ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ಸರ್ಕಾರಿ ನೌಕರರು ಸರ್ಕಾರದ ಬೆನ್ನೆಲುಬಾಗಿ ಹಗಲು ರಾತ್ರಿ ಕೆಲಸ ಮಾಡುವ ಮೂಲಕ ತಮ್ಮ ತಮ್ಮ ಖುರ್ಚಿ ಗೌರವ ಕಾಪಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಕರೆ ನೀಡಿದರು.ಮಸ್ಕಿ ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ಶಿಕ್ಷಕರ ಸಂಘದಿಂದ ಜಂಟಿಯಾಗಿ ಏರ್ಪಡಿಸಿದ್ದ ನೌಕರರ ಮೂರನೇ ತಾಲೂಕು ಮಟ್ಟದ ಸಮಾವೇಶ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರು ದಕ್ಷ ಆಡಳಿತ ನೀಡಿ ಸರ್ಕಾರಕ್ಕೆ ಹೆಸರು ತರುವ ಕೆಲಸ ಮಾಡಬೇಕಾಗಿದೆ. ವಿವಿಧ ಇಲಾಖೆ ಕಾರ್ಯಕ್ರಮ ಜಾರಿಗೆ ತರಲು ನೌಕರರು ಶ್ರಮಿಸುತ್ತಿದ್ದಾರೆ. ನಮಗೆ ಸಿಕ್ಕ ಸದಾವಕಾಶವನ್ನು ನಾವು ಬಳಸಿಕೊಂಡು ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು. ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಉಪನ್ಯಾಸ ನೀಡಿದರು. ಲಿಂಗಸಗೂರು ಬಿಇಒ ಹುಂಬಣ್ಣ ರಾಠೋಡ್, ಸಂಘದ ತಾಲೂಕು ಘಟಕದ ಅಧ್ಯಕ್ಷ ಪಂಪಾಪತಿ ಹೂಗಾರ, ತಾಪಂ ಇಒ ಅಮರೇಶ, ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ, ಪುರಸಭೆ ಸದಸ್ಯ ರವಿಕುಮಾರ ಪಾಟೀಲ, ಡಾ.ಶಿವಶರಣಪ್ಪ ಇತ್ಲಿ, ಪ್ರಕಾಶ ದಾರಿವಾಲ್, ಎಇಇ ದಾವುದ್, ಮಲ್ಲಯ್ಯ ಕಟ್ಟಿಮನಿ, ಬಸನಗೌಡ ಪೋಲಿಸ ಪಾಟೀಲ, ವೆಂಕಟರೆಡ್ಡಿ ಹಾಲಾಪೂರ, ಬಸ್ಸಪ್ಪ ತನಿಕೆದಾರ, ಮಂಜುನಾಥ ಹಾಲಾಪೂರ, ಮಹಾಂತೇಶ ಬಿರಾದರ್, ಡಾ.ಅಮರೇಗೌಡ, ರುದ್ರಮುನಿ, ಬಾಲಸ್ವಾಮಿ ಸೇರಿದಂತೆ ವಿವಿಧ ಮುಂಚೂಣಿ ಸಂಘಟನೆಳ ಪದಾಧಿಕಾರಿಗಳು ಇದ್ದರು. ಮಂಜುನಾಥ, ನಿವೇದಿತಾ ಇತ್ಲಿ, ನಿರ್ಮಲ ಲದ್ದಿ ಸಂಗಡಿಗರಿಂದ ನಾಡಗೀತೆ, ರೈತ ಗೀತೆ ಹಾಡಲಾಯಿತು.ಶ್ರದ್ಧಾಂಜಲಿ:
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದ ಶಂಕರಗೌಡ ಪಾಟೀಲ ಅವರ ಅಕಾಲಿಕ ನಿಧನಕ್ಕೆ ಹಾಗೂ ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬೆಳ್ಳಿ ಫಲಕ ಪ್ರಶಸ್ತಿ ಪ್ರದಾನ: ತಾಲೂಕು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಸರ್ಕಾರಿ ನೌಕರರಿಗೆ ಹಾಗೂ 50ಕ್ಕೂ ಹೆಚ್ಚು ಉತ್ತಮ ಶಿಕ್ಷಕರಿಗೆ ಬೆಳ್ಳಿ ಫಲಕ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾಸಲಾಯಿತು. ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ: ಪ್ರತಾಪಗೌಡ ಪಾಟೀಲ್
ಮಸ್ಕಿ: ಸರ್ಕಾರಿ ನೌಕರರು ಸಾರ್ವಜನಿಕರಿಂದ ಯಾವುದೇ ಆಸೆ ಆಮಿಷ ನಿರೀಕ್ಷಿಸದೆ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಿವಿಮಾತು ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೆ ಅಧ್ಯಕ್ಷರಾಗಿದ್ದ ಶಂಕರಗೌಡ ಪಾಟೀಲ ಕ್ರೀಯಾಶೀಲಾ ಅಧ್ಯಕ್ಷರಾಗಿ ತಾಲೂಕಿನಲ್ಲಿ ನೌಕರನ್ನು ಒಗ್ಗೂಡಿಸಿ ಸಂಘಟನೆ ಕಟ್ಟಿದರು. ಈಗಿನ ಅಧ್ಯಕ್ಷರು ಸಹ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು. ಸರ್ಕಾರಿ ನೌಕರರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬಿಟ್ಟಿ ಯೋಜನೆಗಳ ಕಡೆ ಗಮನ ಕೊಡದೆ ನೌಕರರು ಅದರಲ್ಲೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.