ಮೂಲಕ ಕ್ರಾಂತಿ ಮಾಡಿದ ಮಹಾನ್ ಪುರುಷ ಎಂದು ಬಣ್ಣಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿನಿಯರು ಈಗಿನಿಂದಲೇ ಶ್ರಮವಹಿಸಿ ಅಧ್ಯಯನಶೀಲರಾಗಿ ಉತ್ತಮ ಶಿಕ್ಷಣ ಪಡೆದು ಮುಂದಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ರ್‍ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಉಪನ್ಯಾಸಕರಿಗೆ ಹೆಸರು ತರಬೇಕೆಂದು ಕರೆ ನೀಡಿದರು.ತಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡಬೇಕೆಂಬ ಗುರಿಯೊಂದಿಗೆ ಪೋಷಕರು ಶ್ರಮಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿ ಸುತ್ತಾರೆ, ಅದಕ್ಕೆ ಪೂರಕ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಆಯ್ಕೆಯಾದಾಗ ಪೋಷಕರ ಶ್ರಮ ಸಾರ್ಥಕ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸತೀಶ್ ಶಾಸ್ತ್ರಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶುಭಾನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

1 ಕೆಸಿಕೆಎಂ 1ಚಿಕ್ಕಮಗಳೂರಿನ ಬಸವನಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಮಂಗಳವಾರ ನೂತನ ಕಂಪ್ಯೂಟರ್ ಸೈನ್ಸ್‌ ವಿಭಾಗವನ್ನು ಉದ್ಘಾಟಿಸಿದರು. ವರಸಿದ್ದಿ ವೇಣುಗೋಪಾಲ್‌, ಸತೀಶ್‌ ಶಾಸ್ತ್ರಿ ಇದ್ದರು.