ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಇತ್ತೀಚೆಗೆ ಅತಿಯಾದ ಮಳೆಯಿಂದ ತಾಲೂಕಿನ ಕೆಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿರುವುದಕ್ಕೆ ರೆಸಾರ್ಟ್ ಹಾಗೂ ಹೋಂ ಸ್ಟೇಗಳೇ ಕಾರಣ ಎಂದು ರಾಜ್ಯ ಸರ್ಕಾರವೇ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಸಕಲೇಶಪುರ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಮಸ್ತಾರೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿರುವುದು ನಿಜಕ್ಕೂ ಅಭಿನಂದನಾರ್ಹ. ತಾಲೂಕಿನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನಮ್ಮ ಹಿಡುವಳಿ ಭೂಮಿಗಳಲ್ಲಿ ನಮ್ಮ ವಹಿವಾಟನ್ನು ಮಾಡುತ್ತಿರುತ್ತೇವೆ. ಯಾವುದೇ ಅರಣ್ಯ ಅತಿಕ್ರಮಣವನ್ನು ಮಾಡಿರುವುದಿಲ್ಲ ಹಾಗೂ ಅರಣ್ಯ ಒತ್ತುವರಿಯನ್ನು ಬೆಂಬಲಿಸುವುದಿಲ್ಲ. ಯಾರಾದರೂ ಅನಧಿಕೃತವಾಗಿ ಅರಣ್ಯದಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ ನಿರ್ಮಾಣ ಮಾಡಿದಲ್ಲಿ ಅಂತಹ ರೆಸಾರ್ಟ್‌ಗಳನ್ನು ತೆರವುಗೊಳಿಸಲಿ. ಅದಕ್ಕೆ ನಮ್ಮ ಬೆಂಬಲ ಇದೆ. ಆದರೆ ನೈಸರ್ಗಿಕ ವಿಕೋಪಗಳಿಂದ ಆಗುವ ಗುಡ್ಡ ಕುಸಿತಕ್ಕೆ ಹೋಂ ಸ್ಟೇ ಮತ್ತು ರೆಸಾರ್ಟುಗಳನ್ನೇ ಹೊಣೆ ಮಾಡುವುದು ಸಮಂಜಸವಲ್ಲ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಪದೇ ಪದೆ ಒಂದು ಉದ್ಯಮದ ವಿರುದ್ಧವಾಗಿ ಮಾತನಾಡಿದರೆ ಸಾಮಾನ್ಯ ಜನರಲ್ಲಿಯೂ ಕೂಡ ತಪ್ಪು ಅಭಿಪ್ರಾಯ ಮೂಡುತ್ತದೆ ಎಂದು ಬೇಸರಿಸಿದರು.
ಗುಡ್ಡ ಕುಸಿತ ಪ್ರಕರಣಗಳಿಗೆ ಅದರದೇ ಆದ ಹಲವಾರು ಕಾರಣಗಳಿದ್ದು, ರಾಷ್ಟ್ರೀಯ ಹೆದ್ದಾರಿ ೭೫ ರಸ್ತೆ ಅಗಲೀಕರಣ, ಪಶ್ಚಿಮಘಟ್ಟದಲ್ಲಿ ಎತ್ತಿನಹೊಳೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದು ಹಾಗೂ ಪವರ್ ಪ್ರಾಜೆಕ್ಟ್‌ನಂತಹ ಇತರೆ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡಿರುವುದರಿಂದ ತಾಲೂಕಿನಲ್ಲಿ ಭೂಕುಸಿತವಾಗಲು ಪ್ರಮುಖ ಕಾರಣವಾಗಿದೆ. ಸರ್ಕಾರ ಮಾಡಿರುವ ತಪ್ಪನ್ನು ಮರೆಮಾಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಈಗಾಗಲೇ ಸೆಕ್ಷನ್ ೪ ಹೆಸರಿನಲ್ಲಿ ಸುಮಾರು ೫೦೮ ಮಂದಿಯ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ, ಇದು ಖಂಡನೀಯವಾಗಿದೆ. ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿಂದ ಭೂಕುಸಿತವಾಗುವುದಾಗಿದ್ದರೆ ಊಟಿ, ಕೊಡೈಕೆನಾಲ್‌ಗಳಲ್ಲಿ ಸಹ ಆಗಬೇಕಿತ್ತು. ಸರ್ಕಾರ ಈ ರೀತಿ ನಮ್ಮ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂದರು.ತಾಲೂಕು ಹೋಂ ಸ್ಟೇ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಅರಣ್ಯ ಪ್ರದೇಶ ಅತಿಕ್ರಮಿಸಿ ಯಾವುದೇ ಹೋಂಸ್ಟೇ ರೆಸಾರ್ಟ್‌ಗಳನ್ನು ನಿರ್ಮಿಸಿದ್ದರೆ ಅವುಗಳ ತೆರವು ಕಾರ್ಯಾಚರಣೆಯನ್ನು ನಾವು ಖಂಡಿತವಾಗಿ ಸ್ವಾಗತಿಸುತ್ತೇವೆ ಹಾಗೂ ಅದಕ್ಕೆ ನಮ್ಮ ಬೆಂಬಲ ಕೂಡ ಇದೆ. ನಮ್ಮ ಖಾಸಗಿ ಜಮೀನುಗಳಲ್ಲಿ, ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಉದ್ಯಮ ನಡೆಸುತ್ತಿದ್ದೇವೆ. ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅವರ ಆದೇಶದಿಂದ ರೆಸಾರ್ಟ್‌ಗಳಿಗೆ ಬರುವ ಅತಿಥಿಗಳು ಬುಕ್ಕಿಂಗ್ ಮಾಡಲು ಅಂಜುತ್ತಿದ್ದಾರೆ. ಭೂಕುಸಿತಕ್ಕೆ ಎತ್ತಿನಹೊಳೆ ಯೋಜನೆ ಹಾಗೂ ಡ್ಯಾಮ್‌ನಿಂದ ವಿದ್ಯುತ್ ತೆಗೆಯುವ ಯೋಜನೆಯಿಂದ ತೊಂದರೆ ಆಗಿದೆ ವಿನಃ ರೆಸಾರ್ಟ್ ಮತ್ತು ಹೋಂ ಸ್ಟೇ ಗಳಿಂದಲ್ಲ ನಮಗೆ ಬರುವ ಅತಿಥಿಗಳು ಚಿಕ್ಕಮಗಳೂರು ಕೊಡಗಿಗೆ ಹೋಗುತ್ತಿದ್ದಾರೆ. ಅರಣ್ಯ ಸಚಿವರ ಹೇಳಿಕೆಯಿಂದ ತಾಲೂಕಿನ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದೆ. ರೆಸಾರ್ಟ್‌ಗೆ ಬರುವ ಯಾವುದೇ ವ್ಯಕ್ತಿಗಳು ಸಾರ್ವಜನಿಕ ಪ್ರದೇಶದಲ್ಲಿ, ಅರಣ್ಯ ಪ್ರದೇಶದಲ್ಲಿ ಅನುಚಿತ ವರ್ತನೆ ಮಾಡುವುದು ಕಂಡುಬಂದರಲ್ಲಿ ಅಂತಹವರ ವಿರುದ್ಧ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ರೆಸಾರ್ಟ್ ಸಂಘದ ಕಾರ್ಯದರ್ಶಿ ಕಾಡುಮಕ್ಕಿ ಹರೀಶ್, ನಿರ್ದೇಶಕ ಬೋಬುಚ್ ಇದ್ದರು.