ಸಾರಾಂಶ
ಮಲೆನಾಡು ರೈತರ ಭೂಮಿ ಹಕ್ಕು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಹಂತ ಹಂತವಾಗಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ನಾವು ಒಂದೇ ಹಂತದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಯಾವತ್ತೂ ನೀಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಕನ್ನಡಪ್ರಭ ವಾರ್ತೆ ಸಾಗರ ಮಲೆನಾಡು ರೈತರ ಭೂಮಿ ಹಕ್ಕು ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಹಂತ ಹಂತವಾಗಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ನಾವು ಒಂದೇ ಹಂತದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ಯಾವತ್ತೂ ನೀಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಪಟ್ಟಣದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನೆಗೆ ಶನಿವಾರ ಸಂಜೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ೧೨ ಸಾವಿರ ಎಕರೆ ಭೂಮಿ ಕಳೆದುಕೊಂಡಿರುವ ಮಾತಿದೆ. ಆದರೆ, ಸುಮಾರು ೫ ಸಾವಿರ ಎಕರೆ ಈವರೆಗೂ ನೀರಿನಲ್ಲಿ ಮುಳುಗಡೆಯಾಗಿಲ್ಲ. ಈಗಲೂ ಜಮೀನನ್ನು ಅನುಭವಿಸುತ್ತಿರುವ ಮೂಲನಿವಾಸಿಗಳು ಅಲ್ಲೇ ಇದ್ದಾರೆ. ಅದೆಲ್ಲವನ್ನೂ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ವಿಧಾನಸಭೆ ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲೂ ಮಲೆನಾಡು ರೈತರ ಭೂ ಹಕ್ಕಿನ ಬಗ್ಗೆ ಉಲ್ಲೇಖಿಸಿದ್ದು, ರೈತರ ಪ್ರತಿಭಟನೆ ವಿಚಾರವನ್ನು ಮುಖ್ಯಮಂತ್ರಿ, ಅರಣ್ಯ ಸಚಿವರ ಗಮನಕ್ಕೆ ತರುವುದಲ್ಲದೇ, ಸಮಸ್ಯೆ ಪರಿಹಾರಕ್ಕೆ ಈಗಲೂ ಬದ್ಧರಿದ್ದೇವೆ ಎಂದು ಭರವಸೆ ನೀಡಿದರು.ಜಾತಿ ಗಣತಿ ವರದಿ ಬಹಿರಂಗಕ್ಕೆ ಬದ್ಧ:
ಜಾತಿ ಗಣತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ರಾಜ್ಯದ ತೆರಿಗೆದಾರರ ₹೧೬೦ ಕೋಟಿ ವೆಚ್ಚದಲ್ಲಿ ಜಾತಿ ಗಣತಿ ನಡೆಸಲಾಗಿದೆ. ಇದನ್ನು ಸಾರ್ವಜನಿಕಗೊಳಿಸುವುದು ನಮ್ಮ ಸರ್ಕಾರದ ಆದ್ಯತೆ. ಈ ತೀರ್ಮಾನದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಯಾವುದೇ ಸ್ವಾಮೀಜಿಯವರು ಚುನಾವಣೆ ಗೆದ್ದು, ಅಧಿಕಾರ ನಡೆಸುವುದಿಲ್ಲ. ಹೀಗಾಗಿ, ಅವರ ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಈ ಸಂಬಂಧ ಪಕ್ಷದ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದನ್ನು ಗೌರವಿಸಬೇಕು, ಅಪಾರ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಮಜಾಯಿಷಿ ನೀಡಿದರು.ಈ ಸಂದರ್ಭ ಶಾಸಕ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ನಗರ ಘಟಕದ ಅಧ್ಯಕ್ಷ ಸುರೇಶ್ ಬಾಬು, ಡಿ.ದಿನೇಶ್, ಅನಿತಾ ಕುಮಾರಿ, ವೆಂಕಟೇಶ್ ಮೆಳವರಿಗೆ, ಅನೀಸ್ ಖಾನ್, ವಿಲ್ಸನ್ ಗೊನ್ಸಾಲ್ವಿಸ್, ಅಶೋಕ್ ಬೇಳೂರು, ಸೋಮಶೇಖರ್ ಲ್ಯಾವಿಗೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರಿಗೆ ಶರಾವತಿ ನೀರು ಪ್ರಸ್ತಾವನೆ ಬಂದಿದ್ದು ನಿಜ! ಬೆಂಗಳೂರು ನಿಂತರವಾಗಿ ಬೆಳೆಯುತ್ತಿದ್ದು, ಈಗಾಗಲೇ ೫ನೇ ಹಂತದಲ್ಲಿ ಕಾವೇರಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನದಲ್ಲಿ ಕಾವೇರಿ ನೀರು ಪಡೆಯಲು ೬ನೇ ಹಂತದ ಯೋಜನೆಗೆ ಅವಕಾಶವಿಲ್ಲದ ಕಾರಣಕ್ಕೆ, ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹೊಸ ಮಾರ್ಗೋಪಾಯ ಅವಲೋಕಿಸುತ್ತಿದ್ದೇವೆ. ಎಲ್ಲಿಂದಲಾದರೂ ಬೆಂಗಳೂರಿಗೆ ನೀರು ತರಬೇಕೆನ್ನುವ ಸಲಹೆ ಬಂದಾಗ ಶರಾವತಿ ನದಿ ನೀರಿನ ವಿಚಾರವೂ ಪ್ರಸ್ತಾಪವಾಗಿದ್ದು, ಪರಿಶೀಲನೆ ನಡೆಸಿದ್ದೇವೆ. ಮತ್ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.ಸಾಗರದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಗೌರವಿಸಲಾಯಿತು.