ಚನ್ನಪಟ್ಟಣ: ಮೈಸೂರು ಸಿಲ್ಕ್‌ಗೆ ತನ್ನದೇ ಆದ ಇತಿಹಾಸ ಇದೆ. ಎಲ್ಲ ಕಡೆ ಫೇಮಸ್ ಆಗಿರುವ ಈ ಸೀರೆ ಖರೀದಿಗೆ ಜನ ಮುಗಿಬೀಳುತ್ತಾರೆ. ಆದರೆ, ಇಂತಹ ಸಂಸ್ಥೆಯನ್ನ ಮುಚ್ವಲು ಸರ್ಕಾರ ಮುಂದಾಗಿರೋದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕೆಎಸ್‌ಐಸಿ ಕಾರ್ಖಾನೆಗೆ ಭೇಟಿ ನೀಡಿ ನೌಕರರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಥಾಪನೆ ಮಾಡಿದ ಸಂಸ್ಥೆ ಇದು. ಮಹಾರಾಜರನ್ನು ಕಂಡರೆ ಈ ಸರ್ಕಾರಕ್ಕೆ ಆಗಲ್ಲ. ಅವರಿಗಿಂತ ನಾವೇ ಗ್ರೇಟು ಅಂತಾರೆ ಸಿದ್ದರಾಮಯ್ಯ. ಕೆಎಸ್‌ಐಸಿಯಲ್ಲಿ ಸುಮಾರು ೧೨೦೦ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ಸುಮಾರು ೯೬ ಕೋಟಿ ಲಾಭ ಬಂದಿದೆ. ಇಷ್ಟಾದರೂ ನರಸೀಪುರದಲ್ಲಿರೋ ಮಾತೃ ಕಾರ್ಖಾನೆ ಮುಚ್ಚಲು ಸರ್ಕಾರ ಹುನ್ನಾರ ಮಾಡುತ್ತಿದೆ. ಕ್ರೀಡಾಂಗಣದ ಹೆಸರಲ್ಲಿ ಕಾರ್ಖಾನೆ ಮುಚ್ಚಿ, ಹೊರಗಡೆಯಿಂದ ಸೀರೆ ಖರೀದಿಸಲು ಹೊರಟಿದೆ. ಕಮಿಷನ್ ಆಸೆಗೆ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚಲು ಬಿಡಲ್ಲ ಎಂದು ಹೇಳಿದರು.ಮೈಸೂರು ಸಿಲ್ಕ್‌ಗೆ ತನ್ನದೇ ಬೇಡಿಕೆ ಇದೆ. ಚಾಮುಂಡೇಶ್ವರಿ ದೇವಿಗೂ ಇದೇ ಸೀರೆಯನ್ನು ಉಡಿಸಲಾಗುತ್ತದೆ. ಉತ್ಪಾದನೆಯಾದ ಒಂದೇ ಗಂಟೆಯಲ್ಲಿ ಸೀರೆ ಮಾರಾಟವಾಗುತ್ತದೆ. ಜನ ಕಾದು ಕುಳಿತು ಸೀರೆಯನ್ನು ಕೊಂಡುಕೊಳ್ಳುತ್ತಾರೆ. ಶುಭ ಕಾರ್ಯಗಳಿಗೆ ಇದನ್ನು ಬಳಸುವ ಪದ್ಧತಿ ಇದೆ. ಇಂತಹ ಕಾರ್ಖಾನೆಯನ್ನು ಹಂತಹಂತವಾಗಿ ಮುಚ್ಚುವ ಹುನ್ನಾರ ಸರ್ಕಾರ ನಡೆಸಿದೆ ಎಂದರು.
ಧಾರವಾಡದಲ್ಲಿ ವಿದ್ಯಾರ್ಥಿಗಳ ಜೊತೆ ನಾವು ಹೋರಾಟ ಮಾಡಿದೆವು, ನಮ್ಮ ಹೋರಾಟದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಈಗ ೫೬ ಸಾವಿರ ಹುದ್ದೆಗಳ ನೇಮಕ ಮಾಡುತ್ತೇವೆ ಅಂತ ಬಾಯ್ಬಿಟ್ಟಿದೆ. ಈ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಶಾಸಕರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆಲ್ಲ ಗೊತ್ತಾಗಿದೆ ಮುಂದೆ ಅವರ ಸರ್ಕಾರ ಬರಲ್ಲ ಅಂತ. ಸರ್ಕಾರ ಬಂದಾಗಿನಿಂದ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದ್ದು, ಅಭಿವೃದ್ಧಿ ವಿಚಾರವನ್ನ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗ್ರಾಜುಯೇಷನ್ ಡೇಗೆ ಮೆಡಲ್ ಕೊಡೋಕು ಸರ್ಕಾರದ ಬಳಿ ಹಣ ಇಲ್ಲ. ಶಾಲಾ ಮಕ್ಕಳ ಊಟಕ್ಕೆ ತರಕಾರಿಗೆ ೫೦ಪೈಸೆ ಹಣ ಕೊಡುತ್ತಿದೆ. ಸರ್ಕಾರ ಪಾಪರ್ ಆಗಿದೆ, ಅದಕ್ಕಾಗಿ ಹಣ ಹೊಡೆಯೋಕೆ ಹೀಗೆಲ್ಲ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ೩ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಸರ್ಕಾರ ಇರೋವರೆಗೂ ಜನ ನೆಮ್ಮದಿಯಾಗಿರಲ್ಲ. ಸಿದ್ದರಾಮಯ್ಯ, ಡಿಕೆಶಿ ಪವರ್ ಪಾಲಿಟಿಕ್ಸ್ ನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾರಾದರು ಸಿಎಂ ಆಗಿ, ಮೊದಲು ಅಭಿವೃದ್ಧಿ ಮಾಡಿ ಎಂದರು.
