ಗ್ಯಾರಂಟಿ ಯೋಜನೆ ಹಣ ನೀಡದೇ ಸರ್ಕಾರ ಮಹಿಳೆಯರಿಗೆ ವಂಚನೆ - ಸಂಸದ ಬಸವರಾಜ ಬೊಮ್ಮಾಯಿ

| N/A | Published : Feb 22 2025, 12:45 AM IST / Updated: Feb 22 2025, 01:14 PM IST

Basavaraj Bommai
ಗ್ಯಾರಂಟಿ ಯೋಜನೆ ಹಣ ನೀಡದೇ ಸರ್ಕಾರ ಮಹಿಳೆಯರಿಗೆ ವಂಚನೆ - ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಈಗ ಅವರಿಗೆ ಸರಿಯಾದ ಸಮಯದಲ್ಲಿ ಹಣವನ್ನು ನೀಡದೇ ಮಹಿಳೆಯರು ಹಾಗೂ ಜನರ ಕಣ್ಣಲ್ಲಿ ರಾಜ್ಯ ಸರ್ಕಾರ ಮಣ್ಣು ಹಾಕುತ್ತಿದೆ ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ: ತಮ್ಮ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಈಗ ಅವರಿಗೆ ಸರಿಯಾದ ಸಮಯದಲ್ಲಿ ಹಣವನ್ನು ನೀಡದೇ ಮಹಿಳೆಯರು ಹಾಗೂ ಜನರ ಕಣ್ಣಲ್ಲಿ ರಾಜ್ಯ ಸರ್ಕಾರ ಮಣ್ಣು ಹಾಕುತ್ತಿದೆ ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ತಿಂಗಳುಗಳಿಂದ ಗ್ಯಾರಂಟಿ ಯೋಜನೆಗಳ ಹಣವನ್ನು ನೀಡಿಲ್ಲ, ಇದರ ಬಗ್ಗೆ ಕೇಳಿದರೆ ಗೃಹಲಕ್ಷ್ಮೀ ಯೋಜನೆಯ ಹಣ ಸಂಬಳವೇ ಅಂತಾ ಕೇಳುತ್ತಾರೆ. ನಿಮ್ಮ ಪ್ರಕಾರ ಅದು ಗೌರವಧನವಾಗಿದ್ದರೆ. ಪ್ರತಿ ತಿಂಗಳು ತಿಂಗಳಿಗೆ ಕೊಟ್ಟಿಲ್ಲ ಅಂದರೆ ನೀವು ಹಾಗೂ ನಿಮ್ಮ ಸರ್ಕಾರ ಮಹಿಳೆಯರಿಗೆ ಗೌರವ ಕೊಟ್ಟಿಲ್ಲ ಎಂದು ಅರ್ಥವಲ್ಲವೇ? ರಾಜ್ಯ ಸರ್ಕಾರದ ಹಣಕಾಸಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎನ್ನುವುದಕ್ಕೆ ಗ್ಯಾರಂಟಿ ಯೋಜನೆಗಳ ಹಣವನ್ನು ನೀಡದೇ ಇರುವುದೇ ಉತ್ತಮ ಉದಾಹರಣೆಯಾಗಿದೆ ಎಂದರು.

ರಾಜ್ಯದಲ್ಲಿ ಬೇಸಿಗೆ ಆರಂಭವಾಗುತ್ತಿದೆ. ಆದರೆ ಇದುವರೆಗೆ ಕುಡಿಯುವ ನೀರಿಗೆ ಸರಿಯಾದ ಅನುದಾನ ಬಿಡುಗಡೆ ಮಾಡಿಲ್ಲ. ಇದರೊಟ್ಟಿಗೆ ಈ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳೇ ಗತಿಸಿದರೂ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಂಠಿತವಾಗಿವೆ. ರಾಜ್ಯ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಹಲವಾರು ಗಲಭೆಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ.

ರಾಜ್ಯ ಸರಕಾರ ಏಕಾಏಕಿ ವಿಶ್ವವಿದ್ಯಾಲಯ ಮುಚ್ಚುವ ಕೆಲಸವನ್ನು ಮಾಡುತ್ತದೆ. ಈ ಕುರಿತು ಹೈಕೋರ್ಟ್ ಆದೇಶ ನೀಡಿದೆ, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ರಾಜ್ಯದಲ್ಲಿ ಬುದ್ಧಿ ಜೀವಿಗಳು, ವಿದ್ಯಾರ್ಥಿಗಳು ಕೂಡಾ ಈ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ನಾವು ಕೂಡ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿವಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಿರಂತವಾಗಿ ನಡೆಯುತ್ತಿದೆ ಎಂದರು.

ನೂತನ ವಿವಿಗಳನ್ನು ಮುಚ್ಚುವುದರಿಂದಾಗಿ ಹಲವಾರು ಹಿಂದುಳಿದ ವರ್ಗಗಳ ಬಡವರ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಅಭಿಪ್ರಾಯಿಸಿದರು.

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲವಿಲ್ಲದೇ ಪಕ್ಷದ ನಾಯಕರು ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ಕೇಸ್‌ ಸಂಬಂಧ ನಾವು ಹೈಕೋರ್ಟ್‌ಗೆ ಹೋಗುವ ತೀರ್ಮಾನ ಕೈಗೊಂಡಿದ್ದೇವೆ. ಹೈಕೋರ್ಟ್‌ನಲ್ಲಿ ನಮಗೆ ಉತ್ತಮ ಬೆಂಬಲ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.