ಸಾರಾಂಶ
ವಿದ್ಯಾರ್ಥಿಗಳು, ಯುವಕರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ. ಶಿಕ್ಷಣ ಇದ್ದರೂ ಪೂರಕ ಉದ್ಯೋಗ ಸವಾಲು: ಪಾಟೀಲ್
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯಾರ್ಥಿಗಳು ಮತ್ತು ಯುಜನರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರತಿಯೊಬ್ಬರ ಸ್ವಾವಲಂಬನೆಗೂ ನಾವು ಆದ್ಯತೆ ನೀಡಿದ್ದೇವೆ ಎಂದು ಕೌಶಲ್ಯಾಭಿವೃದ್ದಿ ಸಚಿವ ಡಾ। ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.ಕೆಂಪೇಗೌಡ ರಸ್ತೆಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ)ಯಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯಮಶೀಲತೆ ಅಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು, ಯುವಕರಿಗೆ ಉತ್ತಮ ಭವಿಷ್ಯ ರೂಪಿಸಿ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಯುವ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆ ಜಾರಿಗೊಳಿಸುತ್ತಿದ್ದೇವೆ. ಇಂದು ಉತ್ತಮ ಶಿಕ್ಷಣ ಪಡೆದಿದ್ದರೂ ಪ್ರತಿಭೆಗೆ ಪೂರಕವಾದ ಉದ್ಯೋಗ ಸಿಗದಿರುವುದು ಸವಾಲಾಗಿ ಪರಿಣಮಿಸುತ್ತಿದೆ.ಇಂತಹ ಸಂದರ್ಭದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದು ಕ್ಯಾಂಪಸ್ ಆಯ್ಕೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಅರ್.ಸಿ.ಲಾಹೋಟಿ, ಉಪಾಧ್ಯಕ್ಷರಾದ ಎಂ.ಜಿ.ಬಾಲಕೃಷ್ಣ, ಉಮಾ ರೆಡ್ಡಿ, ಸಮಾಜ ಕಲ್ಯಾಣ ಮತ್ತು ಉದ್ಯೋಗ ಸಮಿತಿ ಅಧ್ಯಕ್ಷ ಸಿ.ಪೆರುಮಾಳ್ ಉಪಸ್ಥಿತರಿದ್ದರು.