ಗ್ಯಾರಂಟಿ ಸರ್ಕಾರಕ್ಕೆ ಹೊರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಗ್ಯಾರಂಟಿ ಘೋಷಣೆ ಮಾಡಿದರು, ಈಗ ಹೊರೆ ಅಂತಿದ್ದೀರಿ.ಈಗ ನೀವು ಗ್ಯಾರಂಟಿ ಕೊಡಲೇಬೇಕು, ಕೊಡದಿದ್ದರೆ ನಾವು ಬಿಡಲ್ಲ. ಗ್ಯಾರಂಟಿ ಘೋಷಣೆಗೂ ಮುನ್ನ ರಾಜ್ಯದ ಬೊಕ್ಕಸಕ್ಕೆ ಎಷ್ಟು ನಷ್ಟ ಅಂತ ಯೋಚಿಸಬೇಕಿತ್ತು ಎಂದರು.
ಆಸ್ಪತ್ರೆಗಳಲ್ಲಿ ಮೆಡಿಸನ್ ಇಲ್ಲ, ಆರೋಗ್ಯ ಸಚಿವರು ಕಾಣೆಯಾಗಿದ್ದಾರೆ. ವೈದ್ಯರಿಗೆ ಸಂಬಳ ಕೋಡೋಕು ಸರ್ಕಾರದಲ್ಲಿ ಹಣ ಇಲ್ಲ. ಉಚಿತ ಗ್ಯಾರಂಟಿ ಹೆಸರಲ್ಲಿ ಸರ್ಕಾರ ರಾಜ್ಯವನ್ನ ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಇತರರಿದ್ದರು.
ಬಾಕ್ಸ್...................ನಾವೆಲ್ಲ ಬೀದಿಗೆ ಬರಬೇಕಾಗುತ್ತದೆ!
ಮೂಲ ಉತ್ಪಾದನೆ ನರಸೀಪುರದಲ್ಲಿದ್ದು, ಅಲ್ಲಿನ ಜಾಗವನ್ನು ಕ್ರೀಡಾಂಗಣಕ್ಕೆ ಕೊಡುತ್ತಿದ್ದಾರೆ. ಇದೇನಾದರೂ ಅದರೆ, ಕೆಲಸ ಸ್ಥಗಿದಗೊಳ್ಳಿದ್ದು, ನಾವೆಲ್ಲ ಬೀದಿಗೆ ಬರಬೇಕಾಗುತ್ತದೆ ಎಂದು ಕೆಎಸ್‌ಐಸಿ ನೌಕರರ ವಿಪಕ್ಷ ನಾಯಕ ಆರ್.ಅಶೋಕ್ ಬಳಿ ಅಳಲು ತೋಡಿಕೊಂಡರು.ಟಿ.ನರಸೀಪುರದಲ್ಲಿ ನೂಲು ತೆಗೆದರೆ ಇಲ್ಲಿ ವೀವಿಂಗ್ ಮಾಡಲಾಗುತ್ತದೆ. ಅಲ್ಲಿ ಮೂಲ ಉತ್ಪಾದನೆಯೇ ಇಲ್ಲವಾದಲ್ಲಿ ಇಲ್ಲಿ ಉತ್ಪಾದನೆಯೇ ನಿಂತುಹೋಗಲಿದೆ. ಇದನ್ನೇ ನಂಬಿಕೊಂಡು ನಾವೆಲ್ಲ ಜೀವನ ಸಾಗಿಸುತ್ತಿದ್ದು, ಸಾವಿರಾರು ಜನ ಬೀದಿಗೆ ಬರಬೇಕಾಗುತ್ತದೆ ಎಂದು ತಿಳಿಸಿದರು.
ಚನ್ನಪಟ್ಟಣದ ಸ್ಪನ್ ಸಿಲ್ಕ್ ಮಿಲ್‌ನಲ್ಲಿ ೧೩೦ ಕಾರ್ಮಿಕರಿದ್ದಾರೆ. ಇದಲ್ಲದೇ ಮೈಸೂರಿನಲ್ಲಿ ೧೨೦೦ಕ್ಕೂ ಹೆಚ್ಚು ಹಾಗೂ ಟಿ.ನರಸೀಪುರಲ್ಲಿ ೧೯೦ ಕಾರ್ಮಿಕರಿದ್ದು, ಒಟ್ಟಾರೆ ೧೫೦೦ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಗೆ ಈ ವರ್ಷ ೧೯೦ಕೋಟಿ ಲಾಭ ಬಂದಿದೆ ಎಂದರು.ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ೧೪ಸಾವಿರ ಮಾತ್ರ ಸಂಬಳ ದೊರೆಯುತ್ತಿದೆ. ನಾವು ಏನೇ ಮನವಿ ಮಾಡಿದರೂ ಅದನ್ನು ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸುವುದಾಗಿ ತಿಳಿಸುತ್ತಾರೆ ಹೊರತು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಟೋ೨೭ಸಿಪಿಟಿ೧:ಚನ್ನಪಟ್ಟಣದಲ್ಲಿ ಕೆಎಸ್‌ಐಸಿ ಕಾರ್ಖಾನೆಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಧಿಕಾರಿಗಳು ಹಾಗೂ ನೌಕರರೊಂದಿಗೆ ಚರ್ಚೆ ನಡೆಸಿದರು.