ಪಾಲಿಕೆ ಗುಣ ಲ್ಯಾಬ್‌ ಅಗ್ನಿ ಅವಘಡದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ

| Published : Jul 25 2024, 01:18 AM IST

ಪಾಲಿಕೆ ಗುಣ ಲ್ಯಾಬ್‌ ಅಗ್ನಿ ಅವಘಡದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿಯ ಗುಣ ಲ್ಯಾಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಎಂಜಿನಿಯರ್‌ ಸೇರಿ ನಾಲ್ವರು ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡಿ ಆದೇಶಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಎಂಜಿನಿಯರ್‌ ಪತ್ನಿ ಸೇರಿದಂತೆ ಒಟ್ಟು ನಾಲ್ವರಿಗೆ ಸರ್ಕಾರಿ ಉದ್ಯೋಗ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡದಲ್ಲಿ ಅದೇ ವಿಭಾಗದ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಸೇರಿದಂತೆ 12 ಮಂದಿ ಸುಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶಿವಕುಮಾರ್‌ ಮೃತಪಟ್ಟಿದ್ದರು.

ಜತೆಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಯೋತಿ ಮತ್ತು ಎಸ್‌.ಮನೋಜ್‌ ಹಾಗೂ ಕಾರ್ಯನಿಯಮಿತ ಆಗಮಿಸಿದ್ದ ಖಾಸಗಿ ಉದ್ಯೋಗಿ ಬಿ.ಎಸ್‌.ಶ್ರೀನಿವಾಸ್‌ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು.

ಘಟನಾ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಸಂಪುಟ ಸಭೆಯಲ್ಲಿ ಅಮೋದನೆ ಪಡೆದು ಇದೀಗ ರಾಜ್ಯ ಸರ್ಕಾರ ಅನುಕಂಪದ ಆಧಾರದಲ್ಲಿ ಮೃತ ಶಿವಕುಮಾರ್‌ ಪತ್ನಿ ಎಚ್‌.ಸಿ.ಉಮಾಮಹೇಶ್ವರಿ, ಹೊರಗುತ್ತಿಗೆ ಸಿಬ್ಬಂದಿ ಜ್ಯೋತಿ ಹಾಗೂ ಮನೋಜ್‌, ಖಾಸಗಿ ಉದ್ಯೋಗಿ ಶ್ರೀನಿವಾಸ್‌ ಅವರ ವಿದ್ಯಾರ್ಹತೆಗೆ ತಕ್ಕಂತೆ ‘ಸಿ’ ದರ್ಜೆಯ ಉದ್ಯೋಗ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.ಡೆಂಘೀ ವರದಿ ನೀಡದ 3 ಖಾಸಗಿ ಆಸ್ಪತ್ರೆಗೆ ಬಿಬಿಎಂಪಿ ನೋಟಿಸ್‌ಕನ್ನಡಪ್ರಭ ವಾರ್ತೆ ಬೆಂಗಳೂರು

ಡೆಂಘೀ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದಿಂದ ನೋಟಿಸ್‌ ಜಾರಿಗೊಳಿಸಿದೆ.

ಕಳೆದ ವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೂರು ಡೆಂಘೀ ಸಾವು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಡೆಟ್‌ ಆಡಿಟ್‌ ನಡೆಸಲಾಗಿದೆ. ಈ ವರದಿಯಲ್ಲಿ ಖಾಸಗಿ ಆಸ್ಪತ್ರೆಗಳು ಪ್ರಾಥಮಿಕವಾಗಿ ಡೆಂಘೀ ಸೋಂಕಿನ ಲಕ್ಷಣ ಕಂಡು ಬಂದ ನಂತರ ಖಾತ್ರಿ ಪಡೆಸುವ ಪರೀಕ್ಷೆ ನಡೆಸುತ್ತಿಲ್ಲ ಎಂಬುದು ಕಂಡು ಬಂದಿದೆ.

ಮೂರು ಖಾಸಗಿ ಆಸ್ಪತ್ರೆಗಳು ಸರ್ಕಾರದ ಮಾರ್ಗಸೂಚಿ ಪ್ರಕಾರ ಮೃತಪಟ್ಟ ರೋಗಿಗಳ ರಕ್ತ ಪರೀಕ್ಷೆ ಮಾಡದೇ ವರದಿ ನೀಡಿವೆ. ಜತೆಗೆ, ಡೆಂಘೀ ಪ್ರಕರಣದ ಕುರಿತು ಸಮಯಕ್ಕೆ ಸರಿಯಾಗಿ ಬಿಬಿಎಂಪಿಗೆ ವರದಿ ನೀಡಿಲ್ಲ. ಡೆಂಘೀ ಸಾವಿನ ಬಗ್ಗೆಯೂ ಮಾಹಿತಿ ನೀಡಿಲ್ಲ. ಹೀಗಾಗಿ, ಆಸ್ಪತ್ರೆಗಳ ಆಡಳಿತಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದ್ದು, ಒಂದು ವಾರದಲ್ಲಿ ಉತ್ತರ ನೀಡುವಂತೆ ನಿರ್ದೇಶಿಸಲಾಗಿದೆ.