ಸಾರಾಂಶ
ಶೃಂಗೇರಿಯಲ್ಲಿ ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಠಾವಧಿ ಮುಷ್ಕರದಲ್ಲಿ ಆರೋಪ
ಕನ್ನಡಪ್ರಭ ವಾರ್ತೆ, ಶೃಂಗೇರಿಹತ್ತಾರು ಸಮಸ್ಯೆ ಹಾಗೂ ಯಾವುದೇ ಮೂಲಭೂತ ಸೌಕರ್ಯ ಸಮರ್ಪಕವಾಗಿಲ್ಲದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ನೌಕರರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಎಲ್ಲಾ ಸರ್ಕಾರಗಳು ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳಿಗೆ ಸ್ರಂದಿಸದೇ ಬೇಡಿಕೆಗಳನ್ನು ಕಡೆಗಣಿಸುತ್ತಾ ಬಂದಿದೆ ಎಂದು ತಾಲೂಕು ಗ್ರಾಮೀಣ ಅಂಚೆ ನೌಕರರ ಒಕ್ಕೂಟದ ಕೆ.ಎಂ.ಗಣೇಶ್ ಮೂರ್ತಿ ಆರೋಪಿಸಿದರು.
ಮಂಗಳವಾರ ಪಟ್ಟಣದ ಶಾರದಾ ನಗರ ಪ್ರಧಾನ ಅಂಚೆ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಆರಂಭಿಸಿದ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಮಾತನಾಡಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ಪ್ರತೀ ವರ್ಷ ಮುಷ್ಕರ ನಡೆಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಬೇಡಿಕೆ ಗಳನ್ನು ಈಡೇರಿಸದೇ ನಿರ್ಲಕ್ಷ್ಯಮಾಡಲಾಗುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಮೂಲ ಸೌಲಭ್ಯವೂ ಇಲ್ಲ. ಹಳ್ಳಿಗಾಡು, ಗುಡ್ಡಗಾಡು ಪ್ರದೇಶಗಳಲ್ಲಿ ದೂರದೂರದ ಊರು, ಮನೆಗಳಿಗೆ ತಲುಪಲು ಕೆಲವೆಡೆ ರಸ್ತೆ ಸೌಕರ್ಯವೂ ಇಲ್ಲ. ಮಳೆಗಾಲದಲ್ಲಿ ಜೀವದ ಹಂಗನ್ನು ತೊರೆದು ಕಲಸ ಮಾಡಬೇಕು. ಕನಿಷ್ಠ ಸೌಕರ್ಯವೂ ಇಲ್ಲದಿದ್ದರೂ ಸೇವೆ ಸಲ್ಲಿಸುತ್ತಿದ್ದಾರೆ.
7 ನೇ ವೇತನ ಆಯೋಗದ ವರದಿ ಪ್ರಕಾರ ಮಾಡಿರುವ ಹಲವು ಸಕಾರಾತ್ಮಕ ಶಿಪಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ನಮಗೆ ಅನುಕೂಲವಾಗುತ್ತಿತ್ತು. ಆದರೆ ಸರ್ಕಾರ ವಾಗಲೀ, ಇಲಾಖೆಯಾಗಲೀ ಇದನ್ನು ಗಂಬೀರವಾಗಿ ಪರಿಗಣಿಸದೆ ನಮಗೆ ಅನ್ಯಾಯ ಮಾಡಿದೆ.ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಬಾಲಕೃಷ್ಣ ಮಾತನಾಡಿ 7 ನೇ ವೇತನ ಆಯೋಗದ ವರದಿ ಶಿಫಾರಸ್ಸುಗಳನ್ನು ಯಥಾವತ್ ಜಾರಿ ಗೊಳಿಸಬೇಕು. ಈ ಮೊದಲು ನಾವು ಸಣ್ಣ ಮಟ್ಟದ ಹೋರಾಟ ಮಾಡುತ್ತಿದ್ದೆವು, ತುರ್ತು ರಜೆ, ಮಕ್ಕಳ ಶಿಕ್ಷಣ, ವೇತನ ಹೆಚ್ಚಳ, ಹೆಣ್ಣುಮಕ್ಕಳ ಹೆರಿಗೆ ರಜೆ ಇತ್ಯಾದಿ ಮೂಲ ಸೌಕರ್ಯಕ್ಕಾಗಿ ಮುಷ್ಕರ ನಡೆಸುತ್ತಿದ್ದೆವು. ಆದರೆ ಈಗ ಅನಿರ್ದಿಷ್ಠಾ ವಧಿ ಮುಷ್ಕರ ನಡೆಸುವುದು ಅನಿವಾರ್ಯ.
ಗ್ರಾಮೀಣ ಅಂಚೆ ನೌಕರರಿಗೆ 8 ಗಂಟೆ ಕೆಲಸ ನೀಡಬೇಕು. ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯ, ಸೇವಾ ಹಿರಿತನದ ಮೇಲೆ 12,24,36 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಇಂಕ್ರಿಮೆಂಟ್, ಕಮಲೇಶ ಸಮಿತಿ ವರದಿಯಂತೆ ಗರಿಷ್ಠ 5 ಲಕ್ಷದ ವರೆಗೆ ಗ್ಯಾಚ್ಯುಟಿ ಹೆಚ್ಚಿಸಬೇಕು. ಜಿಡಿಎಸ್ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಜಿಡಿಎಸ್ ನೌಕರರಿಗೆ 30 ದಿನಗಳ ವೇತನ ಸಹಿತ ರಜೆ ನೀಡಬೇಕು. ಆಯೋಗದ ಶಿಪಾರಸ್ಸಿನಂತೆ 180 ದಿನಗಳ ವರೆಗೆ ರಜೆ ಉಳಿಸಿಕೊಳ್ಳುವ ಅವಕಾಶ ಕಲ್ಲಿಸಬೇಕು. ಗುಂಪು ವಿಮೆ ಕವರೇಜ್ 5 ಲಕ್ಷ ರು. ವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಘವೇಂದ್ರ, ಪ್ರಕಾಶ್, ರಂಜಿತಾ, ರಘುಪತಿ, ಚಂದ್ರಶೇಖರ್ ಸೇರಿದಂತೆ ಗ್ರಾಮೀಣ ಅಂಚೆ ನೌಕರರು, ಸಿಬ್ಬಂದಿ ಇದ್ದರು.12 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಮಂಗಳವಾರ ಅನಿರ್ದಿಷ್ಠಾವಧಿ ಮುಷ್ಕರ ಆರಂಬಿಸಿದರು.