ಹುಲಿ ಸಂರಕ್ಷಣೆಗೆ ಸರ್ಕಾರ- ಸರ್ಕಾರೇತರ ಸಂಸ್ಥೆ: ಡಾ.ಕೆ.ಉಲ್ಲಾಸ್‌ ಕಾರಂತ್‌

| Published : Aug 09 2024, 12:53 AM IST

ಹುಲಿ ಸಂರಕ್ಷಣೆಗೆ ಸರ್ಕಾರ- ಸರ್ಕಾರೇತರ ಸಂಸ್ಥೆ: ಡಾ.ಕೆ.ಉಲ್ಲಾಸ್‌ ಕಾರಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಕೊಡಿಯಾಲ್‌ಗುತ್ತು ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಇಂಟಾಕ್‌ ಮಂಗಳೂರು ಶಾಖೆ ವತಿಯಿಂದ ‘ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಸಕ್ತ ಭಾರತದಲ್ಲಿ 3,000 ಹುಲಿಗಳಿರುವುದಾಗಿ ಅಂದಾಜಿಸಲಾಗಿದೆ. ನಮ್ಮಲ್ಲಿರುವ ಸಂರಕ್ಷಿತ ಅರಣ್ಯದ ಪ್ರಮಾಣಕ್ಕೆ ಹೋಲಿಸಿದರೆ ಇದು ದೊಡ್ಡ ಸಂಖ್ಯೆಯಲ್ಲ. 15 ಸಾವಿರ ಹುಲಿಗಳನ್ನು ಹೊಂದುವ ಗುರಿಯನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರುವ ಕೆಲಸಕ್ಕೆ ಸರ್ಕಾರ-ಸರ್ಕಾರೇತರ ಸಂಸ್ಥೆಗಳು ಮುಂದಾಗಬೇಕಿದೆ ಎಂದು ವನ್ಯಜೀವಿ ತಜ್ಞ ಡಾ.ಕೆ.ಉಲ್ಲಾಸ್‌ ಕಾರಂತ್‌ ಹೇಳಿದ್ದಾರೆ.ನಗರದ ಕೊಡಿಯಾಲ್‌ಗುತ್ತು ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಇಂಟಾಕ್‌ ಮಂಗಳೂರು ಶಾಖೆ ವತಿಯಿಂದ ಬುಧವಾರ ಅವರು ಬದಲಾಗುತ್ತಿರುವ ‘ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ’ ಎನ್ನುವ ವಿಚಾರವಾಗಿ ಉಪನ್ಯಾಸ ನೀಡಿದರು.1970ರ ದಶಕದಲ್ಲಿ ಭಾರತದಲ್ಲಿ ಸುಮಾರು 2,000 ಹುಲಿಗಳಿದ್ದವು, ಈಗ ಅದು 3,000ಕ್ಕೆ ಏರಿದೆ. ಇತರ ಏಷ್ಯಾದ ದೇಶಗಳಿಗೆ ಹೋಲಿಸಿದರೆ ಇದು ಉತ್ತಮ ಸಂಖ್ಯೆ ಆದರೂ ಭಾರತದಲ್ಲಿರುವ 3 ಲಕ್ಷ ಚದರ ಕಿಮೀ ಅರಣ್ಯಭಾಗದಲ್ಲಿ ಕನಿಷ್ಠ 15,000 ಹುಲಿಗಳಿರುವುದು ಸಮತೋಲನಕಾರಿಯಾಗಿದೆ ಎಂದರು.1950- 60ರ ದಶಕದಲ್ಲಿ ಮೋಜಿಗಾಗಿ ಹುಲಿ ಶಿಕಾರಿ ಬಹಳ ಇತ್ತು. ಆ ಬಳಿಕ ಹುಲಿ ಸಂರಕ್ಷಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನಮ್ಮಲ್ಲಿ ವನ್ಯಜೀವಿಗಳ ಸಂರಕ್ಷಣೆ ವಿಚಾರದಲ್ಲಿ ಗೊಂದಲವಿದೆ. ವನ್ಯಜೀವಿಗಳನ್ನು ಉಳಿಸಿ ಬೆಳೆಸುವುದು ಒಂದೆಡೆಯಾದರೆ ಪ್ರಾಣಿಗಳಿಂದ ಮನುಷ್ಯರಿಗೆ ತೊಂದರೆಯಾಗುವಂತೆ ನೋಡಿಕೊಳ್ಳುವುದೂ ಅಗತ್ಯ. ಜೊತೆಗೆ ವನ್ಯಜೀವಿಗಳನ್ನು ಅವುಗಳ ಸಹಜ ಪರಿಸರದಲ್ಲಿ ಇರುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದರು.ಹಿಂದೆ ಸಂರಕ್ಷಣೆಗೆ ಹೆಚ್ಚಿನ ಮೊತ್ತ ಸರ್ಕಾರದಿಂದ ಬರುತ್ತಿರಲಿಲ್ಲ, ಈಗ ಸಾಕಷ್ಟುಮೊತ್ತವನ್ನು ಅದಕ್ಕೆ ಮೀಸಲಾಗಿರಿಸಲಾಗಿದೆ. ಅತಿಯಾದರೆ ಎಲ್ಲವೂ ಕೆಡುತ್ತದೆ ಎಂಬಂತೆ ಅರಣ್ಯದಲ್ಲಿ ಅರಣ್ಯ ಇಲಾಖೆಯ ಹಸ್ತಕ್ಷೇಪವೂ ಹೆಚ್ಚುತ್ತಿದೆ. ಅನಗತ್ಯವಾಗಿ ಈ ರೀತಿಯ ಬೆಳವಣಿಗೆಗಳು ವನ್ಯಜೀವಿ ಹಾಗೂ ಅರಣ್ಯದ ಸಮತೋಲನಕ್ಕೆ ಅಡ್ಡಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಹಸಿರು ಇಂಧನ ಜಿಜ್ಞಾಸೆ: ಇಂದು ಎಲ್ಲ ಕಡೆಯೂ ಹಸಿರು ಇಂಧನ ಎಂದು ಪವನ ಯಂತ್ರ, ಸೋಲಾರ್‌ ವಿದ್ಯುತ್‌, ಅಲ್ಲಲ್ಲಿ ಚೆಕ್‌ ಡ್ಯಾಂ ಸ್ಥಾಪಿಸಲಾಗುತ್ತಿದೆ. ಇದರಿಂದ ಆಯಾ ಭೂಪ್ರದೇಶದ ಮೇಲೆ ಪರಿಣಾಮ ಉಂಟಾಗುತ್ತದೆ. ಕಾಡು ನೀರಿನಲ್ಲಿ ಮುಳುಗುತ್ತದೆ, ಇನ್ನೊಂದೆಡೆ ಟೂರಿಸಂ ಹೆಸರಿನಲ್ಲಿ ಬೇಕಾಬಿಟ್ಟಿ ವನ್ಯಜೀವಿಗಳ ಸಮೀಪ ಮಾನವ ಹೋಗುತ್ತಿರುವುದೂ ಕಳವಳಕಾರಿ. ಜನರ ಆಸಕ್ತಿ ಮೆಚ್ಚತಕ್ಕದ್ದೇ ಆದರೂ ಅವರ ಆಸಕ್ತಿಯನ್ನು ಸಂರಕ್ಷಣೆಗೆ ಬಳಸುವತ್ತ ನೋಡಿಕೊಳ್ಳಬೇಕು ಎಂದು ಡಾ.ಉಲ್ಲಾಸ್‌ ಕಾರಂತ್‌ ಹೇಳಿದರು.

ಇಂದು ನಾಗರಹೊಳೆಯಂತಹ ಸಂರಕ್ಷಿತ ಜಾಗದಲ್ಲಿ ಕೂಡಾ ವನ್ಯಜೀವಿಗಳ ವಾರ್ಷಿಕ ಸಾವಿನ ಪ್ರಮಾಣ ಶೇ.20ಕ್ಕಿಂತ ಹೆಚ್ಚಿರುವುದು ಗಂಭೀರವಾದ ವಿಚಾರ. ಸಂರಕ್ಷಣೆಗೆ ಕಾನೂನು ಕಾಯಿದೆಗಳ ನೆರವು ಬೇಕೇ ಬೇಕು. ಸಂರಕ್ಷಿತ ಪ್ರದೇಶಗಳಿಲ್ಲದೆ ಇದು ಅಸಾಧ್ಯ ಎಂದರು.ವನ್ಯ ಜೀವಿ ತಜ್ಞ ನಿರೇನ್‌ ಜೈನ್‌ ಪ್ರಸ್ತಾವಿಕ ಮಾತನಾಡಿದರು.