ತಾಲೂಕು ಕೇಂದ್ರದಲ್ಲಿಲ್ಲ ಸರ್ಕಾರಿ ಪ್ರೌಢ, ಪಪೂ ಕಾಲೇಜು

| Published : Aug 08 2024, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ತಾಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ತಾಲೂಕು ಕೇಂದ್ರ ಸ್ಥಾನದಲ್ಲಿ ಒಂದೂ ಕೂಡಾ ಸರ್ಕಾರಿ ಪ್ರೌಢ ಕನ್ನಡ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಇಲ್ಲದಿರುವುದು ನಾಡ ಭಾಷಾಪ್ರೇಮಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಶಂಕರ ಹಾವಿನಾಳ

ಕನ್ನಡಪ್ರಭ ವಾರ್ತೆ ಚಡಚಣತಾಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ತಾಲೂಕು ಕೇಂದ್ರ ಸ್ಥಾನದಲ್ಲಿ ಒಂದೂ ಕೂಡಾ ಸರ್ಕಾರಿ ಪ್ರೌಢ ಕನ್ನಡ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಇಲ್ಲದಿರುವುದು ನಾಡ ಭಾಷಾಪ್ರೇಮಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.ಉದ್ಯಮದಲ್ಲಿ ಗಡಿನಾಡಿನ ಮುಂಬೈವೆಂದೇ ಖ್ಯಾತಿಗೊಳಗಾದ ಚಡಚಣ ಪಟ್ಟಣದಲ್ಲಿ ಖ್ಯಾತ ಸಾಹಿತಿ ಡಾ.ಸಿಂಪಿ ಲಿಂಗಣ್ಣನವರು ಹಾಗೂ ನಡೆದಾಡುವ ದೇವರು ಎಂದು ಹೆಸರವಾಸಿಯಾದ ಸಿದ್ದೇಶ್ವರ ಮಹಾಸ್ವಾಮೀಜಿಯವರ ಕಲಿತ ಪಟ್ಟಣದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಒಂದು ಸುಸಜ್ಜಿತ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜೇ ಇಲ್ಲ. ಜನಪ್ರತಿನಿಧಿಗಳ ಹಾಗೂ ಶಾಸಕರ ಇಚ್ಛಾಶಕ್ತಿ ಕೊರತೆಗೆ ಜನಾಕ್ರೋಶ ವ್ಯಕ್ತವಾಗಿದೆ.ತಾಲೂಕಿನ ಬರಡೋಲ, ರೇವತಗಾಂವ, ತದ್ದೇವಾಡಿ, ಹತ್ತಳ್ಳಿ, ಉಮರಜ, ಜಿಗಜಣಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಒಂದೆರಡು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳಿವೆ. ಆದರೆ, ಹಲವು ವರ್ಷಗಳಿಂದ ಬೇಡಿಕೆವಿರುವ ಹಾಗೂ 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದು ಬಡ ವಿದ್ಯಾಥಿಗಳಿಗೆ ಮಾಡಿರುವ ಅನ್ಯಾಯ. ತಾಲೂಕು ಘೋಷಣೆಯಾಗಿ ದಶಕದ ಸಂಭ್ರಮದಲ್ಲಿರುವ ಚಡಚಣ ಪಟ್ಟಣದಲ್ಲಿ ಬಹುದಿನದ ಬೇಡಿಕೆಯಾದ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಬೇಡಿಕೆ ಇದ್ದರೂ ಸ್ಥಳೀಯ, ತಾಲೂಕು ಹಾಗೂ ಜಿಲ್ಲಾ ಹಂತದ ಜನಪ್ರತಿನಿಧಿಗಳು ಮುತವರ್ಜಿ ವಹಿಸದಿರುವುದು ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಚ್ಯಾಲೆಂಜ್‌ಗಾಗಿ ತೆಗೆದುಕೊಂಡ ಶಾಸಕರು ಸುಮ್ಮನಾದರೆಕೆ?ಕಳೆದ ಸರ್ಕಾರದ ಅವಧಿಯಲ್ಲಿರುವ ಶಾಸಕ ದೇವಾನಂದ ಚವ್ಹಾಣ ಅವರು ಶಾಸಕರಾಗಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಚಡಚಣ ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಮುಂದಾದರು. ಖ್ಯಾತ ಜವಳಿ ವ್ಯಾಪಾರಸ್ಥಾರ ಅಜಿತ ಮುತ್ತಿನ ಅವರಿಂದ ದೇಣಿಗೆಯಾಗಿ 2 ಎಕರೆ ಜಮೀನು ಪಡೆಯಲು ಮುಂದಾದರೂ ಜಮೀನು ಕೊಡುವ ಭರವಸೆ ನೀಡಿದ ನಿಮಿತ್ತ ಸಾರ್ವಜನಿಕ ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಮುಂದೆ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಏನಾಯಿತು ಎಂಬುವುದು ಗೊತ್ತಾಗಲಿಲ್ಲ. ಅಲ್ಲಿಂದ ಇಲ್ಲಿಯವರಿಗೆ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾಗುವ ಕನಸು ಕನಸಾಗಿಯೇ ಉಳಿದಿದೆ.ವಿದ್ಯಾಥಿಗಳಿಗೆ ಖಾಸಗಿ ಶಾಲೆಗಳೇ ಗತಿ:

