ಹೊಳೆನರಸೀಪುರದಲ್ಲಿ ಗಣಿಗಾರಿಕೆ ಸ್ಪೋಟಕ್ಕೆ ಸರ್ಕಾರಿ ಕಟ್ಟಡ ಬಿರುಕು: ವರದಿ ನಂತರ ಕ್ರಮ ಎಂದ ಶಾಸಕ ಮಂಜು

| Published : Aug 29 2024, 12:53 AM IST

ಹೊಳೆನರಸೀಪುರದಲ್ಲಿ ಗಣಿಗಾರಿಕೆ ಸ್ಪೋಟಕ್ಕೆ ಸರ್ಕಾರಿ ಕಟ್ಟಡ ಬಿರುಕು: ವರದಿ ನಂತರ ಕ್ರಮ ಎಂದ ಶಾಸಕ ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ಪಶು ಆಸ್ಪತ್ರೆಯ ಕಟ್ಟಡವು ಪಕ್ಕದ ಗ್ರಾಮ ಒಂದರಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದಾಗಿ ಸೀಳು ಬಿಟ್ಟಿದೆ. ಎಂಜಿನಿಯರ್‌ ಕಟ್ಟಡ ಸೀಳು ಬಿಟ್ಟಿರುವ ನಕಲು ಪ್ರತಿ ನೀಡಿದ ನಂತರ ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಎಂದು ಶಾಸಕ ಎ.ಮಂಜು ತಿಳಿಸಿದ್ದಾರೆ. ಹೊಳೆನರಸೀಪುರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕಟ್ಟಡ ಸೀಳಿರುವ ವರದಿಯ ನಂತರ ಕ್ರಮ ಎಂದ ಶಾಸಕ । ಗಣಿಗಾರಿಕೆ ಬಗ್ಗೆ ಒಂದಿಷ್ಟೂ ಆಕ್ಷೇಪಿಸದ ಮಂಜು

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ದೊಡ್ಡಕಾಡನೂರಿನ ಪಶು ಆಸ್ಪತ್ರೆಯ ಕಟ್ಟಡವು ಪಕ್ಕದ ಗ್ರಾಮ ಒಂದರಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಸ್ಫೋಟದಿಂದಾಗಿ ಸೀಳು ಬಿಟ್ಟಿದೆ. ಎಂಜಿನಿಯರ್‌ ಕಟ್ಟಡ ಸೀಳು ಬಿಟ್ಟಿರುವ ನಕಲು ಪ್ರತಿ ನೀಡಿದ ನಂತರ ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಎಂದು ಶಾಸಕ ಎ.ಮಂಜು ತಿಳಿಸಿದ್ದಾರೆ.

ಆದರೆ ಗಣಿಕಾರಿಕೆಯಿಂದ ಕಟ್ಟಡ ಸೀಳು ಬಿಟ್ಟಿರುವಾಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಲಿಲ್ಲ. ಗ್ರಾಮೀಣ ಜನರು ಅನುಭವಿಸುತ್ತಿರುವ ಮಾನಸಿಕ ಹಿಂಸೆ ಮತ್ತು ಅವರ ಮನೆ ಸೀಳು ಬಿಟ್ಟಿರುವ ಬಗ್ಗೆ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸದೇ ಇದ್ದದ್ದು ನಾನಾ ರೀತಿಯ ಅನುಮಾನಗಳಿಗೆ ಕಾರಣವಾಯಿತು.

