ಸಾರಾಂಶ
ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿ ಪರ ಚಿಂತನೆ ನಡೆಸುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿ ಪರ ಚಿಂತನೆ ನಡೆಸುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕಾಯಕ ಬಂಧುಗಳಿಗೆ ತರಬೇತಿ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮಹಿಳಾ ಸಮುದಾಯದ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ. ಸುಮಾರು ೩೦೦ಕ್ಕೂ ಹೆಚ್ಚು ಕಾಯಕ ಬಂಧುಗಳು ಪ್ರಶಸ್ತಿ ಪ್ರಮಾಣ ಪತ್ರ ಪಡೆದಿದ್ದಾರೆ. ಪ್ರಮಾಣ ಪತ್ರ ಪಡೆದವರೆಲ್ಲರಿಗೂ ತಮ್ಮ ಉದ್ಯೋಗಾವಕಾಶ ಮತ್ತು ಉಜ್ವಲ ಅವಕಾಶದ ಬಗ್ಗೆ ಆತ್ಮವಿಶ್ವಾಸ ಮೂಡುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಮಾತನಾಡಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಗ್ರಾಮ ಸ್ವರಾಜ್ ಅಭಿಯಾನದಡಿ ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟದೊಂದಿಗೆ ಆಯ್ದ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ತರಬೇತಿ ಅವಧಿಯಲ್ಲಿ ವಿಶೇಷ ತಾಂತ್ರಿಕತೆಯಿಂದ ಕೂಡಿದ ವಿಚಾರಗಳ ಬಗ್ಗೆ ತಜ್ಞರು ಮಾಹಿತಿ ನೀಡಿದ್ಧಾರೆ.ಗ್ರಾಮೀಣ ಭಾಗದ ಜನರಲ್ಲಿ ಈ ತರಬೇತಿ ಹೆಚ್ಚು ಆತ್ಮವಿಶ್ವಾಸವನ್ನು ಹುಟ್ಟುಹಾಕಿದೆ. ಸರ್ಕಾರಿ ಉದ್ಯೋವನ್ನು ಬಯಸಿಹೋಗುವ ಬದಲಾಗಿ ಇಂತಹ ತರಬೇತಿ ಮೂಲಕ ಸ್ವಾವಲಂಬಿಗಳಾಗಿ ಬದುಕನ್ನು ಸಹ ರೂಪಿಸಿಕೊಳ್ಳಲು ಸರ್ಕಾರ ಈ ಮೂಲಕ ನೆರವು ನೀಡುತ್ತಿದೆ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ತಾಲೂಕು ಪಂಚಾಯಿತಿ ಕೆಡಿಪಿಸದಸ್ಯರಾದ ಅಂಗಡಿರಮೇಶ್, ಸುರೇಶ್‌ಕುಮಾರ್, ನಗರಸಭಾ ಸದಸ್ಯ ರಮೇಶ್‌ಗೌಡ, ಶಶಿಧರ ಮುಂತಾದವರು ಭಾಗವಹಿಸಿದ್ದರು.