ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ನೂರಾರು ಎಕರೆ ಭೂಮಿಯನ್ನು ಖಾತೆ ಮಾಡುತ್ತಿದ್ದರೂ ಅದರ ಹೊಣೆಯನ್ನು ಯಾರೂ ಹೊರುತ್ತಿಲ್ಲ. ಮಳವಳ್ಳಿ, ನಾಗಮಂಗಲದ ಬಳಿಕ ಈಗ ಶ್ರೀರಂಗಪಟ್ಟಣ ತಾಲೂಕಿನಲ್ಲೂ ಸರ್ಕಾರಕ್ಕೆ ಸೇರಿದ ನೂರಾರು ಎಕರೆ ಜಮೀನು ಅಕ್ರಮವಾಗಿ ಖಾಸಗಿಯವರ ವಶವಾಗುತ್ತಿದ್ದರೂ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಅಕ್ರಮಗಳ ತನಿಖೆಗೆ ನಿಯೋಜಿಸಿದ ಅಧಿಕಾರಿಗಳ ತಂಡ ಮಂಕು ಬಡಿದಂತೆ ಮೌನ ವಹಿಸಿ ಕುಳಿತಿರುವುದು ದುರಂತ.

ಭೂ ದಾಖಲೆಗಳು ಡಿಜಿಟಲೀಕರಣಗೊಂಡರೆ ಅಕ್ರಮಗಳಿಗೆ ಕಡಿವಾಣ ಬೀಳಬಹುದೆಂದು ಮೊದಲು ನಂಬಲಾಗಿತ್ತು. ಆದರೆ, ಅದು ಈಗ ಹುಸಿಯಾಗಿದೆ. ಹೊಸ ಹೊಸ ರೀತಿಯಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸುವ ಪರಿಪಾಠವನ್ನು ದಂಧೆಕೋರರು ಸೃಷ್ಟಿಸಿಕೊಂಡಿದ್ದಾರೆ. ಅದಕ್ಕೆ ಪ್ರಭಾವಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳೂ ಸಾಥ್ ನೀಡಿದ್ದಾರೆ. ಯಾವುದೇ ತನಿಖೆಗೂ ಯಾರೂ ಹೆದರುತ್ತಿಲ್ಲ. ತನಿಖೆಗೆ ರಚಿಸಲಾದ ಅಧಿಕಾರಿಗಳ ತಂಡವೂ ತನಿಖೆಗೆ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಪರಿಣಾಮ ಸರ್ಕಾರಿ ಭೂಮಿಗಳು ಖಾಸಗಿಯವರ ಪಾಲಾಗುವುದು ಜಿಲ್ಲೆಯಲ್ಲಿ ಮುಂದುವರಿದೇ ಇದೆ.

ತಾರ್ಕಿಕ ಅಂತ್ಯ ಕಾಣದ ಮಳವಳ್ಳಿ ಪ್ರಕರಣ:


ಮೊದಲು ಮಳವಳ್ಳಿ ತಾಲೂಕಿನಲ್ಲಿ ಸುಮಾರು ೮೦೦ ಎಕರೆ ಸರ್ಕಾರಿ ಭೂಮಿ ಖಾಸಗಿಯವರಿಗೆ ಅಕ್ರಮವಾಗಿ ಪರಭಾರೆಯಾಗಿರುವುದು ರಾಜ್ಯಮಟ್ಟದ ಸಮಿತಿಯೊಂದು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿತ್ತು. ಉಪ ನೋಂದಣಾಧಿಕಾರಿ ಕಚೇರಿ, ತಾಲೂಕು ಕಚೇರಿ, ಸೈಬರ್ ಕೇಂದ್ರಗಳಲ್ಲೆಲ್ಲಾ ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಕ್ಷೇತ್ರದ ಶಾಸಕ ಪಿ.ನರೇಂದ್ರಸ್ವಾಮಿ ಅವರೇ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಪಿಸಿದ್ದರು. ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆಯಾಗಿದ್ದ ಸುಮಾರು ೧ ಸಾವಿರ ಆರ್‌ಟಿಸಿಗಳನ್ನು ರದ್ದುಪಡಿಸಿರುವುದಾಗಿ ಹೇಳಿದ್ದರು. ಆನಂತರದಲ್ಲಿ ಪರಿಸ್ಥಿತಿ ಏನಾಗಿದೆ. ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆಯಾಗಿದ್ದ ಜಮೀನೆಷ್ಟು, ಎಷ್ಟು ಜಮೀನನ್ನು ಮರು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಇದುವರೆಗೆ ಯಾರೊಬ್ಬರೂ ಬಹಿರಂಗಪಡಿಸಿಲ್ಲ.

