ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ

| Published : Oct 01 2025, 02:00 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಲ್ಟಿಪರಪಜ್ ಕೋ ಆಪ್ ಸೊಸೈಯಿಟಿಯಿಂದ ಸರ್ಕಾರಿ ನೌಕರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸ್ಪರ್ಧಾತ್ಮಕ ಅಂದರೆ ಶೇ.10ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ

ಕನ್ನಡಪ್ರಭ ವಾರ್ತೆ ಅಥಣಿ

ಪ್ರಸಕ್ತ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಲ್ಟಿಪರಪಜ್ ಕೋ ಆಪ್ ಸೊಸೈಟಿಯು ₹50,58,987 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಗದುಮ್ಮ ಹೇಳಿದರು.

ಪಟ್ಟಣದ ಮಹಾವೀರ ನಗರದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಂಘದ 22ನೇ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸೊಸೈಟಿ ಮಾ.31ರವರೆಗೆ ₹42 ಕೋಟಿಗಿಂತಲೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ವಿವಿಧ ಯೋಜನೆಯಡಿ ₹24,39,92,778 ಸಾಲ ನೀಡಿದೆ. ಸದಸ್ಯರಿಂದ ₹34,28,83,417 ಠೇವಣಿ ಹಣ ಸಂಗ್ರಹಿಸಲಾಗಿದೆ. ಪ್ರತಿ ವರ್ಷವೂ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಲಾಗುತ್ತಿದೆ ಎಂದರು.ಸಂಘದ ಸಂಸ್ಥಾಪಕ ಸದಸ್ಯ ಮತ್ತು ಜಿಪಂ ಅಭಿಯಂತರ ವೀರಣ್ಣ ವಾಲಿ ಮಾತನಾಡಿ, ಸರ್ಕಾರಿ ನೌಕರರಿಗೆ ಶೇ.10 ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಂಘದ ಮೂಲಕ ಸಾಲ ಕೊಡುತ್ತಿರುವುದು ನಮ್ಮ ಸೊಸೈಟಿಯ ಹಿರಿಮೆಯಾಗಿದೆ. ಸಹಕಾರಿ ಸಂಘದ ಮೂಲಕ ಬಂಗಾರದ ಖರೀದಿಗೆ ಮತ್ತು ಬಂಗಾರ ಅಡುವು ಇಟ್ಟುಕೊಂಡು ಸಾಲ ಮತ್ತು ಗೃಹ ಸಾಲ ಕೊಡುವ ಹಾಗೂ ಇ-ಸ್ಟಾಂಪ್ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ನೌಕರ ಸಂಘದ ರಾಜ್ಯ ಪರಿಷತ್‌ ಮಾಜಿ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ಚಿಕ್ಕೋಡಿ ಅಥವಾ ಕಾಗವಾಡದಲ್ಲಿ ಶಾಖೆ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.

ಹಿರಿಯ ಸದಸ್ಯರಾದ ಶಿವಾನಂದ ದಿವಾನಮಳ, ಶ್ರೀಕಾಂತ ಮಾಕಾಣಿ ಮಾತನಾಡಿ, ಅನೇಕ ಹಿರಿಯ ಸರ್ಕಾರಿ ನೌಕರರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪ್ರಾರಂಭದಲ್ಲಿ ಈ ಸೊಸೈಟಿಯನ್ನು ಒಂದು ಹಂತಕ್ಕೆ ತರಬೇಕಾದರೇ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಆ ಹಿರಿಯ ಸಂಸ್ಥಾಪಕರ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಿ. ಸದಸ್ಯರಿಗೆ ಅಂಚೆ ಕಚೇರಿ ಮೂಲಕ ಆರೋಗ್ಯ ವಿಮೆ ಮಾಡಿಸುವ ನಿಟ್ಟಿನಲ್ಲಿ ಯೋಚನೆ ಮಾಡಿ ಎಂದು ತಿಳಿಸಿದರು.

ಸಹಕಾರಿ ಸಂಘದ ವ್ಯವಸ್ಥಾಪಕ ಅಧಿಕಾರಿ ಚಿದಾನಂದ ಬಡವಗೋಳ ಅಢಾವೆ ಪತ್ರಿಕೆ ಓದಿ ಸಹಕಾರ ಸಂಘದ ಎಲ್ಲ ಸದಸ್ಯರು ಒಪ್ಪಿಗೆ ಪಡೆದುಕೊಂಡರು.

ಈ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುತ್ತು ಪಾಲಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಪ್ರವೀಣ ಹುಣಸಿಕಟ್ಟಿ, ಗುರುನಾಥ ಸ್ವಾಮಿ, ಸುಮೀತಕುಮಾರ ಮರನೂರ, ವಿಜಯ ಢವಳೆ, ಚಂದ್ರಕಾಂತ ಕಾಂಬಳೆ, ಅಪ್ಪಾಸಾಬ ಹಿಪ್ಪರಗಿ, ರವಿ ಅಂಗಡಿ, ಬೀರಪ್ಪ ಕಡಗಂಚಿ, ರಮೇಶ ಚೌಗಲಾ, ಜಾವೇದ ಪಟೇಲ್, ಶಿವಗೌಡ ಪಾಟೀಲ, ಸುಮಿತ್ರಾ ಮಗೆನ್ನವರ. ರೇಣುಕಾ ಗಾಣಗಿ, ಕಾನೂನು ಸಲಹೆಗಾರ ಕೆ.ಎ.ವಣಜೋಳ ಇದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಲ್ಟಿಪರಪಜ್ ಕೋ ಆಪ್ ಸೊಸೈಯಿಟಿಯಿಂದ ಸರ್ಕಾರಿ ನೌಕರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸ್ಪರ್ಧಾತ್ಮಕ ಅಂದರೆ ಶೇ.10ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು. ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಸಾಲದ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಮಲ್ಲಿಕಾರ್ಜುನ ಮಗದುಮ್ಮ ತಿಳಿಸಿದರು.