ಗೋಬಿ ಮಾರುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ನಮಗೆ ಸರ್ಕಾರಿ ನೌಕರರಿಗೆ ಇಲ್ಲ

| Published : Dec 15 2024, 02:00 AM IST

ಗೋಬಿ ಮಾರುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ನಮಗೆ ಸರ್ಕಾರಿ ನೌಕರರಿಗೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳ ಒತ್ತಡದಿಂದ ಹೆಂಡತಿ, ಮಕ್ಕಳನ್ನು ದೇವಾಲಯಕ್ಕೂ ಕರೆದುಕೊಂಡು ಹೋಗುವಷ್ಟು ಯೋಗ್ಯತೆ ಇಲ್ಲವಾಗಿದೆ. ಗೋಬಿ ಮಂಚೂರಿ ಮಾರಾಟ ಮಾಡುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ಇಂದು ನಮಗೆ ಸರ್ಕಾರಿ ನೌಕರರಿಗೆ ಇಲ್ಲವೆಂದು ಬೇಸರ ಹಾಗೂ ಅಸಹಾಯಕತೆಯಿಂದ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ನುಡಿದರು. ಜಿಲ್ಲಾ ನೌಕರರ ಸಮಸ್ಯೆ ಕುರಿತು ದನಿ ಎತ್ತಿ ಸಮರ್ಪಕವಾಗಿ ಮಾತಾಡಬೇಕು ಮತ್ತು ಸರ್ಕಾರಿ ನೌಕರರ ನೋವು, ಅನುಭವಿಸುತ್ತಿರುವ ಸಂಕೀರ್ಣತೆ, ಬೇಡಿಕೆ ಹಾಗೂ ಅವರುಗಳ ಹಿತವನ್ನು ಸಮರ್ಪಕವಾಗಿ ಕಾಯಬೇಕು ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಅವೈಜ್ಞಾನಿಕವಾಗಿ ಗುರಿ ನಿಗದಿಪಡಿಸುವ ಅಧಿಕಾರಿಗಳ ಒತ್ತಡದಿಂದ ಹೆಂಡತಿ, ಮಕ್ಕಳನ್ನು ದೇವಾಲಯಕ್ಕೂ ಕರೆದುಕೊಂಡು ಹೋಗುವಷ್ಟು ಯೋಗ್ಯತೆ ಇಲ್ಲವಾಗಿದೆ. ಗೋಬಿ ಮಂಚೂರಿ ಮಾರಾಟ ಮಾಡುವ ವ್ಯಕ್ತಿಗೆ ಇರುವಷ್ಟು ನೆಮ್ಮದಿ ಇಂದು ನಮಗೆ ಸರ್ಕಾರಿ ನೌಕರರಿಗೆ ಇಲ್ಲವೆಂದು ಬೇಸರ ಹಾಗೂ ಅಸಹಾಯಕತೆಯಿಂದ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ನುಡಿದರು.ಪಟ್ಟಣದ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ ನೂತನ ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಹಾಗೂ 2019-24ನೇ ಸಾಲಿನ ನಿರ್ದೇಶಕರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಧುನೀಕತೆ ಬೆಳೆದಂತೆ ಒತ್ತಡ ಹಾಗೂ ತಲೆ ನೋವು ಜಾಸ್ತಿಯಾಗುತ್ತಿದೆ, ಡ್ಯಾಷ್ ಬೋರ್ಡ್ ಎಂಬುದಿದೆ, ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ಎಲ್ಲಾ ಕಡತಗಳು ತೆರೆದುಕೊಂಡು ಬಾಕಿಯಿರುವ ಕಡತಗಳನ್ನು ತೋರಿಸುತ್ತೆ, ಅವುಗಳನ್ನು ವಿಲೇವಾರಿ ಮಾಡಲು ಹಾಕುವ ಒತ್ತಡದಿಂದ ಬಿಪಿ, ಶುಗರ್‌ ಎಲ್ಲಾ ಬಂದೋಗಿದೆ. ಆದ್ದರಿಂದ ಜಿಲ್ಲಾ ನೌಕರರ ಸಮಸ್ಯೆ ಕುರಿತು ದನಿ ಎತ್ತಿ ಸಮರ್ಪಕವಾಗಿ ಮಾತಾಡಬೇಕು ಮತ್ತು ಸರ್ಕಾರಿ ನೌಕರರ ನೋವು, ಅನುಭವಿಸುತ್ತಿರುವ ಸಂಕೀರ್ಣತೆ, ಬೇಡಿಕೆ ಹಾಗೂ ಅವರುಗಳ ಹಿತವನ್ನು ಸಮರ್ಪಕವಾಗಿ ಕಾಯಬೇಕು ಎಂದು ನೂತನ ಸದಸ್ಯರಿಗೆ ಸಲಹೆ ನೀಡಿದರು.ಸಂವಿಧಾನಬದ್ಧವಾಗಿ ನೀಡಿರುವ ಸವಲತ್ತುಗಳನ್ನು ಅನುಭವಿಸಲು ಯಾವುದೇ ರೀತಿಯ ತೊಡಕುಗಳು ಹಾಗೂ ಶೋಷಣೆಗಳು ಇರಬಾರದು ಎಂಬ ದೃಷ್ಠಿಯಿಂದ ಸಂಘವೆಂಬ ಪರಿಕಲ್ಪನೆ ಎಲ್ಲಾ ಸೆಕ್ಟರ್‌ಗಳಲ್ಲೂ ಇದ್ದು, ಸರ್ಕಾರಿ ನೌಕರರ ಶ್ರೆಯೋಭಿವೃದ್ಧಿಗೆ ಶ್ರಮಿಸುವ ಸಲುವಾಗಿ ಸಂಘ ಸ್ಥಾಪನೆಯಾಗಿದೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲೂ ಹಲವಾರು ಯೋಜನೆಗಳನ್ನು ರೂಪಿಸಿ, ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ವ್ಯವಸ್ಥೆ ಮಾಡಿದೆ ಮತ್ತು ನಾವುಗಳು ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ತಾಂತ್ರಿಕತೆ ವಿಸ್ತಾರವಾಗಿ ಬೆಳೆದು, ರಾಜ್ಯದ ಇಲಾಖೆಗಳ ಪ್ರತಿಯೊಂದು ಪ್ರಗತಿಯನ್ನು ಕುಳಿತಲ್ಲೇ ನೋಡಲು ಸಾಧ್ಯವಾಗುತ್ತಿದೆ. ನೀಡುವ ಗುರಿಯನ್ನು ಸಂಜೆಯೊಳಗೆ ಪೂರೈಸುವ ನಿಗದಿಯಿಂದಾಗಿ ಚಿತ್ರಹಿಂಸೆಯಾಗುತ್ತಿದೆ. ಜಿಲ್ಲೆಯ 8 ತಾಲೂಕಿನಲ್ಲಿ ನಮ್ಮ ತಾಲೂಕಿನಲ್ಲಿ ನಾನು ಅತ್ಯಂತ ಕನಿಷ್ಠ ನೌಕರರನ್ನು ಇಟ್ಟುಕೊಂಡು, 14 ಗ್ರಾಮಲೆಕ್ಕಾಧಿಗಳಿಗೆ ಹಿಂಸೆ ನೀಡಿ, ಸುವಿಧ ಕೆಲಸ ಕಾರ್ಯಗಳನ್ನು ನಿರ್ವಹಿಸಿ, ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಅಗತ್ಯ ಕಾಲಾವಕಾಶ ನೀಡದೇ ಅವೈಜ್ಞಾನಿಕವಾಗಿ ಗುರಿ ನಿಗದಿಪಡಿಸಿ, ಒತ್ತಡ ಹೇರುತ್ತಿದ್ದಾರೆ ಮತ್ತು ಸೂಕ್ತ ಕಾಲಾವಕಾಶ ನೀಡಿ, ನಿಮ್ಮ ಗುರಿ ಸರಿಯಾಗಿಲ್ಲವೆಂದು ಸಮರ್ಪಕವಾಗಿ ಹೇಳಲು ತಾಕತ್ತು ಯಾರಿಗೂ ಇಲ್ಲ ಎಂದು ಬೇಸರದಿಂದ ನುಡಿದರು.ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ಕೆಲ ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ತಪ್ಪಾಗುತ್ತೆ, ಅಂತಹ ಸನ್ನಿವೇಶದಲ್ಲಿ ಉಗುರಷ್ಟು ಮಾಡುವ ತಪ್ಪಿಗೆ ಕೊಡಲಿಯಷ್ಟು ಮಾಡಿ ಮಟಾಶ್ ಮಾಡುವುದು, ಎಫ್‌ಐಆರ್‌ ಮಾಡಿಸಿ, ಅವರ ಮನೆ ಹಾಳು ಮಾಡುತ್ತಾರೆ. ಒಬ್ಬ ಸರ್ಕಾರಿ ನೌಕರ ಮಾಡುವ ತಪ್ಪನ್ನು ಇಲಾಖೆ ವತಿಯಿಂದ ಅಗತ್ಯ ತನಿಖೆ ನಡೆಸಿ, ಕ್ರಮಕೈಗೊಳ್ಳಲಿ, ಇಲಾಖೆಯ ನಿಯಮದಂತೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ವೃತ್ತಿ ಅತ್ಯಂತ ನೆಮ್ಮದಿಯ ವೃತ್ತಿ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೊಟ್ಟೆಯಿಂದಾಗಿ ನೆಮ್ಮದಿ ಇಲ್ಲವಾಗಿದೆ. ಮತ್ತು ಸಮಸ್ಯೆ ಪ್ರಾರಂಭವಾಗಿದೆ, ಐದು ರು. ಮೊಟ್ಟೆ ಬೆಲೆ ನಿಗದಿ, ಏಳು ರು. ಆಗಿದೆ. ಮೊಟ್ಟೆ ಕೊಡಬೇಕು ಜತೆಗೆ ಗಾತ್ರದ ಪ್ರಮಾಣ ಪರೀಕ್ಷಿಸಬೇಕು, ಇಷ್ಟು ಒತ್ತಡಗಳು ಬೇಕಾ? ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾ. ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಪೃಥ್ವಿರಾಜ್ ಅವರಿಗೆ ಟಿ.ಎಸ್.ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಖಜಾಂಚಿ ನಾಗರಾಜು, ಕಾರ್ಯದರ್ಶಿ ಮಂಜೇಗೌಡ, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್ ಇದ್ದರು.2019-24ನೇ ಸಾಲಿನ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ಗೌರವಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಖಜಾಂಚಿ ಹೇಮಂತ್, ಕಾರ್ಯದರ್ಶಿ ಲಕ್ಷ್ಮೀಕಾಂತ್, ನಿರ್ದೇಶಕ ಗೋಪಾಲ್ ಪಿ.ಆರ್., ವೆಂಕಟೇಶ್, ಜಿಲ್ಲಾ ಶಿಕ್ಷಕರ ಸಂಘದ ಖಜಾಂಚಿ ಸೋಮಣ್ಣಯ್ಯ, ರಾಜ್ಯ ಪರಿಷತ್ ಸದಸ್ಯ ರಾಜು ಪಿ., ತಾ. ಮಾಜಿ ಅಧ್ಯಕ್ಷ ರಮೇಶ್, ತಾ. ಶಿಕ್ಷಕರ ಸಂಘದ ಅಧ್ಯಕ್ಷ ಈರಯ್ಯ, ದೊರೆಸ್ವಾಮಿ, ಪ್ರಶಾಂತ್, ಡಾ. ಸಿದ್ದೇಗೌಡ, ಜಗದೀಶ್, ರೂಪೇಶ್, ಶಿಕ್ಷಕ ಶೇಖರ್ ಇತರರಿದ್ದರು.

----------

ಫೋಟೋ:

ಹೊಳೆನರಸೀಪುರದ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಪೃಥ್ವಿರಾಜ್ ಆರ್, ನಾಗರಾಜು, ಮಂಜೇಗೌಡ, ಮಂಜುನಾಥ್ ಅವರನ್ನು ಗೌರವಿಸಲಾಯಿತು.