ಭಟ್ಕಳ:
ತಾಲೂಕಿನ ಹೆಬಳೆಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ದಶಮಾನೋತ್ಸವ ಮತ್ತು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.ಆನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಸರ್ಕಾರ ರೈತರಿಗೆ ನೀಡುವ ಪ್ರಾಮುಖ್ಯತೆಯನ್ನು ಕಾರ್ಮಿಕರಿಗೂ ನೀಡುತ್ತಿದೆ. ಕಾರ್ಮಿಕರಿಗಾಗಿ ಹಲವು ಶಿಷ್ಯವೇತನ, ಮದುವೆ ಪ್ರೋತ್ಸಾಹಧನ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಧನವನ್ನು ₹5 ಲಕ್ಷದಿಂದ ₹8 ಲಕ್ಷಕ್ಕೆ ಏರಿಸಲಾಗಿದೆ. ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಭಟ್ಕಳದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಿಕ್ಷಣಕ್ಕಾಗಿ ₹50 ಕೋಟಿ ವೆಚ್ಚದ ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಭಟ್ಕಳದಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು ಮುಂಜಾನೆ ಒಂದೆಡೆ ಸೇರಲು ಅನುಕೂಲವಾಗುವಂತಹ ತಂಗುದಾಣ ನಿರ್ಮಿಸುವಂತೆ ಸಂಘದವರು ಬೇಡಿಕೆ ಇರಿಸಿದ್ದು, ಎಲ್ಲಿ ಆಗಬೇಕು ಎಂದು ಜಾಗ ತೋರಿಸಿಕೊಟ್ಟಲ್ಲಿ ತಂಗುದಾಣ ನಿರ್ಮಿಸಿಕೊಡಲಾಗುವುದು. ಮಳೆಗಾಲದಲ್ಲಿ ಕೆಲಸವಿಲ್ಲದೆ ಮನೆಯಲ್ಲಿರುವ ಮೀನುಗಾರರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುವ ಹಾಗೆ ಕಾರ್ಮಿಕರಿಗೂ ಪ್ರೋತ್ಸಾಹಧನ ನೀಡುವ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಹೇಳಿದರು.ಡಿವೈಎಸ್ಪಿ ಬಿ. ಗಿರೀಶ ಮಾತನಾಡಿ, ಮೂಲಭೂತ ಸೌಕರ್ಯ ಹೊಂದಿರದ ಕಾರ್ಮಿಕರ ಮಕ್ಕಳು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ. ಕಾರ್ಮಿಕರು ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ತಮ್ಮ ಜೀವದ ಭದ್ರತೆಗೆ ಅಗತ್ಯ ಜೀವವಿಮೆ ಮಾಡಿಸಿಕೊಳ್ಳಬೇಕು ಎಂದರು.
ಭಟ್ಕಳ ಕಾರ್ಮಿಕ ಇಲಾಖೆ ನಿರೀಕ್ಷಕ ಗುರುಪ್ರಸಾದ ನಾಯ್ಕ ಮಾತನಾಡಿ, ಕಾರ್ಮಿಕ ಇಲಾಖೆಯ ಸವಲತ್ತು ಪಡೆದುಕೊಳ್ಳಲು ಎಲ್ಲ ಕಾರ್ಮಿಕರು ತಮ್ಮ ಕಾರ್ಮಿಕ ಕಾರ್ಡನ್ನು ಪ್ರತಿ ವರ್ಷ ಪರಿಶೀಲಿಸಿ ನವೀಕರಣ ಮಾಡಿಕೊಳ್ಳುವಂತೆ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಅರುಣಕುಮಾರ, ವಕೀಲ ಮಂಜು ಗೊಂಡ, ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಬಾಲಕಾರ್ಮಿಕ ಇಲಾಖೆ ನಿರೀಕ್ಷಕ ಸಂದೇಶ ಗಾಂವಕರ, ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಶ್ರೀಧರ ಎಂ. ನಾಯ್ಕ, ಅಧ್ಯಕ್ಷ ಶ್ರೀಧರ ನಾರಾಯಣ ನಾಯ್ಕ ಮಾತನಾಡಿದರು.
ಭಟ್ಕಳ ಪೇಂಟಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ರಾಮ ನಾಯ್ಕ, ಭಟ್ಕಳ ಕಾರ್ಪೆಂಟರ್ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು. ಸಂಘದ ದಶಮಾನೋತ್ಸವ ಸಂದರ್ಭದಲ್ಲಿ ಸಂಘದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದ ಸಂಘಟಕರನ್ನು ಸನ್ಮಾನಿಸಿ ಗೌರವಿಸಲಾಯಿತು.