ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೆಲ ದಿನಗಳಿಂದ ಮತಕ್ಷೇತ್ರ ಸೇರಿದಂತೆ ಸಮಗ್ರ ಉತ್ತರ ಕರ್ನಾಟಕ ರೈತರು ನಿರಂತರ ಅತಿವೃಷ್ಟಿಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ, ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರು ರೈತರ ನೋವಿಗೆ ಸ್ಪಂದಿಸದೇ ಅನ್ಯಾಯ ಎಸಗುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕಿಡಿಕಾರಿದರು.ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಮತಕ್ಷೇತ್ರದಲ್ಲಿ ಸುಮಾರು ಒಂದೂವರೆ ಲಕ್ಷ ಎಕರೆಯಷ್ಟು ಬೆಳೆಹಾನಿಯಾಗಿದೆ. ಸುಮಾರು 1500 ಮನೆಗಳು ಹಾನಿಗೀಡಾಗಿವೆ. ಆದರೆ ಸ್ಥಳೀಯ ಶಾಸಕರು, ತಾಲೂಕಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಬಡ ರೈತರ ಕಣ್ಣೀರನ್ನು ಒರೆಸಲು ಸರ್ಕಾರ ಮುಂದೆ ಬಂದಿಲ್ಲ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಬಡವರ ಪರ ಸ್ಪಂದಿಸಲು ಆಗದೆ ಕುಳಿತಿದೆ ಎಂದು ದೂರಿದರು.
ಸ್ಥಳೀಯ ಶಾಸಕರು ಎರಡು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಆದರೆ ಒಂದೇ ಒಂದು ಹಳ್ಳಿಗೂ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಲು ಮುಂದೆ ಬಂದಿಲ್ಲ. ಸಾಧನೆಯ ಮಾತು ಬಿಟ್ಟು ಅಜ್ಜ- ಅಜ್ಜಿ ಕಥೆ ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಜನಮತ ಹಾಕಿದ್ದು ಕತೆ ಕೇಳಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಅಲ್ಲ ಎಂದರು.ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಗಳಲ್ಲಿ ಪರಿಹಾರ ವಿತರಿಸಲು ಒಂದು ರುಪಾಯಿ ಬಿಡಿಗಾಸೂ ಇಲ್ಲ. ಮೊಸಳೆ ದಾಳಿಯಿಂದ ಮರಣ, ಮಳೆಗೆ ಮನೆ ಕುಸಿತ, ತೋಳ ದಾಳಿಯಿಂದ ಕುರಿಗಳ ಸಾವು, ಭೀಮಾ ಪ್ರವಾಹದಲ್ಲಿ ಯುವಕನ ಮರಣ ಇಂತಹ ಘಟನೆಗಳು ನಡೆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ.
ಈ ಬಾರಿಯೂ ವಿಪರೀತ ಪ್ರಮಾಣದಲ್ಲಿ ಮಳೆಯಾಗಿದೆ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗ ಇದೇ ರೀತಿ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದರು. ಆಗ ಯಡಿಯೂರಪ್ಪನವರೇ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಆದರೆ ಇಂದಿನ ಸಿಎಂ ಸಿದ್ದರಾಮಯ್ಯನವರು ರೈತರ ಸ್ಥಿತಿಗತಿಯ ಬಗ್ಗೆ ಯಾವುದೇ ರೀತಿ ತಲೆ ಕೆಡಿಸಿಕೊಳ್ಳದೆ ಮೌನವಹಿಸಿದ್ದಾರೆ ಎಂದು ಆರೋಪಿಸಿದರು.ಈ ವೇಳೆ ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಕಾರ್ಯದರ್ಶಿ ಸಂಜು ಬಾಗೇವಾಡಿ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಂಕರಗೌಡ ಶಿವಣಗಿ, ಯುವಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಿರೇಮುರಾಳ, ಜಿಲ್ಲಾ ಮುಖಂಡ ಅಶೋಕ ರಾಠೋಡ, ನಾಗೇಶ ಕವಡಿಮಟ್ಟಿ ಇತರರು ಇದ್ದರು.
ದಸರಾ ಹಬ್ಬ ಮುಗಿದ ಕೂಡಲೇ ಶಾಸಕರು, ತಾಲೂಕು ಆಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಬಾಧಿತ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡುವ ಕೆಲಸ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ನಡೆಸಲು ನಾನು ಹಿಂಜರಿಯುವುದಿಲ್ಲ. ಕಾಂಗ್ರೆಸ್ ನಾಯಕರು ಸಮೀಕ್ಷೆಯಲ್ಲಿ ಹಿಂದು ಬರೆಸಬೇಡಿ, ಲಿಂಗಾಯತ ಬರೆಸಿ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ತಪ್ಪು. ಹಿಂದುಗಳು ಹಿಂದು ಎಂದೇ ಬರೆಸುತ್ತಾರೆ. ಹಿಂದು ಸಮಾಜ ವಿಭಜಿಸಲು ಕೆಲವರು ಮಾಡುತ್ತಿರುವ ಕುತಂತ್ರಕ್ಕೆ ಜನ ಮನ್ನಣೆ ಕೊಡುವುದಿಲ್ಲ.ಎ.ಎಸ್.ಪಾಟೀಲ ನಡಹಳ್ಳಿ, ರಾಜ್ಯಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