ಮುಳುಗಡೆ ಸಂತ್ರಸ್ಥರ ಶಾಶ್ವತ ಪರಿಹಾರಕ್ಕೆ ಸರ್ಕಾರ ಸಂಕಲ್ಪ

| Published : Nov 24 2024, 01:46 AM IST

ಮುಳುಗಡೆ ಸಂತ್ರಸ್ಥರ ಶಾಶ್ವತ ಪರಿಹಾರಕ್ಕೆ ಸರ್ಕಾರ ಸಂಕಲ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡಿನ ಜನರ ಬಹುಕಾಲದ ಬೇಡಿಕೆಯಾಗಿರುವ ಅರಣ್ಯ ಭೂಮಿ ಹಕ್ಕು ಮತ್ತು ಮುಳುಗಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕೊಡಿಸುವುದು ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ತೆಗದುಕೊಳ್ಳಬೇಕಾದ ತನ್ನ ಕ್ರಮಗಳನ್ನು ಮಂಬರುವ ಅಧಿವೇಶನದೊಳಗೆ ಪ್ರಕಟಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಈಗ ನ್ಯಾಯಾಲಯದ ಮುಂದಿದ್ದು, ಸಮಸ್ಯೆ ಬಗೆಹರಿಯದೆ ಉಳಿದಿರುವುದಕ್ಕೆ ಹಿಂದಿನ ಸರ್ಕಾರ ಮಾಡಿದ ತಪ್ಪುಗಳೂ ಇವೆ. ಅವುಗಳನ್ನು ನಾವೀಗ ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಈ ಕುರಿತು ಹೋರಾಟ ನಡೆಸಲು ಈಗಾಗಲೇ ರಾಜ್ಯ ಸರ್ಕಾರವು ಹಿರಿಯ ವಕೀಲರನ್ನು ನೇಮಿಸಿದೆ. ಅದರ ಜತೆಗೆ ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ನಾವು ಸರಿಪಡಿಸಿಕೊಂಡೆ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿರುವ ಕಾರಣಕ್ಕೆ ನಮ್ಮ ಸರ್ಕಾರ ಬಂದ ಕ್ಷಣದಿಂದಲೂ ಆ ನಿಟ್ಟಿನ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ತಿಳಿಸಿದರು.

ಟೀಕೆ ಟಿಪ್ಪಣಿಗಳು ಏನೇ ಇದ್ದರೂ ನಾವು ಯಾವುದನ್ನು ಮರೆತಿಲ್ಲ. ನಾನು ಕೂಡ ಬಗರ್ ಹುಕುಂ ರೈತರ ಪರವಾಗಿ ಹೋರಾಟ ಮಾಡಿದವನು. ಅಷ್ಟು ಮಾತ್ರವಲ್ಲ ಬಗರ್ ಹುಕುಂ ರೈತರ ಸಮಾವೇಶಕ್ಕೆ ಪಕ್ಷದ ನಾಯಕರನ್ನು ಆಹ್ವಾನಿಸಿದ್ದೆ. ಆ ನಿಟ್ಟಿನಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಬಂದ ಕ್ಷಣದಿಂದ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ವಿಚಾರವಾಗಿ ಅನೇಕ ಸಭೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.

ಕಳೆದ ನಾಲ್ಕೈದು ದಿನಗಳ ಹಿಂದೆ ರೈತ ಮುಖಂಡರ ಸಮ್ಮುಖದಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿದ್ದೆ. ಈ ರೀತಿಯ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಅರಣ್ಯ ಭೂಮಿ ಹಕ್ಕು ಹಾಗೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಈಗ ನ್ಯಾಯಾಲಯದ ಮೂಲಕವೇ ಬಗೆಹರಿಯಬೇಕಿದೆ ಎಂದು ಹೇಳಿದರು.

ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಕಾನೂನು ಹೋರಾಟ ನಡೆಸಬೇಕಿದೆ. ಅದಕ್ಕೆ ಕೇಂದ್ರ ಸರ್ಕಾರದ ನೆರವು ಕೂಡ ಬೇಕಿದೆ. ಅದಕ್ಕೂ ಮುಂಚೆ ನಮ್ಮ ಸರ್ಕಾರದ ನಿಲುವು, ನಿರ್ಧಾರಗಳನ್ನು ಮುಂಬರುವ ಚಳಿಗಾಲದ ಅಧಿವೇಶನದೊಳಗೆ ಸಿಎಂ ಸಿದ್ದರಾಮಯ್ಯ ನವರು ಪ್ರಕಟಿಲಿದ್ದಾರೆ.

ಮಲೆನಾಡು ಭಾಗದಲ್ಲಿ ಅನೇಕ ಸಚಿವರು ಹಾಗೂ ಶಾಸಕರಿದ್ದಾರೆ. ಅವರ ಅಭಿಪ್ರಾಯವೂ ಕೂಡ ಮುಖ್ಯವಾಗುತ್ತದೆ. ಅವರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಅಧಿವೇಶನದಲ್ಲಿ ಸರ್ಕಾರದ ನಿರ್ಧಾರ ಪ್ರಕಟವಾಗಲಿದೆ ಎಂದು ತಿಳಿಸಿದರು.

ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ನೋಟಿಸ್ ನೀಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಯಾವ ರೈತರಿಗೆ ನೋಟೀಸ್ ಕೊಟ್ಟರು ನಾವು ಜವಬ್ದಾರಿ ಆಗುತ್ತೇವೆ. ನೋಟೀಸ್ ಕೊಡುವುದು ಕಡಿಮೆಯಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯ ಕೊಡಿಸುತ್ತೇವೆ. ವಾರದಲ್ಲಿ 6 ದಿನ ಶಾಲೆಗಳಲ್ಲಿ ಮೊಟ್ಟೆಗಳ ವಿತರಣೆಯಲ್ಲಿ ಶಿಕ್ಷಕರಿಗೆ ಒತ್ತಡ ಹೆಚ್ಚುತ್ತಿದ್ದು, ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂಬ ಆರೋಪಗಳು ಬರುತ್ತಿದ್ದು, ಇದನ್ನು ಬಗೆಹರಿಸಲು ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಗೌರವಧನದ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಚಿಂತನೆ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮುಖಂಡರಾದ ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಆರ್.ಸಿ.ನಾಯಕ್, ಶರತ್ ಮರಿಯಪ್ಪ, ವಿನಯ್ ತಾಂದ್ಲೆ ಸೇರಿ ಇತರರು ಇದ್ದರು.