50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಚಿಂತನೆ

| Published : Sep 11 2024, 01:08 AM IST / Updated: Sep 11 2024, 07:52 AM IST

50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಸುಮಾರು 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.

ಬೆಂಗಳೂರು : ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಸುಮಾರು 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.ಈ ಕುರಿತು ಸರ್ವೆ ನಡೆಸಲು ಖಾಸಗಿ ಕಂಪನಿಯೊಂದಕ್ಕೆ ಇಲಾಖೆ ಜವಾಬ್ದಾರಿ ವಹಿಸಿದೆ ಎನ್ನಲಾಗಿದೆ.

 ಪ್ರಸ್ತುತ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ನಿಯಮಕ್ಕಿಂತ 14 ಲಕ್ಷ ಹೆಚ್ಚುವರಿ ಕಾರ್ಡ್‌ಗಳು ಇವೆ. ಇವುಗಳನ್ನು ಮಾತ್ರ ರದ್ದು ಪಡಿಸಬೇಕೆಂಬ ಚರ್ಚೆ ಹಿಂದಿನಿಂದಲೂ ನಡೆಯುತ್ತಿತ್ತು. ಆದರೆ, ಈಗ 20 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿ ರದ್ದುಪಡಿಸಬೇಕು. ಈ ಮೂಲಕ ಅನ್ನಭಾಗ್ಯ ಯೋಜನೆಯಡಿ ಅನಗತ್ಯವಾಗಿ ಖರ್ಚಾಗುತ್ತಿರುವ ಹಣವನ್ನು ಉಳಿಸಬೇಕೆಂದು ಚಿಂತನೆ ನಡೆಸಿರುವ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು, ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ಗಳ ಪ್ರಯೋಜನವನ್ನು ಅರ್ಹರಿಗಿಂತ ಇತರರೆ ಹೆಚ್ಚು ಪಡೆಯುತ್ತಿದ್ದಾರೆ ಎಂಬ ಆರೋಪಗಳು ಹೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಡಿಬಿಟಿ ಮೂಲಕ ಹಣ ನೀಡುವುದನ್ನು ರಾಜ್ಯ ಸರ್ಕಾರ ಆರಂಭಿಸುವುದಕ್ಕೂ ಮೊದಲು ನ್ಯಾಯಬೆಲೆ ಅಂಗಡಿಯಲ್ಲಿ ಅನೇಕ ಕುಟುಂಬಗಳು ಪ್ರತಿ ತಿಂಗಳು ಅಕ್ಕಿ ಪಡೆಯುತ್ತಿರಲಿಲ್ಲ. ಯಾವಾಗ ಮೂರು ತಿಂಗಳು ಅಕ್ಕಿ ಪಡೆಯದ ಕುಟುಂಬದ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಿದ ಕೂಡಲೇ ಪ್ರತಿ ಕಾರ್ಡುದಾರರು ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲಲು ಶುರು ಮಾಡಿದ್ದಾರೆ.

ಹಾಗಾಗಿ, ಅರ್ಹರಿಗಿಂತ ಇತರರೇ ಹೆಚ್ಚಾಗಿ ಅಕ್ಕಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಹರಿಗೆ ಮಾತ್ರ ಫಲ ಸಿಗಬೇಕೆಂಬ ಉದ್ದೇಶದಿಂದ ಅರ್ಹರ ಹುಡುಕಾಟಕ್ಕೆಂದು ಆಹಾರ ಇಲಾಖೆ ಖಾಸಗಿ ಸಂಸ್ಥೆಯೊಂದಕ್ಕೆ ಜವಾಬ್ದಾರಿ ವಹಿಸಿದೆ. ಈ ಸಂಸ್ಥೆ ಶೀಘ್ರದಲ್ಲೇ ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿರುವ ಮಾನದಂಡ ಅನುಸರಿಸಿ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ ಪಡೆದಿರುವವರು ಅರ್ಹರೋ, ಅನರ್ಹರೋ ಎಂಬುದನ್ನು ಪತ್ತೆ ಮಾಡಿ ವರದಿ ನೀಡಲಿದೆ. ಈ ವರದಿಯ ಆಧಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶದಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1.03 ಕೋಟಿ ಬಿಪಿಎಲ್‌ ಕಾರ್ಡ್‌ ನೀಡಬೇಕೆಂಬ ನಿಯಮವಿದೆ. ಆದರೆ, ಸದ್ಯ ರಾಜ್ಯದಲ್ಲಿ 3,93,29,981 ಫಲಾನುಭವಿಗಳಿಗೆ 1.16 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ ವಿತರಿಸಲಾಗಿದೆ.

- ಅನರ್ಹರ ಪತ್ತೆ ಹಚ್ಚಲು ಖಾಸಗಿ ಸಂಸ್ಥೆಗೆ ಸಮೀಕ್ಷೆಯ ಹೊಣೆ?- ಅನ್ನಭಾಗ್ಯದಡಿ ಅನಗತ್ಯ ವೆಚ್ಚ ಉಳಿಸಲು ಸರ್ಕಾರದ ಪ್ಲಾನ್‌- ಆಹಾರ ಭದ್ರತಾ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್‌ ಕಾರ್ಡ್‌ಗಳು ಇರಬೇಕು- ಆದರೆ ಸದ್ಯ ಕರ್ನಾಟಕದಲ್ಲಿ 1.16 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳ ವಿತರಣೆಯಾಗಿದೆ

- ಸುಮಾರು 14 ಲಕ್ಷ ಹೆಚ್ಚುವರಿ ಕಾರ್ಡ್‌ಗಳಿದ್ದು, ಅವನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು

- ಆದರೆ ಇದೀಗ 20 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಕಾರ್ಡ್‌ ರದ್ದತಿಗೆ ಸರ್ಕಾರ ಮುಂದಾಗಿದೆ

- ಅನ್ನಭಾಗ್ಯ ಯೋಜನೆಯಡಿ ಅನಗತ್ಯವಾಗಿ ಖರ್ಚಾಗುತ್ತಿರುವ ಹಣ ಉಳಿಸಬೇಕೆಂಬ ಚಿಂತನೆ ಇದೆ