ರಾಜ್ಯದಲ್ಲಿನ ಎಲ್ಲ ಹಿಂದುಳಿದ ವರ್ಗಗಳು, ಬಡವರು ಅಭಿವೃದ್ಧಿ ಹೊಂದಬೇಕು ಎಂಬುದೇ ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ

ಬಳ್ಳಾರಿ: ರಾಜ್ಯದ ಪ್ರತಿ ಸಮಾಜ, ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ 854ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿನ ಎಲ್ಲ ಹಿಂದುಳಿದ ವರ್ಗಗಳು, ಬಡವರು ಅಭಿವೃದ್ಧಿ ಹೊಂದಬೇಕು ಎಂಬುದೇ ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ ಎಂದು ಪ್ರತಿಪಾದಿಸಿದ ಸಚಿವರು, ಸಿದ್ದರಾಮೇಶ್ವರರು ಭಕ್ತಿ, ಯೋಗ ಮತ್ತು ಸೇವೆಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಲು ಹೊಡೆಯುವ ವೃತ್ತಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡವರು ಭೋವಿ ಸಮಾಜದವರು. ಸಮಾಜದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು, ನಗರದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸುವರ್ಣ ಬಳ್ಳಾರಿ ನಗರ ಕಟ್ಟಲು ಶ್ರಮಿಸುವೆ ಎಂದು ಭರವಸೆ ನೀಡಿದರು.ಸಂಸದ ಈ.ತುಕಾರಾಮ್ ಮಾತನಾಡಿ, ಶಿವಶರಣರ ಜೀವನ ಚರಿತ್ರೆ, ಆಚಾರ-ವಿಚಾರಗಳನ್ನು ಈಗಿನ ಪೀಳಿಗೆಗೆ ಮನದಟ್ಟು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಒಬ್ಬ ಮನುಷ್ಯ ನಿರ್ದಿಷ್ಟ ಗುರಿ ಇಟ್ಟುಕೊಂಡು ಸತ್ಯ, ನ್ಯಾಯ ಪಾಲಿಸಿಕೊಂಡು ವಿಜಯೋತ್ಸವದೆಡೆಗೆ ಸಾಗಬೇಕು ಎಂಬುದನ್ನು ಬಿಂಬಿಸುವುದೇ ಜಯಂತಿ ಕಾರ್ಯಕ್ರಮಗಳ ಆಚರಣೆಯ ಮುಖ್ಯ ಉದ್ದೇಶವಾಗಿವೆ ಎಂದು ಹೇಳಿದರು.

ಸಾರ್ವಜನಿಕರು ಪ್ರಜ್ಞಾವಂತರಾಗಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ಭೋವಿ ಸಮಾಜದವರು ಕಾಯಕಯೋಗಿಗಳು. ಮನೆ ಕಟ್ಟುವವರಾದರೂ ಆರೋಗ್ಯವಂತ ಸಮಾಜ ಕಟ್ಟಲು ಸಹ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಅನುಷ್ಠಾನಗೊಳಿಸುತ್ತಿದೆ. ಹೊಸ ವರ್ಷದ ಮಕರ ಸಂಕ್ರಾಂತಿ ಹಬ್ಬದೊಂದಿಗೆ ಹೊಸ ಹುರುಪಿನೊಂದಿಗೆ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು.

ಶಾಸಕ ಜೆ.ಎನ್.ಗಣೇಶ್, ಕಂಪ್ಲಿ ಕ್ಷೇತ್ರದ ಕುರುಗೋಡು ಪಟ್ಟಣದಲ್ಲಿ ₹1 ಕೋಟಿ ವೆಚ್ಚದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಈಗಾಗಲೇ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಬಳ್ಳಾರಿಯ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂ ಭಾಷಾ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಿ.ಸಾಯಿಶೃತಿ ಹಂದ್ಯಾಳು ಅವರು ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ ಪುಷ್ಪಾರ್ಚನೆಗೈಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾ ಭೋವಿ (ವಡ್ಡರ) ಸಂಘದ ಅಧ್ಯಕ್ಷ ವಿ.ರಾಮಾಂಜನೇಯ, ಬಳ್ಳಾರಿ ತಾಲೂಕು ತಹಶೀಲ್ದಾರ ಟಿ.ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.