ಸಾರಾಂಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ (ಸಿಬಿಟಿ) ಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ (ಸಿಬಿಟಿ) ಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಸಿಇಟಿ ಸಂರಚನೆಯ ಬಗ್ಗೆ ಅಧ್ಯಯನ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ನರಸಿಂಹರಾಜು ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ಕಾರ ಸಿಇಟಿ ಮಾದರಿಯನ್ನು ಬದಲಾಯಿಸುವಾಗಲೂ ಈ ಸಮಿತಿಯು ಶಿಫಾರಸುಗಳನ್ನು ಸಲ್ಲಿಸಲಿದೆ ಎಂದರು.
ನಗರದ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಇಟಿಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಿರುವ ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಅಲ್ಲಿ ಸಿಬಿಟಿ ನಡೆಸಿದ ಸಂಸ್ಥೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಾಗಿದೆ. ಸಿಇಟಿಯನ್ನು ಕಂಪ್ಯೂಟರ್ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯ ಬೇಕಾಗುತ್ತದೆ. ಸರ್ಕಾರ ಹೆಚ್ಚು ವೆಚ್ಚವನ್ನೂ ಮಾಡಬೇಕಾಗುತ್ತದೆ. ಇದರ ಜೊತೆಗೆ ನಮ್ಮ ಗ್ರಾಮೀಣ ಮಕ್ಕಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಿಇಟಿ ಅರ್ಜಿ ಭರ್ತಿ ಮಾಡುವಾಗಲೇ ಅನೇಕ ಲೋಪಗಳನ್ನು ಮಾಡುವವರಿದ್ದಾರೆ. ಈ ಎಲ್ಲ ಕಾರಣಗಳಿಂದ ಒಟ್ಟಾರೆ ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.
ಸಿಇಟಿ ಅರ್ಜಿ ಭರ್ತಿಗೆ ಆ್ಯಪ್: ಸಿಇಟಿ ಅರ್ಜಿ ತುಂಬುವ ಹಂತದಲ್ಲಿ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ವಿದ್ಯಾರ್ಥಿಗಳು ಬಹುತೇಕ ಸೈಬರ್ ಸೆಂಟರ್‌ಗಳಿಗೆ ಹೋಗಿ ಅರ್ಜಿ ತುಂಬುತ್ತಿದ್ದು, ಗ್ರಾಮೀಣ ವಿದ್ಯಾರ್ಹತೆ, ಮೀಸಲಾತಿ ಮತ್ತಿತರ ಮಾಹಿತಿಗಳನ್ನು ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಹಾಗಾಗಿ ಸಿಇಟಿ ಅರ್ಜಿ ತುಂಬುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ನೀಡಲು ಆ್ಯಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಇದು ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರ ಜತೆಗೆ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡಿಸುವ ಉದ್ದೇಶವೂ ಇದೆ ಎಂದು ಸಚಿವರು ತಿಳಿಸಿದರು.
ಸಿಇಟಿಯಲ್ಲಿ ಇನ್ಮುಂದೆ ಪಠ್ಯೇತರ ಪ್ರಶ್ನೆ: ಸಿಇಟಿಯಲ್ಲಿ ಇನ್ನು ಮುಂದೆ ಪಠ್ಯೇತರ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ವಿದ್ಯಾರ್ಥಿಗಳು ಅವರ ಬುದ್ಧಿಶಕ್ತಿ ಉಪಯೋಗಿಸಿ ಆ ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾಗುತ್ತದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಇದೇ ವೇಳೆ ತಿಳಿಸಿದರು.
2025ನೇ ಸಾಲಿನ ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಪ್ರಶ್ನೆ ಪತ್ರಿಕೆ ತಯಾರಕರಿಗೂ ಕೆಇಎಯಿಂದ ಅಗತ್ಯ ಮಾರ್ಗಸೂಚಿ ನೀಡಲಾಗುವುದು. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದರು.
ಈ ಬಾರಿ ಸಿಇಟಿಯಲ್ಲಿ ಸುಮಾರು 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದ ಉಂಟಾದ ಗೊಂದಲ, ವಿದ್ಯಾರ್ಥಿ ಮತ್ತು ಪೋಷಕರಿಂದ ವ್ಯಕ್ತವಾದ ಆಕ್ರೋಶದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಠ್ಯಕ್ರಮ ಕುರಿತು ಪ್ರಶ್ನೆ ಪತ್ರಿಕೆಗಳನ್ನು ಸೀಮಿತಗೊಳಿಸಲು ಸಿಇಟಿಯು ಮಂಡಳಿ ಪರೀಕ್ಷೆಯಲ್ಲ. ಬದಲಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ. ಅಲ್ಲದೆ, ಸಿಇಟಿಗೆ ಸಂಬಂಧಿಸಿದ ಕಾನೂನಲ್ಲಿ ಪಿಯುಸಿಯ ಎನ್‌ಸಿಇಆರ್‌ಟಿ ಪಠ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳು ತಮ್ಮ ಬುದ್ಧಿಶಕ್ತಿ ಉಪಯೋಗಿಸಿ ಉತ್ತರಿಸಬಹುದಾದ ಪಠ್ಯೇತರ ಪ್ರಶ್ನೆಗಳನ್ನೂ ಸಿಇಟಿಯಲ್ಲಿ ನೀಡಲು ಅವಕಾಶವಿದೆ ಎಂದರು.
2024ನೇ ಸಾಲಿನ ಸಿಇಟಿಯಲ್ಲಿ ದೊಡ್ಡ ಸಂಖ್ಯೆಯ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದ ಉಂಟಾದ ಗೊಂದಲದ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯು ಹಿಂದಿನ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರನ್ನು ವಿವರಣೆ ಕೇಳಿತ್ತು. ಅವರು ಸಿಇಟಿ ಬೈಲಾವನ್ನು ಅನುಸರಿಸಿ ಪಠ್ಯೇತರ ಪ್ರಶ್ನೆ ಕೇಳಲಾಗಿದೆ. ಬುದ್ಧಿಶಕ್ತಿ ಉಪಯೋಗಿಸಿ ಉತ್ತರಿಸಬಹುದಾದ ಪ್ರಶ್ನೆಗಳನ್ನು ಕೇಳಲು ಬೈಲಾದಲ್ಲಿ ಅವಕಾಶವಿದೆ ಎಂದು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದರು.
ನೀಟ್ ಜೊತೆ ಪಿಯು ಅಂಕ ಪರಿಗಣನೆ ಸೂಕ್ತ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು(ಎನ್‌ಟಿಎ) ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಕೇವಲ ನೀಟ್ ಅಂಕಗಳನ್ನು ಮಾತ್ರ ಪರಿಗಣಿಸುವ ಬದಲು ದ್ವಿತೀಯ ಪಿಯುಸಿಯ ಶೇ.50ರಷ್ಟು ಅಂಕಗಳನ್ನೂ ಪರಿಗಣಿಸುವುದು ಸೂಕ್ತ ಎಂದು ಇದೇ ವೇಳೆ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಅದರ ಅಂತಿಮ ಆದೇಶ ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ಒಮ್ಮೆಗೇ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆ ರಾಜ್ಯದಲ್ಲಿ ಇದ್ದು, ಆ ರೀತಿ ಮಾಡಿದರೆ ಹೆಚ್ಚು ಅನುಕೂಲ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವುದಾಗಿ ತಿಳಿಸಿದರು.