ಅರ್ಧದಲ್ಲೇ ಕೈಬಿಟ್ಟರೇ ನಾಗಮಂಗಲ ಅಕ್ರಮ ಪ್ರಕರಣ

ನಾಗಮಂಗಲ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಖಾತೆ ಮಾಡಿ ಸರ್ಕಾರಕ್ಕೆ ೨೦೦ ಕೋಟಿ ರು.ನಷ್ಟು ನಷ್ಟ ಉಂಟುಮಾಡಿರುವುದು ಬೆಳಕಿಗೆ ಬಂದಿತು. ತಾಲೂಕು ಕಚೇರಿಯ ಭೂಮಿ ಮತ್ತು ದರಕಾಸ್ತು ಶಾಖೆ, ರೆಕಾರ್ಡ್ ರೂಂನಲ್ಲಿರಬೇಕಾದ ದಾಖಲೆಗಳು ಸಿಬ್ಬಂದಿ ಮನೆ, ಮೈಸೂರಿನ ಹೋಟೆಲ್‌ಗಳಲ್ಲಿ ಸಿಕ್ಕಿದ್ದು ಬಹಿರಂಗಗೊಂಡಿತ್ತು. ಖಾಲಿ ಚೆಕ್‌ಗಳು, ಹಕ್ಕು ಬದಲಾವಣೆ ರಿಜಿಸ್ಟರ್, ಬಗರ್‌ಹುಕುಂ ಸಾಗುವಳಿ ವಿತರಣಾ ವಹಿಗಳ ತಿದ್ದುಪಡಿ, ನಕಲಿ ಸಾಗುವಳಿ ಚೀಟಿಗಳ ಸೃಷ್ಟಿ, ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ನಕಲಿ ಸೀಲ್, ಸಹಿಗಳು, ತಾಲೂಕು ಕಚೇರಿಯ ದಾಖಲೆಗಳೆಲ್ಲವನ್ನೂ ತಿದ್ದಿರುವುದು ಬೆಳಕಿಗೆ ಬಂದಿತ್ತು.

ಈ ಪ್ರಕರಣದಲ್ಲಿ ೬ ಮಂದಿ ತಾಲೂಕು ಕಚೇರಿ ಸಿಬ್ಬಂದಿ ಸೇರಿ ಹತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕಳೆದ ಮೂರು ತಿಂಗಳಲ್ಲಿ ಪೊಲೀಸರು ಹಿಡಿಯಲು ಸಾಧ್ಯವಾಗಿದ್ದು ಒಬ್ಬನನ್ನು ಮಾತ್ರ. ಉಳಿದ ಮೂವರು ಇಂದಿಗೂ ತಲೆಮರೆಸಿಕೊಂಡಿದ್ದಾರೆ. ಅಕ್ರಮದ ಕುರಿತಾಗಿ ತನಿಖೆ ನಡೆಸಲು ಜಿಲ್ಲಾಧಿಕಾರಿ ತಂಡ ರಚಿಸಿ ಒಂದು ತಿಂಗಳಾದರೂ ತನಿಖಾ ತಂಡ ದಾಖಲೆಗಳ ಸಂಗ್ರಹದಲ್ಲೇ ಕಾಲಹರಣ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಇದು ಸಾರ್ವಜನಿಕ ವಲಯದಲ್ಲಿ ತನಿಖಾ ತಂಡದ ಬಗ್ಗೆಯೇ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸುವಂತೆ ಮಾಡಿದೆ.

