ಹೆಣ್ಮಕ್ಕಳಿಗೆ ಕರಾಟೆ ಕಲಿಸುವ ಸರ್ಕಾರಿ ಆದೇಶ ನಿರ್ಲಕ್ಷ್ಯ

| Published : Nov 24 2025, 01:15 AM IST

ಹೆಣ್ಮಕ್ಕಳಿಗೆ ಕರಾಟೆ ಕಲಿಸುವ ಸರ್ಕಾರಿ ಆದೇಶ ನಿರ್ಲಕ್ಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಸರ್ಕಾರಿ, ಅನುದಾನಿತ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.

ಕುದೂರು: ಸರ್ಕಾರಿ, ಅನುದಾನಿತ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟಲು ಶಾಲಾ ಹಂತದಿಂದಲೇ ಆತ್ಮರಕ್ಷಣಾ ಕಲೆಯನ್ನು ಕಲಿಸಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಕರಾಟೆ ತರಬೇತಿ ನೀಡಲು ತೀರ್ಮಾನಿಸಿತು. ಅದರಂತೆ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳವರೆಗೆ ವಾರಕ್ಕೆ ಎರಡು ಅವಧಿಯಲ್ಲಿ ಮಕ್ಕಳಿಗೆ ಕರಾಟೆ ಪ್ರಾಥಮಿಕ ತರಬೇತಿ ನೀಡಬೇಕು. ಆ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲೆವು ಎಂಬ ಆತ್ಮವಿಶ್ವಾಸ ಅವರಲ್ಲಿ ಬೆಳೆಯುತ್ತದೆ ಎಂದು ಯೋಜನೆ ರೂಪಿಸಿ ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಿಗೆ ಆದೇಶ ಹೊರಡಿಸಿತು.

ಆ ಆದೇಶದಂತೆ ಒಂದು ಶಾಲೆಗೆ ಮೂರು ತಿಂಗಳಲ್ಲಿ ಒಂಬತ್ತು ಗಂಟೆಗಳಷ್ಟು ಅವಧಿಯಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ಪರಿಚಯ ಮಾಡಿಕೊಡಬೇಕು. ಅದಕ್ಕಾಗಿ ಕರಾಟೆ ಬೋಧಿಸುವ ಶಿಕ್ಷಕರಿಗೆ ಮೂರು ತಿಂಗಳ ಅವಧಿಗೆ 9 ಸಾವಿರ ರುಪಾಯಿಗಳನ್ನು ನೀಡಲಾಗುತ್ತದೆ. ಆದರೆ, ಅಧಿಕಾರಿಗಳೇ ಕರಾಟೆ ಕಲಿಕೆಗೆ ಕಡಿವಾಣ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಕರಾಟೆ ಶಿಕ್ಷಕರಲ್ಲಿ ಕಮಿಷನ್ ಬೇಡಿಕೆ:

ಕರಾಟೆ ಶಿಕ್ಷಕರು ಒಂಬತ್ತು ಗಂಟೆವರೆಗೆ ತರಗತಿ ತೆಗೆದುಕೊಳ್ಳುತ್ತಾರೆ. ಇಷ್ಟು ಅಲ್ಪ ಅವಧಿಗೆ ಇವರಿಗೆ 9 ಸಾವಿರ ಸಂಭಾವನೆ ಏಕೆಂದು ಕೆಲವು ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಕಮೀಷನ್ ಬೇಡಿಕೆ ಮುಂದಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಕರಾಟೆ ಬೋಧಿಸುವ ಶಿಕ್ಷಕರು ಕಮೀಷನ್ ಏಕೆ ಕೊಡಬೇಕು. ನಮ್ಮ ಕರಾಟೆ ವಿದ್ಯೆಯನ್ನು ಹೀಗೆ ಅಪಮಾನ ಮಾಡಬೇಡಿ. ಬೇಕಿದ್ದರೆ 9 ಗಂಟೆಗಳಿರುವ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಿದರೂ ನಾವು ಮಕ್ಕಳಿಗೆ ವಿದ್ಯೆ ಕಲಿಸಿಕೊಡಲು ಸಿದ್ದರಿದ್ದೇವೆ ಎಂದು ತಲೆಕೊಡವಿಕೊಳ್ಳುತ್ತಿದ್ದಾರೆ.

ಹಿರಿಯ ಅಧಿಕಾರಿಗಳು ಕರಾಟೆ ಶಿಕ್ಷಕರಿಗೆ ಕಡಿವಾಣ ಹಾಕಲು 9 ಗಂಟೆ ತರಬೇತಿ ನೀಡಬೇಕು ಎಂಬ ಅದೇಶದ ಬದಲು 18 ಗಂಟೆ ತರಬೇತಿ ನೀಡಬೇಕು ಎಂದು ಶಿಕ್ಷಕರಿಗೆ ಹೇಳಿದ್ದಾರೆ. ಕರಾಟೆ ಶಿಕ್ಷಕರು ನೀವು ಕೊಡುವ ಹಣ ಪೆಟ್ರೋಲಿಗೆ ಖರ್ಚಾಗುತ್ತದೆ. ಅಂತಹುದರಲ್ಲಿ 18 ಗಂಟೆ ತರಬೇತಿ ಕೊಡ ಬೇಕೆಂದರೆ ನಾವುಗಳೇ ಕೈಯಿಂದ ಪೆಟ್ರೋಲ್ ಹಾಕಿಸಿಕೊಂಡು ಬರಬೇಕಾಗುತ್ತದೆ. ದಯವಿಟ್ಟು ಸರ್ಕಾರದ ಅದೇಶವನ್ನಷ್ಟೇ ನಮ್ಮ ಮೇಲೆ ಹೇರಿ, ಆದರೆ ಕಮೀಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಹೀಗೆ ಹಿಂಸೆ ಕೊಡುವುದು ತರಬಲ್ಲ ಎಂಬುದು ಕರಾಟೆ ಶಿಕ್ಷಕರ ಆರೋಪ.

