ಕರ್ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಪಾಕಿಸ್ತಾನ ಮಾಡುತ್ತಿದೆ : ಜೋಶಿ ಕಿಡಿ

| Published : Sep 13 2024, 01:46 AM IST / Updated: Sep 13 2024, 11:29 AM IST

Prahlad Joshi
ಕರ್ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಪಾಕಿಸ್ತಾನ ಮಾಡುತ್ತಿದೆ : ಜೋಶಿ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಕ್ಷರಶಃ ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಕ್ಷರಶಃ ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬಂತಿರುವ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ರಾಜಕೀಯ ತುಷ್ಟೀಕರಣಕ್ಕಾಗಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದೆ. ಕಾಂಗ್ರೆಸ್‌ನ ಓಲೈಕೆ ಆಡಳಿತದಿಂದಾಗಿ ನಮ್ಮ ಕರ್ನಾಟಕದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ನೋಡಿ ಎಂದರು. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದೆ? ಆ ರೀತಿ ಕಾನೂನು, ನಿಯಮ ಎಲ್ಲಿದೆ? ಗಣೇಶ ಮೂರ್ತಿ ಇದ್ದರೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದೆಂಥ ನಾಗರೀಕತೆ? ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಹಬ್ಬಗಳು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಯಾಕಿಷ್ಟು ತಾತ್ಸಾರ ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯಿಂದ ಈ ರೀತಿಯ ಗಲಭೆ, ಘಟನೆಗಳು ಸಂಭವಿಸುತ್ತಿವೆ. ನಾಗಮಂಗಲದ ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

==ನಾಗಮಂಗಲ ಗಲಾಟೆ ಘಟನೆ ಪೂರ್ವಯೋಜಿತ ಕೃತ್ಯ: ಈಶ್ವರಪ್ಪಹುಬ್ಬಳ್ಳಿ: ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಗಲಭೆ ಪೂರ್ವ ಯೋಜಿತ. ಪಾಕಿಸ್ತಾನ ಮನಸ್ಥಿತಿಯ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ ರಾಷ್ಟ್ರದ್ರೋಹಿ ಚಟುವಟಿಕೆಗಳು ನಾಗಮಂಗಲದಲ್ಲಿ ನಡೆದಿದೆ. ಹಿಂದೂಗಳು ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಮುಂದೆ ಡೊಳ್ಳು ಬಾರಿಸಲಾಗಿದೆ ಎಂಬ ಕಾರಣಕ್ಕೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಸೀದಿ ಎದುರಿಗೆ ಡೊಳ್ಳು ಬಾರಿಸಬಾರದೆಂಬ ನಿಯಮ ಏನಾದರೂ ಇದೆಯಾ? ಮಸೀದಿ ಎದುರಿಗೆ ಮೆರವಣಿಗೆ ನಡೆಸಬಾರದೆಂಬ ನಿಯಮವಿದೆಯಾ ಎಂದು ಪ್ರಶ್ನಿಸಿದರು. ವಿಸರ್ಜನಾ ಮೆರವಣಿಗೆ ಯಾವ ಮಾರ್ಗದಲ್ಲಿ ತೆರಳುತ್ತದೆ ಎಂಬುದು ಪೊಲೀಸ್ ಇಲಾಖೆಗೆ ಗೊತ್ತೇ ಇರುತ್ತದೆ. ಮತ್ತೇಕೆ ರಕ್ಷಣೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.ಮೆರವಣಿಗೆ ಮೇಲೆ ಪೆಟ್ರೋಲ್‌ ಬಾಂಬ್‌, ಕಲ್ಲು ತೂರಾಟ ಮಾಡಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ಐವನ್‌ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜ್ಯದಲ್ಲಿ ಗಲಭೆ ನಡೆಯುತ್ತದೆ ಎಂಬ ಹೇಳಿಕೆ ನೀಡಿದ್ದರು. ಅದರಂತೆ ಪಾಕಿಸ್ತಾನ ಮನಸ್ಥಿತಿಯ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಗೃಹ ಸಚಿವರು ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳತ್ತೇವೆ ಎಂಬ ಹೇಳಿಕೆ ಕೊಡಬೇಕಿತ್ತು. ಅದು ಬಿಟ್ಟು ಅಮಾಯಕರು ಭಯ ಬೀಳುವಂತೆ ಮಾಡಿದ್ದಾರೆ. ನಾಗಮಂಗಲದಲ್ಲಿ ನಡೆದ ಗಲಾಟೆ ಸಣ್ಣದು ಎಂಬ ಹೇಳಿಕೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.