ಅಕ್ರಮ ನಡೆದಿರುವುದು ಕಣ್ಣಿಗೆ ಕಟ್ಟುವಂತೆ ದಾಖಲೆಗಳ ಸಹಿತ ಸಾಬೀತಾಗಿದ್ದರೂ ತನಿಖೆ ಮಾತ್ರ ಚುರುಕನ್ನು ಪಡೆದುಕೊಳ್ಳುತ್ತಿಲ್ಲ. ಭ್ರಷ್ಟರನ್ನು ಕಾನೂನು ವ್ಯಾಪ್ತಿಗೊಳಪಡಿಸಿ ಶಿಕ್ಷಿಸುವ ಧೈರ್ಯವನ್ನು ಯಾರೊಬ್ಬರೂ ಪ್ರದರ್ಶಿಸುತ್ತಿಲ್ಲ. ಪರಿಣಾಮ ಕಾನೂನಿನ ಭಯವಿಲ್ಲದೆ ಪ್ರಭಾವಿಗಳು, ಸರ್ಕಾರಿ ಅಧಿಕಾರಿಗಳು ಸರ್ಕಾರದ ಜಮೀನುಗಳನ್ನು ಅನ್ಯರ ಪಾಲು ಮಾಡುವ ಕಾರ್ಯದಲ್ಲಿ ಇಂದಿಗೂ ಮುಂದುವರೆದಿದ್ದಾರೆ.

ಶ್ರೀರಂಗಪಟ್ಟಣ ಪ್ರಕರಣ ತನಿಖೆ ನಡೆಸೋರು ಯಾರು?

ಮೊನ್ನೆಯಷ್ಟೇ ಶ್ರೀರಂಗಪಟ್ಟಣ ಶಾಸಕರು ಮಾಧ್ಯಮಗಳೆದುರಿನಲ್ಲೇ ತಾಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕರಾಗಿ ಹೇಳಿದ್ದಾರೆ. ಹುಲಿಕೆರೆಯಲ್ಲಿ ಮೂರು ಎಕರೆ ಕೆರೆಯನ್ನೇ ಮುಚ್ಚಿಹಾಕಿದ್ದಾರೆ. ಪಾಂಡವಪುರ ಉಪವಿಭಾಗಾಧಿಕಾರಿಯವರು ಒಂದೇ ದಿನದಲ್ಲಿ ಆದೇಶ, ಮರುದಿನವೇ ಖಾತೆ, ಆನಂತರದ ದಿನವೇ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಹೇಳುತ್ತಿರುವುದು ಆಶ್ಚರ್ಯದ ಜೊತೆಗೆ ಆತಂಕಕಾರಿ ಬೆಳವಣಿಗೆಯೂ ಆಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಈಗ ಬಹಳ ಸುಲಭದ ಕೆಲಸವಾಗಿದೆ. ಅದನ್ನು ಸೃಷ್ಟಿ ಮಾಡಲಿಕ್ಕೆಂದೇ ಭೂಗಳ್ಳರು ತಂಡವನ್ನಿಟ್ಟುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಪರಾಮರ್ಶಿಸುವ, ಸರ್ಕಾರಿ ಜಾಗಗಳನ್ನು ರಕ್ಷಣೆ ಮಾಡುವ ಬದ್ಧತೆ, ಇಚ್ಛಾಶಕ್ತಿ ಸರ್ಕಾರಿ ಅಧಿಕಾರಿಗಳಲ್ಲಿ ಇಲ್ಲದಿರುವುದೇ ಸರ್ಕಾರಿ ಭೂಮಿ ಪರರ ಪಾಲಾಗುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಆರೋಪವಾಗಿದೆ.

ಎರಡು ತಿಂಗಳಾದರೂ ತನಿಖೆ ಮಂದಗತಿ.!

