ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲಾಗುತ್ತಿದೆ

ಕಂಪ್ಲಿ: ರೈತರಿಗೆ ಸಮರ್ಪಕ ವಿದ್ಯುತ್ ಸಿಗದೆ ಬೆಳೆಗಳು ನಾಶವಾಗುತ್ತಿವೆ. ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಬಡವರು, ದಲಿತರು ಹಾಗೂ ಯುವಕರ ಪಾಲಿಗೆ ಸತ್ತುಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ನಡೆದ ಬಳ್ಳಾರಿ ಪಾದಯಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬೆಂಗಳೂರನ್ನು ಅಪ್ಪಿಕೊಂಡಿದ್ದು, ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

2028ರ ಬಳಿಕವೂ ಮತ್ತೊಮ್ಮೆ ಐದು ವರ್ಷ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಜನರ ಸಮಸ್ಯೆ ಪರಿಹರಿಸಬೇಕು. ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯಿಂದ ಮುಖ್ಯಮಂತ್ರಿ ನಿದ್ದೆ ಕಳೆದುಕೊಂಡಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಮತ್ತೆ ವಾಪಸ್ ಬರಬೇಕು. ಎಸ್‌ಸಿಪಿ-ಟಿಎಸ್‌ಪಿ ಹಣ ದಲಿತರಿಗೆ ಮರಳಿ ಸೇರುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಕೊನೆ ಉಸಿರಿರುವವರೆಗೂ ನಿಮ್ಮ ಋಣ ತೀರಿಸುತ್ತೇನೆ: ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕೊನೆ ಉಸಿರಿರುವವರೆಗೂ ನಿಮ್ಮ ಋಣ ತೀರಿಸುತ್ತೇನೆ ಎಂದು ಕಾರ್ಯಕರ್ತರು ಹಾಗೂ ಜನರಿಗೆ ಭರವಸೆ ನೀಡಿದರು.

ವಾಲ್ಮೀಕಿ ಸಮಾಜದ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಸೋಲಿಸಿದ ಪಾಪದ ಕರ್ಮ ಕಾಂಗ್ರೆಸ್ ನಾಯಕರನ್ನು ಸುತ್ತಿಕೊಂಡಿದೆ ಎಂದು ಟೀಕಿಸಿದರು.

ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಆದರೆ, ಕಾಂಗ್ರೆಸ್ ಶಾಸಕರು ತಾವು ಮಾಡಿರುವ ಕಾಮಗಾರಿಗಳ ಬಗ್ಗೆ ಮಾತನಾಡುತ್ತಾರೆ. ರಸ್ತೆ ಕಾಮಗಾರಿಯನ್ನೂ ತಾವೇ ಮಾಡಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಆ ರಸ್ತೆ ಕಾಮಗಾರಿ ಶ್ರೀರಾಮುಲು ಅವರ ಅವಧಿಯಲ್ಲಿ ಆಗಿದೆ ಎಂದು ಹೇಳಿದರು.

14 ವರ್ಷಗಳ ಕಾಲ ತಮ್ಮನ್ನು ಬಳ್ಳಾರಿ ಜನರಿಂದ ದೂರ ಇಡಲಾಗಿತ್ತು. ತಮ್ಮ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿ ತೊಂದರೆ ನೀಡಲಾಗಿತ್ತು ಎಂದು ಆರೋಪಿಸಿದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೆಡ್ಡಿ, ನನ್ನ ಅನುಪಸ್ಥಿತಿಯಲ್ಲಿ ನನ್ನ ಆಶೀರ್ವಾದ ಇದೆ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದರು. ಕಾರ್ಯಕರ್ತರಿಗೆ ತೊಂದರೆ ನೀಡಿದರೆ ತಾವು ಹಾಗೂ ಶ್ರೀರಾಮುಲು ಪೊಲೀಸರ ವಿರುದ್ಧವೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

2028ಕ್ಕೆ ಬಿಜೆಪಿ ಅಧಿಕಾರಕ್ಕೆ: 2006ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನರು ಆಶೀರ್ವದಿಸಿದ ರೀತಿಯಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡಿ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಜನಾರ್ದನ ರೆಡ್ಡಿ ಮನವಿ ಮಾಡಿದರು.

ಕಳೆದ 20 ವರ್ಷಗಳಿಂದ ಬಳ್ಳಾರಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಇನ್ನೂ ಕೆಲವೇ ವರ್ಷ ಅಧಿಕಾರದಲ್ಲಿರಲಿದೆ. ರಾಜೀನಾಮೆ ನೀಡಿ ಚುನಾವಣೆಗೆ ಸಿದ್ಧರಾಗಲಿ ಎಂದು ಸವಾಲು ಹಾಕಿದರು.

ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಮಾತನಾಡಿದ ಅವರು, ಜನಾರ್ದನ ರೆಡ್ಡಿಯಿಂದ ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿ ನಷ್ಟವಾಗಿಲ್ಲ ಎಂದು ಸಿಬಿಐ ನ್ಯಾಯಾಲಯ ಹೇಳಿದೆ ಎಂದು ಹೇಳಿದರು.

ನಾಗೇಂದ್ರ ಪ್ರಕರಣದ ಅಧ್ಯಾಯ ಮುಗಿದಿದೆ: ಮಾಜಿ ಸಚಿವ ನಾಗೇಂದ್ರ ಅವರ ವಿಚಾರ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ನಾಗೇಂದ್ರ ಅವರ ರಾಜಕೀಯ ಅಧ್ಯಾಯ ಮುಗಿದಿದೆ. ಅವರನ್ನು ಶಂಭೂಕನನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ರೈತರಿಗೆ ಎರಡು ಬೆಳೆಗಳಿಗೆ ನೀರು ಒದಗಿಸುವುದು ಬಿಜೆಪಿಯ ಸಂಕಲ್ಪ ಎಂದರು.

2008ರಲ್ಲಿ ಜನಾರ್ದ ರೆಡ್ಡಿ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದುದನ್ನು ನೋಡಿದ್ದೇವೆ. ಈಗ ಅವರು ನೆಲಕ್ಕಿಳಿದು ರಾಜಕಾರಣ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ ಅವರು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಜನರು ಮರೆಯಬಾರದು ಎಂದರು.

ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು. ದಲಿತರು ಎಂಬ ಕಾರಣಕ್ಕೆ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ ಶ್ರೀರಾಮುಲು, ಸೂರ್ಯ-ಚಂದ್ರ ಇರುವವರೆಗೂ ಅಂಬೇಡ್ಕರ್ ಅವರ ಹೆಸರು ಉಳಿಯುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ರಾಜಾಹುಲಿ ಪುತ್ರ ಎಂದು ಬಣ್ಣಿಸಿದ ಶ್ರೀರಾಮುಲು, ವಿಜಯೇಂದ್ರ ಸಂಕಲ್ಪದೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರಿಗೆ ಕನಕದಾಸರು, ವಾಲ್ಮೀಕಿ ಹಾಗೂ ಅಂಬೇಡ್ಕರ್ ಅವರ ವಿಚಾರಗಳು ತಿಳಿದಿಲ್ಲ ಎಂದು ಟೀಕಿಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರು ಮೂರನೇ ಬೆಳೆ ಕಳೆದುಕೊಳ್ಳುತ್ತಿದ್ದಾರೆ: ರೈತರು ಈಗಾಗಲೇ ಎರಡು ಬೆಳೆ ಕಳೆದುಕೊಂಡಿದ್ದಾರೆ. ನೀರು ಸಿಗದ ಕಾರಣ ಮೂರನೇ ಬೆಳೆಯನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ರೈತರ ಸಮಸ್ಯೆ ಅರಿಯಬೇಕು. ಹೆಲಿಕಾಪ್ಟರ್‌ನಲ್ಲಿ ಓಡಾಡುವುದರಿಂದ ಬರ ಅಥವಾ ರೈತರ ಸಮಸ್ಯೆ ಕಾಣಿಸುವುದಿಲ್ಲ ಎಂದು ಶ್ರೀರಾಮುಲು ಹೇಳಿದರು.

ತಾವು ಸಚಿವರಾಗಿದ್ದಾಗ ಎರಡು ಬೆಳೆಗಳಿಗೆ ನೀರು ಒದಗಿಸಿದ್ದೇನೆ. ಈಗಿನ ಸರ್ಕಾರ ರೈತರಿಗಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷ ನಂಬಬೇಡಿ. ಅದು ಜನರಿಗೆ ಮೋಸ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿ ಎಲ್ಲಿರುತ್ತಾರೋ ಅಲ್ಲಿ ಗೆಲುವು ಇರುತ್ತದೆ. ವಿಜಯೇಂದ್ರ ಅರ್ಜುನನಂತೆ, ಜನಾರ್ದನ ರೆಡ್ಡಿ ಕೃಷ್ಣನಂತೆ ಎಂದು ಬಣ್ಣಿಸಿದ ಶ್ರೀರಾಮುಲು, 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಹೋರಾಟ ನಡೆಸಲಾಗುತ್ತಿದೆ ಎಂದರು.

ಭಾನುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಪಾದಯಾತ್ರೆಯನ್ನು ಬಳ್ಳಾರಿ ಬಿಜೆಪಿ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದರು. ತುಂಗಭದ್ರಾ ನದಿಗೆ ಬಾಗಿನ ಅರ್ಪಿಸುವ ಮೂಲಕ ಪಾದಯಾತ್ರೆ ಆರಂಭಿಸಲಾಯಿತು. ಬಳಿಕ ಅಂಬೇಡ್ಕರ್ ವೃತ್ತದ ಬಳಿ ಸಮಾವೇಶಗೊಂಡಿತು.