ಚಡಚಣ ಶೈಕ್ಷಣಿಕ ತಾಲೂಕಿನಲ್ಲಿ ಒಟ್ಟು 47 ಪ್ರೌಢಶಾಲೆಯಳಿವೆ. ಅದರಲ್ಲಿ ಪಟ್ಟಣ ಹೊರತು ಪಡಿಸಿ ಸರ್ಕಾರಿ 22, ಪಟ್ಟಣ ಸೇರಿದಂತೆ ಅನುದಾನಿತ 15 ಹಾಗೂ ಅನುದಾನ ರಹಿತ 10 ಪ್ರೌಢಶಾಲೆಗಳಿವೆ. ಅದರಲ್ಲಿ ಸುಮಾರು 1 ರಿಂದ 10ನೇ ತರಗತಿಯವರೆಗೆ ಸುಮಾರು 39,400 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಪ್ರೌಢಶಾಲೆಯಲ್ಲಿ 11 ಸಾವಿರದಾ 754 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಪಟ್ಟಣದಲ್ಲಿ ಎರಡು ಅನುದಾನಿತ, ಎರಡು ಖಾಸಗಿ ಒಂದು ಉರ್ದು ಸರ್ಕಾರಿ ಪ್ರೌಢಶಾಲೆ ಹೊತರು ಪಡಿಸಿ ಒಂದೂ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದರಿಂದ ಅನುದಾನಿತ ಹಾಗೂ ಖಾಸಗಿ ಶಾಲೆಗಳೇ ಗತಿ ಎನ್ನುವಂತಾಗಿದೆ. ಸರ್ಕಾರ, ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬಡ ಕುಟುಂಬದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗೆ ಹೋಗಬೇಕಾಗಿದ್ದು, ಖಾಸಗಿ ಶಾಲೆಯ ವೆಚ್ಚವು ಬಡಕುಟುಂಬದ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮಂಜೂರಾತಿಗೆ ವಿಶೇಷ ಕಾಳಜಿ ಹಾಗೂ ಇಚ್ಛಾಶಕ್ತಿ ತೊರಿಸುವರೇ ಕಾಯ್ದು ನೋಡಬೇಕಾಗಿದೆ....ಕೋಟ್‌....

ನಾನು ಚಡಚಣ ಪಟ್ಟಣದ ಕಡು ಬಡ ವಿದ್ಯಾರ್ಥಿಗಳಿಗೆ ಅನಕೂಲವಾಗುವ ದೃಷ್ಟಿಕೋನದಿಂದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಪ್ರಾರಂಭಿಸಲು ಚಾಲನೆ ನೀಡಿದ್ದೆ. ಆದರೆ, ನಮ್ಮ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡ ಮೇಲೆ ರಾಜಕೀಯ ಹಿತಾಸಕ್ತಿಗಳು ಅದನ್ನು ಮಾಡಲು ಬಿಡಲಿಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.-ದೇವಾನಂದ ಚವ್ಹಾಣ, ಮಾಜಿ ಶಾಸಕರು ನಾಗಠಾಣ ಮತಕ್ಷೇತ್ರ ಚಡಚಣ.---

ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭಿಸುವಂತೆ ಒತ್ತಾಯ ಮಾಡುವುದರ ಜೊತೆಗೆ ಮತಕ್ಷೇತ್ರದ ಶಾಸಕರಿಗೆ ಹಾಗೂ ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮುಂದೆವರೆದು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಯವರೆಗೆ ಒಬ್ಬರೂ ಪ್ರೌಢಶಾಲೆ ಪ್ರಾರಂಭ ಮಾಡುವ ಗೋಜಿಗಿ ಹೋಗುತ್ತಿಲ್ಲ. ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರ ಪ್ರಭಾವಕ್ಕೆ ಒಳಗಾಗಿ ಚಡಚಣದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭವಾಗುತ್ತಿಲ್ಲ.

-ರಾಯಗೊಂಡ ರಾಮ ಕೋಳಿ (ಅಣ್ಣಾ ಪೂಜಾರಿ) ಅಧ್ಯಕ್ಷರು, ಕೆಆರ್‌ಎಸ್‌ಪಕ್ಷದ ನಗರ ಘಟಕ. ---

ಇಂಡಿ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲದಿರುವುದು ನಮ್ಮ ಗಮನಕ್ಕೂ ಬಂದಿದೆ. ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭಿಸಲು ಸಾರ್ವಜನಿಕರಿಂದ ಆಹವಾಲು ಬಂದರೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ಎಸ್‌.ಜೆ.ನಾಯಕ ಕ್ಷೇತ್ರಶಿಕ್ಷಣಾಧಿಕಾರಿ ಚಡಚಣ.

--

ಚಡಚಣ ತಾಲೂಕು ಘೋಷಣೆಯಾದಾಗಿನಿಂದ ಹಲವಾರು ಮನವಿ ಸಲ್ಲಿಸಿದರೂ ಪಟ್ಟಣದಲ್ಲಿ ಸರ್ಕಾರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭವಾಗಿಲ್ಲ. ಇದರಿಂದ ಕಡು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾಥಿಗಳಿಗೆ ಅನ್ಯಯವಾಗಿತ್ತದೆ. ಮುಂದಿನ ಶೈಕ್ಷಣಿಕ ಪ್ರಾರಂಭವಾಗದಿದ್ದರೇ ಹೋರಾಟ ಅನಿವಾರ್ಯ.

-ಪ್ರಭಾಕರ ನಿರಾಳೆ, ಅಧ್ಯಕ್ಷರು ಘೋಷಿತ ತಾಲೂಕು ಹೋರಾಟ ಸಮಿತಿ ಚಡಚಣ.