ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲದ ಸಮಸ್ಯೆ ಎದುರಾಗಿದ್ದರೂ ಕೂಡ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ತಮ್ಮ ಸಮರ್ಥ ನಾಯಕತ್ವದಿಂದ ದೇಶದ ಯಾವುದೇ ಪ್ರಜೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲದ ಸಮಸ್ಯೆ ಎದುರಾಗಿದ್ದರೂ ಕೂಡ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ತಮ್ಮ ಸಮರ್ಥ ನಾಯಕತ್ವದಿಂದ ದೇಶದ ಯಾವುದೇ ಪ್ರಜೆಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ಜಿಪಂ ಸಭಾಂಣದಲ್ಲಿ ಮಂಗಳವಾರ ಬ್ಯಾಂಕ್ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಪೆಟ್ರೋಲ್, ಡಿಸೇಲ್ ಎಲ್.ಪಿ.ಜಿ ಗ್ಯಾಸ್ ಸರಬರಾಜಿನಲ್ಲಿ ಸಾರ್ವಜನಿಕರಿಗೆ ಯಾವುದೇ ವ್ಯತ್ಯಯವಾಗದೆ ದರದಲ್ಲೂ ಸ್ಥಿರತೆ ಕಂಡುಕೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಅದಕ್ಕೆ ಪರ್ಯಾಯವಾಗಿ ದೇಶದಲ್ಲಿ ಎಥೆನಾಲ್ ಉತ್ಪಾದನೆ ಆಗುತ್ತಿದ್ದು, ಅದರ ಬಳಕೆಯನ್ನು ಮಾಡಿಕೊಳ್ಳುವಂತೆ ಕರೆಕೊಟ್ಟಿದ್ದಾರೆ ಎಂದು ತಿಳಿಸಿದರು.

ಡಿಜಿಟಲ್ ತಂತ್ರಜ್ಞಾನದ ಮೂಲಕ ಆನ್ ಲೈನ್ ಸೌಲಭ್ಯಗಳನ್ನು ಬ್ಯಾಂಕಿಂಗ್ ಕ್ಷೇತ್ರ ಹೊಂದಿದ್ದು, ಹಿರಿಯ ನಾಗರಿಕರು, ರೈತರು ಹಾಗೂ ಹಳ್ಳಿಯ ಜನರು ಬ್ಯಾಂಕಿಗೆ ಬಂದು ವ್ಯವಹಾರ ಮಾಡುವಾಗ ಅವರೊಂದಿಗೆ ತಾಳ್ಮೆಯಿಂದ ಸಹಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುವಂತೆ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಿ.ಎಂ ವಿಶ್ವಕರ್ಮ ಯೋಜನೆಯಡಿ ಬ್ಯಾಂಕ್‌ಗಳಲ್ಲಿ ಸುಮಾರು ಅರ್ಧದಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲ, ಶಿಕ್ಷಣ ಸಾಲ, ವಸತಿ ಯೋಜನೆಗೆ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದರು.

263 ಶಾಖೆಗಳಲ್ಲಿ ಮಾತ್ರ ಬಿ.ಎಲ್.ಬಿ.ಸಿ ಸಭೆ ಆಗಿದೆ. ಇನ್ನೂ 85 ಶಾಖೆಗಳಲ್ಲಿ ಸಭೆಗಳನ್ನು ನಡೆಸಿರುವುದಿಲ್ಲ. ನಿಯಮಿತವಾಗಿ ಸಭೆಗಳನ್ನು ಕೈಗೊಂಡು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಡಿ.ಜಿ.ಎಂ ಮತ್ತು ಪ್ರಾದೇಶಿಕ ಮುಖ್ಯಸ್ಥ ಆರ್‌.ದೇವರಾಜ್ ಮಾತನಾಡಿ, 2025ರ ಡಿಸೆಂಬರ್ ಅಂತ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಶೇ.74.26 ಪ್ರಗತಿ ಸಾಧನೆ ಮಾಡಿದ್ದು, 2024ನೇ ಸಾಲಿಗಿಂತ ಶೇಕಡ 31.26 ಪ್ರಗತಿ ಸಾಧಿಸಲಾಗಿದೆ. ಎಂ.ಎಸ್.ಎಂ.ಇ ವಲಯದಲ್ಲಿ ಶೇಕಡ 80.03 ಪ್ರಗತಿ ಸಾಧಿಸಿದ್ದು, 2024 ನೇ ಸಾಲಿಗಿಂತ ಶೇಕಡ 11.49 ಹೆಚ್ಚು ಪ್ರಗತಿ ಸಾಧಿಸಲಾಗಿದೆ. ವಸತಿ ಸಾಲ ವಿತರಣೆ ಪ್ರಗತಿ ಕಡಿಮೆಯಾಗಿದ್ದು, ಆದ್ಯತೆ ಮೇಲೆ ಸಾಲ ವಿತರಣೆಗೆ ಬ್ಯಾಂಕ್ ಗಳು ಕ್ರಮ ವಹಿಸಬೇಕು. ಪಿ.ಎಂ ವಿಶ್ವಕರ್ಮ ಯೋಜನೆಯಡಿ ತಿರಸ್ಕೃತಗೊಂಡ ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಎನ್‌.ಹೇಮಂತ್, ಕೆನರಾ ಬ್ಯಾಂಕ್ ಡಿ.ಜಿ.ಎಂ ಆರ್.ದೇವರಾಜ್, ನಬಾರ್ಡ್ ಡಿ.ಡಿ.ಎಂ ಪಿ.ಶರತ್ ಗೌಡ , ಆರ್.ಬಿ.ಐ ಎ.ಜಿ.ಎಂ ಸೂರಜ್, ಕೆನರಾ ಬ್ಯಾಂಕ್ ಮಾರ್ಗದರ್ಶಿ ಅಧಿಕಾರಿ ಪಿ.ಹನುಮಂತಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.