ಧಾರವಾಡ ಪ್ರತ್ಯೇಕ ಪಾಲಿಕೆಯಾಗಿ ಸರ್ಕಾರ ಅಧಿಸೂಚನೆ

| Published : Jan 22 2025, 12:34 AM IST

ಧಾರವಾಡ ಪ್ರತ್ಯೇಕ ಪಾಲಿಕೆಯಾಗಿ ಸರ್ಕಾರ ಅಧಿಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಹು-ಧಾ ಅವಳಿನಗರದ ಜನಸಂಖ್ಯೆ, ಜನಸಾಂದ್ರತೆ, ತೆರಿಗೆ, ತೆರಿಗೇತರ ಸಂಪನ್ಮೂಲ, ವಾರ್ಷಿಕ ತಲಾ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡಾವಾರು ಉದ್ಯೋಗ ಪ್ರಮಾಣವನ್ನು ಪರಿಗಣಿಸಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿ ಪದನಾಮೀಕರಣಗೊಳಿಸಲಾಗಿದೆ.

ಧಾರವಾಡ:

ಜನರ ನಿರೀಕ್ಷೆಯಂತೆ ಧಾರವಾಡ ಪ್ರತ್ಯೇಕ ಪಾಲಿಕೆ ಕಾರ್ಯಕ್ಕೆ ರಾಜ್ಯ ಸರ್ಕಾರ ವೇಗ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಮಂಗಳವಾರ ಪ್ರತ್ಯೇಕಗೊಳಿಸಿ ಅಧಿಸೂಚನೆ ಹೊರಡಿಸಿದೆ.

ಧಾರವಾಡ ಮಹಾನಗರ ಪಾಲಿಕೆ ರಚಿಸಿ ಮಂಗಳವಾರ ಅಧಿಕೃತ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಆಕ್ಷೇಪಣೆ ಅಥವಾ ಸಲಹೆಗೆ 30 ದಿನಗಳ ಕಾಲಾವಕಾಶ ಕೂಡ ನೀಡಿದೆ.

ಹು-ಧಾ ಅವಳಿನಗರದ ಜನಸಂಖ್ಯೆ, ಜನಸಾಂದ್ರತೆ, ತೆರಿಗೆ, ತೆರಿಗೇತರ ಸಂಪನ್ಮೂಲ, ವಾರ್ಷಿಕ ತಲಾ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡಾವಾರು ಉದ್ಯೋಗ ಪ್ರಮಾಣವನ್ನು ಪರಿಗಣಿಸಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿ ಪದನಾಮೀಕರಣಗೊಳಿಸಲಾಗಿದೆ. ಹು-ಧಾ ಮಹಾನಗರ ಪಾಲಿಕೆ ಇನ್ನು ಹುಬ್ಬಳ್ಳಿ, ಮಹಾನಗರ ಪಾಲಿಕೆ ಎಂದು ಮುಂದುವರಿಯಲ್ಲಿದೆ.

ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ಈ ಬಗ್ಗೆ ಕಾರಣಸಹಿತವಾದ ಲಿಖಿತ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಜ. 21ರಿಂದ 30 ದಿನ ಅವಕಾಶ ನೀಡಲಾಗಿದೆ.

ಆಕ್ಷೇಪಣೆ ಸಲ್ಲಿಸುವವರು ಪೌರಾಡಳಿತ ನಿರ್ದೇಶನಾಲಯ 9ನೇ ಮಹಡಿ, ವಿ.ವಿ. ಗೋಪುರ ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅವಧಿ ಮುಗಿದ ನಂತರ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ರಾಜ್ಯಪತ್ರದಲ್ಲಿ ತಿಳಿಸಿದ್ದಾರೆ.

ಧಾರವಾಡ ಮಹಾನಗರ ಪಾಲಿಕೆಯು 120.94 ಚದರ ಕಿಮೀ ಪ್ರದೇಶ ಹೊಂದಿದ್ದು, ಹುಬ್ಬಳ್ಳಿ ಮಹಾನಗರ ಪಾಲಿಕೆ 127.05 ಚದರ ಕಿಮೀ ಒಟ್ಟು ಪ್ರದೇಶ ಹೊಂದಿದೆ. ಅಂದರೆ ಈಗಿರುವ ಹು-ಧಾ ಮಹಾನಗರ ಪಾಲಿಕೆಯ 82 ವಾರ್ಡ್‌ ಪೈಕಿ ಧಾರವಾಡ ಪಾಲಿಕೆ 1ರಿಂದ 26 ಹಾಗೂ ಹುಬ್ಬಳ್ಳಿ ಮಹಾನಗರ ಪಾಲಿಕೆಯು 27ರಿಂದ 82ರ ವರೆಗೆ ಅಂದರೆ 56 ವಾರ್ಡ್‌ ವ್ಯಾಪ್ತಿ ಹೊಂದಲಿವೆ. ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೊಳಪಡಿಸುವ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೇಖವಿಲ್ಲ.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ಈ ಹಿಂದೆ ಘೋಷಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯನವರು, ನಮ್ಮ ಮನವಿಗೆ ಸ್ಪಂದಿಸಿ, ನಮ್ಮ ಆಶಯದಂತೆ ಗೆಜೆಟ್ ಕೂಡ ಹೊರಡಿಸಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಧಾರವಾಡ ನಗರವನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಆಗಲು ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರ ಹಾಗೂ ಪಾಲಿಕೆ ಸದಸ್ಯರ ತೀವ್ರ ಒತ್ತಡ ಹಿನ್ನೆಲೆಯಲ್ಲಿ ಅದರಲ್ಲೂ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಾರ್ಯ ಮಾಡಲಾಗಿದೆ. ಈಗ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದು ಸಂತಸ ತಂದಿದೆ ಎಂದು ಪಾಲಿಕೆ ಸದಸ್ಯ ರಾಜಶೇಖರ ಕಮತಿ ಹೇಳಿದರು.