ತಾಲೂಕಿನ ಹಳ್ಳಿಮೈಸೂರು ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎ.ಮಂಜು ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜನೆ ಮಾಡಲಾಗಿತ್ತು. ದೊಡ್ಡಕಾಡನೂರು ಗ್ರಾಮದ ಪಶು ಆಸ್ಪತ್ರೆ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಆದ್ದರಿಂದ ಹೊಸ ಕಟ್ಟಡದ ಅಗತ್ಯವಿದೆ ಎಂದು ಪಶು ಇಲಾಖೆ ಅಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು. ಜಿ.ಪಂ. ಎಂಜಿನಿಯರ್ ಪ್ರಶಾಂತ್ ಅವರು ಕಟ್ಟಡದ ನೈಜ ಸ್ಥಿತಿಯ ಬಗ್ಗೆ ತಿಳಿಸುತ್ತ ಗಣಿಕಾರಿಕೆಯ ಸ್ಫೋಟದಿಂದ ಸೀಳು ಬಿಟ್ಟಿದೆ ಎಂದು ತಿಳಿಸಿದಾಗ, ನಿಮ್ಮ ಹೇಳಿಕೆಯನ್ನು ಲಿಖಿತದಲ್ಲಿ ನೀಡಿ ಎಂದು ಶಾಸಕರು ಸಲಹೆ ನೀಡಿದರು. ಆಗ ವರದಿ ನೀಡಿದ್ದೇನೆ ಎಂದು ಎಂಜಿನಿಯರ್ ತಿಳಿಸಿದರು.

ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಶೃತಿ ಅವರಿಂದ ಮಾಹಿತಿ ಪಡೆದು ಎಲ್ಲೆಲ್ಲಿ ಗಿಡ ನೆಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ, ರಸ್ತೆ ಬದಿ ಮತ್ತು ನಾಲೆಗಳ ಪಕ್ಕದಲ್ಲಿ ನೆಟ್ಟಿದ್ದೇವೆ ಎಂದು ಉತ್ತರಿಸಿದರು. ಲೋಕೊಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಯಿಂದ ಅನುಮತಿ ಪಡೆದಿದ್ದೀರಾ?, ಇಲ್ಲವೆಂದು ಹೇಳುವುದಾದರೆ ನೀವು ಗಿಡಗಳನ್ನು ನೆಟ್ಟಿದ್ದೀರಿ ಎಂದುದನ್ನು ಹೇಗೆ ನಂಬುವುದು. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕೆಲಸವು ಕ್ರಮಬದ್ಧವಾಗಿರಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್ ಅಹಮದ್ ಅವರು ಹಳ್ಳಿಮೈಸೂರಿನ ಪ್ರಿ ಮೆಟ್ರಿಕ್ ಹಾಸ್ಟೆಲ್‌ನ ನೂತನ ಕಟ್ಟಡದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇದ್ದು, ವ್ಯವಸ್ಥೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು. ಅಗತ್ಯ ವ್ಯವಸ್ಥೆ ಕಲ್ಪಿಸದೇ ಇದ್ದ ಮೇಲೆ ಕಟ್ಟಡ ಉದ್ಘಾಟನೆ ಏಕೆ ಮಾಡಿಸಿದ್ರಿ ಎಂದು ಪ್ರಶ್ನಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಲು ತುರ್ತಾಗಿ ಕ್ರಮಕೈಗೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.

ಕೃಷಿ ಇಲಾಖೆ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ ನೀಡಿದರು.

ಶಾಸಕ ಎ.ಮಂಜು ಅವರು ದೊಡ್ಡಕಾಡನೂರಿನ ಪಶು ಆಸ್ಪತ್ರೆಯ ಕಟ್ಟಡ ಸೀಳು ಬಿಟ್ಟಿರುವ ಗಣಿಕಾರಿಕೆ ವಿಷಯದಲ್ಲಿ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ವರ್ತನೆಯೂ ಹಲವರಲ್ಲಿ ಗೊಂದಲ ಮೂಡಿಸಿದೆ.

ಹಳ್ಳಿಮೈಸೂರಿನ ಗ್ರಾಪಂ ಅಧ್ಯಕ್ಷ ನಾಗೇಂದ್ರ, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾಪಂ ಪ್ರಭಾರ ಇಒ ಗಿರೀಶ್, ಬಿಇಒ ಸೋಮಲಿಂಗೇಗೌಡ, ತಾಪಂ ಸಹಾಯಕ ನಿರ್ದೇಶಕ ಕೆ.ಅರುಣ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ, ಬಿಸಿಎಂ ಇಲಾಖೆ ಅಧಿಕಾರಿ ಹರೀಶ್, ಉಪ ತಹಸೀಲ್ದಾರ್ ಶಿವಕುಮಾರ್, ರಾಜಸ್ವ ನಿರೀಕ್ಷಕ ಉದಯ ಕುಮಾರ್, ಇತರರು ಇದ್ದರು.