ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ದಿನೇಶ ಗುಂಡೂರಾವ್

| Published : Oct 25 2024, 12:55 AM IST

ಸಾರಾಂಶ

ಸಿಎಂ ಸಿದ್ದರಾಮ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಿತ ಗಮನದಲ್ಲಿಟ್ಟುಕೊಂಡು ಆರೋಗ್ಯ ಸೇವೆ ನೀಡಲು ಬದ್ಧವಾಗಿದೆ.

ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಚಿವ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಿಎಂ ಸಿದ್ದರಾಮ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಹಿತ ಗಮನದಲ್ಲಿಟ್ಟುಕೊಂಡು ಆರೋಗ್ಯ ಸೇವೆ ನೀಡಲು ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ₹೮೫೬ ಕೋಟಿ ಅನುದಾನವು ಅನುಮೋದನೆಯಾಗಿದ್ದು, ಮುಂದಿನ ಎರಡು ವರ್ಷದಲ್ಲಿ ೨ ಹೊಸ ಜಿಲ್ಲಾಸ್ಪತ್ರೆಗಳು, ೮ ಉಪವಿಭಾಗ ಆಸ್ಪತ್ರೆಗಳು, ಹೊಸ ಸಿಎಚ್‌ಸಿಗಳು ಹಾಗೂ ಪಿಎಚ್‌ಸಿಗಳನ್ನು ಮಾಡಲಾಗುತ್ತಿರುವುದು ದಾಖಲೆಯಾಗಿದೆ ಎಂದರು.

ಈಗಾಗಲೇ ತಾಲೂಕಿನಲ್ಲಿ ಈ ಮೂರು ಪಿಎಚ್‌ಸಿಗಳನ್ನು ತ್ವರಿತವಾಗಿ ತಾತ್ಕಾಲಿಕ ಕಟ್ಟಡದಲ್ಲಿ ಪ್ರಾರಂಭಿಸಿ, ಜನರಿಗೆ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಟೆಂಡರ್ ಕರೆದು ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. ಇನ್ನೂ ಕಾರಟಗಿ ಮತ್ತು ಕನಕಗಿರಿಯ ಆಸ್ಪತ್ರೆಗಳನ್ನು ಸಹ ಮೇಲ್ದರ್ಜೆಗೇರಿಸಲಾಗುವುದು ಎಂದರು.ಸರ್ಕಾರದ ಯೋಜನೆಗಳನ್ನು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ತರುವಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಯವರ ಪರಿಶ್ರಮ ಅಪಾರ. ಒಂದು ಕ್ಷೇತ್ರವನ್ನು ಯಾವ ರೀತಿಯಾಗಿ ಅಭಿವೃದ್ಧಿ ಪಡಿಸಬೇಕೆಂಬುವುದನ್ನು ರಾಯರಡ್ಡಿಯವರನ್ನು ನೋಡಿ ಇತರರು ಕಲಿಯಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಈ ಭಾಗದ ಜನರ ಆರೋಗ್ಯ ಹಿತದೃಷ್ಟಿಯಿಂದ ಮೂರು ಪಿಎಚ್‌ಸಿಗಳನ್ನು ಮಂಜೂರು ಮಾಡಿ ವೈದ್ಯರು, ಸ್ಟಾಪ್ ನರ್ಸ್, ಇತರೆ ಸಿಬ್ಬಂದಿ, ಔಷಧಿಗಳು ಹಾಗೂ ಅಗತ್ಯ ಪರಿಕರಗಳೊಂದಿಗೆ ಸೇವೆ ಆರಂಭಿಸಲಾಗಿದೆ. ಇವುಗಳ ಕಟ್ಟಡ ನಿರ್ಮಾಣಕ್ಕೆ ತಲಾ ₹೪ ಕೋಟಿ ಮಂಜೂರು ಮಾಡಲಾಗಿದೆ. ಚಿಕ್ಕಮ್ಯಾಗೇರಿಗೆ ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಡಿಎಚ್‌ಒ ಡಾ. ಟಿ. ಲಿಂಗರಾಜು, ಗಾಪಂ ಅಧ್ಯಕ್ಷ ಶರಣಪ್ಪ ಕುರಿ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ, ಮಲ್ಲಿಕಾರ್ಜುನ, ಎಸ್.ಎಂ. ದ್ಯಾಮಣ್ಣನವರ್, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಬಿ.ಎಂ. ಶಿರೂರ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಗ್ರಾಪಂ ಸದಸ್ಯರು ಇದ್ದರು.