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕು ಕಚೇರಿಯ ಸಿಬ್ಬಂದಿ ಅಭಿಲೇಖಾಲಯ ಹಾಗೂ ಭೂ ಮಂಜೂರಾತಿ ಶಾಖೆಯ ಕಂದಾಯ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ರಚಿಸಿರುವ ತನಿಖಾ ತಂಡ ತನಿಖೆಯನ್ನು ಮಂದಗತಿಯಲ್ಲಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ತಹಸೀಲ್ದಾರ್ ಗ್ರೇಡ್-೨, ಜಿಲ್ಲಾಧಿಕಾರಿ ಕಚೇರಿಯ ಪುರಸಭಾ ತಹಸೀಲ್ದಾರ್ ಸಿ.ಜಿ.ರವಿಶಂಕರ್, ಶಿರಸ್ತೇದಾರ್ ಪಿ.ವಸಂತ್‌ಕುಮಾರ್, ಪ್ರಥಮದರ್ಜೆ ಸಹಾಯಕ ಎಚ್.ನರಸಿಂಹಮೂರ್ತಿ ನೇತೃತ್ವದ ತನಿಖಾ ತಂಡವನ್ನು ಜಿಲ್ಲಾಧಿಕಾರಿ ನೇಮಿಸಿದ್ದರು.

ಲೋಕಾಯುಕ್ತರು ಸಲ್ಲಿಸಿರುವ ಪ್ರಥಮ ವರ್ತಮಾನ ವರದಿಯಲ್ಲಿನ ಅಂಶಗಳ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕು ಕಚೇರಿಗೆ ಭೇಟಿ ನೀಡಿ ಸವಿಸ್ತಾರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತನಿಖಾ ತಂಡ ಇದುವರೆಗೂ ದಾಖಲೆಗಳನ್ನು ಸಂಗ್ರಹಿಸುವುದರಲ್ಲೇ ಕಾಲಹರಣ ಮಾಡುತ್ತಿದೆ ಎನ್ನಲಾಗಿದೆ. ಹೀಗಾದರೆ ಅಕ್ರಮ ನಡೆಸುವವರಿಗೆ ಕಾನೂನಿನ ಭಯ ಮೂಡಲು ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ.ಅಪರ ಜಿಲ್ಲಾಧಿಕಾರಿ ನೇತೃತ್ವದ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕುತ್ತಿದೆ. ಪೊಲೀಸ್ ತನಿಖೆ ನಡೆಯುತ್ತಿರುವುದರಿಂದ ಬಹುಪಾಲು ದಾಖಲೆಗಳು ಅವರ ಬಳಿ ಇದೆ. ತನಿಖಾ ತಂಡವು ಕಂದಾಯ ಇಲಾಖೆ ವ್ಯಾಪ್ತಿಯ ದಾಖಲೆಗಳಲ್ಲಾಗಿರುವ ಲೋಪಗಳ ಬಗ್ಗೆ ಮಾತ್ರ ವರದಿ ನೀಡುತ್ತದೆ. ಪೊಲೀಸರು ಅಧಿಕಾರಿಗಳು, ನೌಕರರು, ಸಿಬ್ಬಂದಿ ನಡೆಸಿರುವ ಕ್ರಿಮಿನಲ್ ಅಪರಾಧ ನಡೆಸಿರುವ ಕುರಿತಾಗಿ ತನಿಖೆ ನಡೆಸುತ್ತಿದೆ. ಒಟ್ಟಾರೆ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ವರದಿ ಕೈಸೇರಲಿದೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಪರಭಾರೆಯಾಗುತ್ತಿರುವುದು ತಾಲೂಕಿನಿಂದ ತಾಲೂಕಿಗೆ ವಿಸ್ತರಣೆಯಾಗುತ್ತಲೇ ಇದೆ. ತನಿಖೆಯಲ್ಲಿ ಚುರುಕಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ನಾಗಮಂಗಲ ಪ್ರಕರಣದಲ್ಲಿ ತನಿಖಾ ತಂಡ ರಚನೆಯಾಗಿ ಎರಡೂವರೆ ತಿಂಗಳಾದರೂ ಇನ್ನೂ ತನಿಖೆಯನ್ನೇ ಕೈಗೆತ್ತಿಕೊಂಡಿಲ್ಲ. ಹೀಗಿದ್ದಾಗ ಕಾನೂನಿನ ಭಯ ಯಾರಿಗೆ ಬರಲು ಸಾಧ್ಯ. ಸರ್ಕಾರಿ ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆ ಅಧಿಕಾರಿಗಳಿಗೇ ಇಲ್ಲದಿದ್ದರೆ ಇನ್ಯಾರು ಕಾಪಾಡಲು ಸಾಧ್ಯ.

- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