ಇನ್ನು ಕಾಲೇಜಿನ ಕತೆಗಳೇ ಬೇರೆಯಾಗಿದೆ. ಕೆಲವು ಪ್ರೌಢಶಾಲೆಗಳಲ್ಲಿ ಕರಾಟೆ ಕಲಿಯಲು ಅನುವು ಮಾಡಿಕೊಟ್ಟು ಕಮೀಷನ್ ಕೇಳಿದರೆ ಕಾಲೇಜಿನಲ್ಲಿ ಕರಾಟೆ ಕಲಿಸದೆಯೇ ಕರಾಟೆ ಹಣ ಡ್ರಾ ಮಾಡಿಕೊಂಡು ಇಲಾಖೆಗೆ ನಕಲಿ ಫೋಟೋ ನೀಡುತ್ತಿದ್ದಾರೆ.

ಕಾಲೇಜಿಗೆ ಕರಾಟೆ ಕಲಿಸುವ ಶಿಕ್ಷಕರಿಗೆ ಹಣ ಮಂಜೂರಾಗಿದೆ. ಆದರೆ, ಕರಾಟೆ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಶಿಕ್ಷಕರನ್ನೇ ನೇಮಿಸಿಕೊಂಡಿಲ್ಲ. ಆದರೆ, ಕರಾಟೆ ಶಿಕ್ಷಕರ ವಿವರ ಪಡೆದು ಒಂದು ದಿನದ ಮಟ್ಟಿಗೆ ತರಗತಿ ತೆಗೆದುಕೊಂಡು ಅದನ್ನು ಪೋಟೋ ತೆಗೆಸಿ ಶಿಕ್ಷಣ ನೀಡುತ್ತಿದ್ದೇವೆ ಎಂಬ ಭಾವ ಮೂಡುವಂತೆ ಮಾಡಿದರೆ ಎರಡು ಅಥವಾ ಮೂರು ಸಾವಿರ ರುಪಾಯಿ ಶಿಕ್ಷಕರಿಗೆ ನೀಡುತ್ತಾರೆ. ಹಾಗಾದರೆ ಉಳಿದ ಹಣ? ಏನಾಯ್ತು ಎಂದು ಕೇಳಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗದೇ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.

ಸರ್ಕಾರ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ಮೂರು ಸಾವಿರ ರು. ನೀಡುತ್ತಿದೆ. ಆದರೆ ಕರಾಟೆ ಕಲಿತ ಯುವ ನಿರುದ್ಯೋಗಿ ಯುವಕರು ಕೆಲಸ ಮಾಡಿ ದುಡ್ಡು ತೊಗೋತೀವಿ ಅಂದರೆ ಕಮೀಷನ್ ಕೇಳುತ್ತಾರೆ. ಇಂತಹವರಿಗೆ ಸರ್ಕಾರ ಮೂಗುದಾರ ಹಾಕುವ ಕೆಲಸ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ.ಕೋಟ್‌..............

ಮುಖ್ಯ ಶಿಕ್ಷಕರ ಸಭೆಯಲ್ಲಿ ಬಿಆರ್‌ಪಿ ಗುಲ್ಜಾರ್‌ ಅವರು ತಿಳಿಸಿದಂತೆ ಇನ್ನು ಮುಂದೆ ಎಲ್ಲಾ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ 18 ಗಂಟೆ ಕರಾಟೆ ತರಗತಿಗಳನ್ನು ತೆಗೆದುಕೊಳ್ಳಬೇಕು. ಇದನ್ನು ಪಾಲಿಸದೆ ಇರುವ ಮುಖ್ಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು.

-ಚಂದ್ರಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಮಾಗಡಿಕೋಟ್ ............

ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಕರಾಟೆ ಕಲಿಸಬೇಕೆಂಬ ಸರ್ಕಾರ ರೂಪಿಸಿರುವ ಯೋಜನೆಯನ್ನು ಯಾರೇ ನಿರ್ಲಕ್ಷ್ಯ ಮಾಡಿದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಳೀಯ ಯುವ ಕರಾಟೆ ಶಿಕ್ಷಕರಿಗೆ ಉದ್ಯೋಗ ಅವಕಾಶ ಹಾಗೂ ಹೆಣ್ಮಕ್ಕಳಿಗೆ ತರಬೇತಿಯೂ ನೀಡಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಎಲ್ಲರ ಉದ್ದೇಶವಾಗಿರಬೇಕು.

-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

23ಕೆಆರ್ ಎಂಎನ್ 1.ಜೆಪಿಜಿ

ಶಾಲೆಗಳಲ್ಲಿ ಹೆಣ್ಣು ಮಕ್ಕಳ ಕರಾಟೆ ಕಲಿಕೆ.