ಸಾರಾಂಶ
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪದವಿಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಈ ಕಾಲೇಜಿಗೆ ಕಾಯಕಲ್ಪ ನೀಡಿ, ಪುನಶ್ಚೇತನ ನೀಡುವ ಅಗತ್ಯವಿದೆ.
ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲ । ಈ ಕಾಲೇಜಿಗೆ ಅತಿಥಿ ಉಪನ್ಯಾಸಕರೇ ಆಧಾರಎನ್. ಪಂಪನಗೌಡ ಬಾದನಹಟ್ಟಿ
ಕನ್ನಡಪ್ರಭ ವಾರ್ತೆ ಕುರುಗೋಡುಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪದವಿಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಈ ಕಾಲೇಜಿಗೆ ಕಾಯಕಲ್ಪ ನೀಡಿ, ಪುನಶ್ಚೇತನ ನೀಡುವ ಅಗತ್ಯವಿದೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದ ಮೂಲಭೂತ ಸೌಲಭ್ಯಗಳಿಂದ ಕಾಲೇಜು ವಂಚಿತಗೊಂಡಿದೆ.ದುಸ್ಥಿತಿ:
ಇರುವ ಹತ್ತು ಕೊಠಡಿಗಳಲ್ಲಿ ಬಳಕೆಯಾಗುತ್ತಿರುವುದು ೫ ಕೊಠಡಿಗಳು ಮಾತ್ರ. ನಾಲ್ಕು ಕೊಠಡಿಗಳಲ್ಲಿ ತರಗತಿ ನಡೆಯುತ್ತಿದ್ದರೆ, ಒಂದನ್ನು ಪ್ರಾಚಾರ್ಯರ ಕೊಠಡಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇನ್ನುಳಿದ ೫ ಕೊಠಡಿಗಳು ದುಸ್ಥಿತಿಗೆ ತಲುಪಿವೆ. ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ, ಹತ್ತು ಕೊಠಡಿಗಳ ಕಿಟಕಿಗಳ ಗಾಜುಗಳು ಕಿಡಿಗೇಡಿಗಳಿಂದ ಒಡೆದು ಹೋಗಿವೆ. ಕೆಲ ಕೊಠಡಿಗಳು ಸೂಕ್ತ ನಿರ್ವಹಣೆ ಇಲ್ಲದೆ, ಪಕ್ಷಿಗಳ ವಾಸದ ತಾಣಗಳಾಗಿವೆ. ಈ ಕೊಠಡಿಗಳಲ್ಲಿ ಕಾಲಿಟ್ಟರೆ ಸಾಕು, ಪಕ್ಷಿಗಳ ಪುಕ್ಕ ಮತ್ತಿತರ ಕಸ ಕಡ್ಡಿಗಳು ಕಾಣಸಿಗುತ್ತವೆ.ಅತಿಥಿ ಉಪನ್ಯಾಸಕರೇ ಆಧಾರ:
ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗ ತೆರೆಯಲಾಗಿದೆ. ಈ ಕಾಲೇಜಿನಲ್ಲಿ ಸುಮಾರು ೧೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಈ ವರ್ಷ ಆ ಸಂಖ್ಯೆ ೫೨ಕ್ಕೆ ಕುಸಿದಿದೆ. ಕಾಲೇಜಿನಲ್ಲಿ ಪ್ರಭಾರಿ ಪ್ರಾಚಾರ್ಯರೊಬ್ಬರೆ, ಇನ್ನುಳಿದವರೆಲ್ಲರೂ ಅತಿಥಿ ಉಪನ್ಯಾಸಕರಾಗಿದ್ದಾರೆ. ಪ್ರಾಚಾರ್ಯರೂ ಕೂಡ ನಿಯೋಜನೆ ಮೇಲೆ ಬಂದಿದ್ದಾರೆ. ಹೀಗಾಗಿ ಪ್ರಾಚಾರ್ಯರನ್ನು ಹೊರತು ಪಡಿಸಿದರೆ, ಅತಿಥಿ ಉಪನ್ಯಾಸಕರೆ ಈ ಕಾಲೇಜಿಗೆ ಆಧಾರವಾಗಿದ್ದಾರೆ.ಇನ್ನು ಕಾಲೇಜು ಸಿರಿಗೇರಿ ಗ್ರಾಮದಿಂದ ಸುಮಾರು ೨ ಕಿಮೀ ದೂರವಿದೆ. ವಿದ್ಯಾರ್ಥಿಗಳು ನಡೆದುಕೊಂಡೆ ಬರಬೇಕು. ಸಾರಿಗೆ ವ್ಯವಸ್ಥೆ ಇಲ್ಲ. ಕಾಲೇಜಿನ ಬಳಿ ಬಸ್ ನಿಲುಗಡೆ ಇಲ್ಲವಾಗಿದೆ. ಕಾಲೇಜಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. ಆವರಣದಲ್ಲಿ ಮದ್ಯದ ಬಾಟಲಿ ಬಿದ್ದಿರುತ್ತವೆ. ಮುಳ್ಳು ಗಿಡಗಂಟಿ ಬೆಳೆದಿವೆ. ಇದರಿಂದ ಹಾವು, ಚೇಳುಗಳ ತಾಣವಾಗಿದೆ. ಇಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದ್ದು, ಮಕ್ಕಳ ಜೀವಕ್ಕೆ ಸಂಚಕಾರ ಎದುರಾಗಿದೆ. ಇದರಿಂದ ಪಾಲಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದ ಈ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಕಾಯಕಲ್ಪ ನೀಡುವ ಅಗತ್ಯವಿದೆ. ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸುವರೇ ಎಂಬುದನ್ನು ಗ್ರಾಮದ ಪಾಲಕರು ಕಾದು ನೋಡುವಂತಾಗಿದೆ.