ಸಾರಾಂಶ
ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಾಮ ಮಾರ್ಗಗಳ ಮೂಲಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅಕ್ರಮವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಗಂಭೀರವಾಗಿ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂರಾರು ಸದಸ್ಯರನ್ನು ಅನರ್ಹಗೊಳಿಸಿ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಮತ ಪಟ್ಟಿಯಲ್ಲಿ ಹೆಸರುಗಳೇ ಇಲ್ಲದಂತೆ ಮಾಡಿದ್ದಾರೆ. ಅಲ್ಲದೆ ಚುನಾವಣೆ ವೇಳೆ ನಿರ್ದೇಶಕರಿಗೆ ಆಮಿಷ, ಬೆದರಿಕೆ ಒಡ್ಡಿದ್ದು, ಹತಾಶರಾಗಿ ನಮ್ಮ ವಿರುದ್ಧ ಆಣೆ ಪ್ರಮಾಣ ಹಾಗೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.ಮತದಾರರ ಕರಡು ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆ, ಅಂತಿಮ ಪಟ್ಟಿ ಪ್ರಕಟ, ಇದ್ಯಾವುದನ್ನು ನಿಯಮ ಬದ್ಧವಾಗಿ ಮಾಡಿಲ್ಲ, ತಮ್ಮ ಸ್ಪರ್ಧೆಗೆ ಅನುಕೂಲವಾಗುವ ರೀತಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಿದ್ದಾರೆ. ಸ್ಪರ್ಧಾ ಆಕಾಂಕ್ಷಿಗಳನ್ನು ಚುನಾವಣಾ ಕಣದಿಂದ ಹೊರಗಿಡಲು ಅವರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.
ತಾವು ನಿರ್ಮಿಸಿರುವ ಲೇಔಟ್ ಸೈಟ್‌ಗಳ ಮಾರಾಟಕ್ಕೆ ಮತ್ತೊಮ್ಮೆ ಅಧ್ಯಕ್ಷರಾಗಲು ಮುಂದಾಗಿದ್ದಾರೆ. ಈ ಹಿಂದೆ ನೌಕರರ ಕ್ಯಾಂಟೀನ್ ನಿರ್ಮಿಸಲು ರಸೀದಿ ನೀಡದೆ ಲಕ್ಷಾಂತರ ರು. ವಸೂಲಿ ಮಾಡಿದ್ದಾರೆ. ಸುಳ್ಳು ಭರವಸೆ ನೀಡಿ ಹೆಸರಿಗೆ ತಕ್ಕಂತೆ ದೇವೇಂದ್ರ, ಅವರ ಕುತಂತ್ರ ಹಲವು ನಡೆಸಿದ್ದಾರೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ನೌಕರರ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಆರೋಪಿಸಿದರು.ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎನ್‌ಪಿಎಸ್ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇತ್ತ ಚಿಕ್ಕಮಗಳೂರಿನಲ್ಲಿ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುವ ಮೂಲಕ ಹೋರಾಟದ ದಿಕ್ಕು ಬದಲಾಯಿಸಲು ಯತ್ನಿಸಿದ್ದರು. ಇದನ್ನು ಎನ್‌ಪಿಎ ನೌಕರರು ಮರೆತಿಲ್ಲ ಎಂದು ಹೇಳಿದರು.
ಜೂನಿಯರ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಅಧ್ಯಕ್ಷ ಸ್ಥಾನದ ಆಕಾಂಕ್ಷೆ ಎಂದು ತಿಳಿದು ಸ್ಪರ್ಧಿಸಲೇ ಬಾರದೆಂದು ಅನರ್ಹಗೊಳಿಸಿ ಪಾರದರ್ಶಕತೆ ಇಲ್ಲದೆ ಮತದಾರರ ಪಟ್ಟಿಯಿಂದಲೇ ಕೈ ಬಿಟ್ಟಿದ್ದಾರೆ. ಈ ಬಗ್ಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದರು ಯಾವುದೇ ಉತ್ತರ ಇನ್ನೂ ಬಂದಿಲ್ಲ ಎಂದರು.ಇಡೀ ಚುನಾವಣೆ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನ ಇದ್ದು, ಚುನಾವಣಾ ಅಧಿಕಾರಿಗೆ ಈಗಾಗಲೇ ದೂರು ನೀಡಿದ್ದೇವೆ. ಆದರೂ ಚುನಾವಣೆಗೆ ಇನ್ನೇನು 2 ದಿನ ಬಾಕಿ ಇರುವಂತೆ ಮತ್ತಷ್ಟು ಅಕ್ರಮ ನಡೆಯುವ ಸಂಶಯವಿದೆ. ಹಾಗಾಗಿ ಈ ಬಗ್ಗೆ ಚುನಾವಣಾ ಅಧಿಕಾರಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸ್ಥಾನದ ಆಕಾಂಕ್ಷಿ ಮಂಜುನಾಥ್, ಖಜಾಂಚಿ ಅಭ್ಯರ್ಥಿ ಆಕಾಂಕ್ಷಿ ಕೃಷ್ಣಮೂರ್ತಿ ರಾಜ್ ಅರಸ್, ಸಿ.ಕೆ. ಸತೀಶ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 2 ಕೆಸಿಕೆಎಂ 8