ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಭರವಸೆ ನೀಡಿದಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ವಿಫಲವಾಗಿದೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೆ ಎನ್‌ಪಿಎಸ್ ಬದಲಿಗೆ ಒಪಿಎಸ್ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಒಂದು ವರ್ಷ ಕಳೆದರೂ ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದರು.
ರಾಜ್ಯದಲ್ಲಿ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಅನುದಾನಿತ ಶಾಲಾ ಶಿಕ್ಷಕರ ನೇಮಕ ಮಾಡುತ್ತಿಲ್ಲ. ರಾಜ್ಯದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಸಂದರ್ಭ ಸಾಮೂಹಿಕ ನಕಲು ಆಗುತ್ತಿದ್ದು, ನಿಜವಾಗಿ ಉತ್ತಮ ಶಿಕ್ಷಣ ನೀಡುತ್ತಿದ್ದ ನೈಋುತ್ಯ ಕ್ಷೇತ್ರದ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿತ್ತು. ಈ ಬಗ್ಗೆ ನಾನು ಪರಿಷತ್‌ನಲ್ಲಿ ಪ್ರಶ್ನೆ ಎತ್ತಿ, ಚರ್ಚೆಯಾದ ಕಾರಣ ಈ ಬಾರಿ ಉತ್ತಮ ಫಲಿತಾಂಶ ಬರಲು ಸಾಧ್ಯವಾಗಿದೆ ಎಂದು ಭೋಜೇಗೌಡ ಹೇಳಿದರು.ರಾಜ್ಯದಲ್ಲಿ ಶಾಲೆಗಳ ಮಾನ್ಯತೆ ನವೀಕರಣದ ನಿಯಮಗಳ ಕಾರಣದಿಂದಾಗಿ ಹಲವಾರು ಖಾಸಗಿ ಶಾಲೆಗಳು ಸಂಕಷ್ಟದಲ್ಲಿವೆ. ಪ್ರತಿ ನವೀಕರಣದ ಸಮಯದಲ್ಲಿ ಕಟ್ಟಡ ಕ್ಲಿಯರೆನ್ಸ್ ಪ್ರಮಾಣ ಪತ್ರಗಳನ್ನು ಏಕೆ ಸಲ್ಲಿಸಬೇಕು? ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿರುವ ಕುರಿತ ಪ್ರಶ್ನೆಗೆ, ಪಕ್ಷದ ಹಿರಿಯ ನಾಯಕರು ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಭೋಜೇಗೌಡ ಹೇಳಿದರು.ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದ್ದು, ಆಯ್ಕೆಯಾದ ನಂತರ ವಿಧಾನ ಪರಿಷತ್‌ನಲ್ಲಿ ಪದವೀಧರರ ಧ್ವನಿಯಾಗುತ್ತೇನೆ. ದೇಶದ ಭದ್ರತೆ ಮತ್ತು ಭಾರತದ ವಿಕಾಸಕ್ಕಾಗಿ ಬಿಜೆಪಿ ಅಗತ್ಯವಿದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹಾಗೂ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ 13 ಸಾವಿರ ವಿವೇಕ ತರಗತಿಗಳನ್ನು ಮಂಜೂರು ಮಾಡಿದ್ದರೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಹರ್ಷ ಕೊಲೆ ಪ್ರಕರಣದಲ್ಲಿ ಎಡಪಂಥೀಯ ಸಂಘಟನೆ ಜತೆ ಸೇರಿ ನಡೆಸಿದ ಪ್ರತಿಭಟನೆ ಹಾಗೂ ‘ಬಿಜೆಪಿಯ ಜ್ಯೂನಿಯರ್ ಲೀಡರ್’ ಎಂಬ ಪ್ರತಿಸ್ಪರ್ಧಿ ಅಭ್ಯರ್ಥಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧನಂಜಯ ಸರ್ಜಿ, ನಾನು 10ನೇ ವಯಸ್ಸಿನಿಂದ ಆರೆಸ್ಸೆಸ್ ಸ್ವಯಂಸೇವಕನಾಗಿ ಬೆಳೆದು ಸುಮಾರು 30 ವರ್ಷದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡವನು. ಆರೋಪ ಹಾಗೂ ಅಭ್ಯರ್ಥಿಗಳ ಬಂಡಾಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಉತ್ತರಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಇದ್ದರು.