ಸಾರಾಂಶ
ಚಳ್ಳಕೆರೆ: ಕಳೆದ 7 ತಿಂಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಬಿಜೆಪಿ ಆಡಳಿತದಲ್ಲಿ ಸುಮಾರು 8900 ನೂತನ ಕೊಠಡಿಗಳನ್ನು ವಿವೇಕಾ ಯೋಜನೆಯಡಿ ನಿರ್ಮಿಸಲಾಯಿತು. 9 ಸಾವಿರ ಅತಿಥಿ ಉಪನ್ಯಾಸಕರ ವೇತನವನ್ನು 12 ಸಾವಿರದಿಂದ 24 ಸಾವಿರಕ್ಕೆ ಏರಿಕೆ ಮಾಡಲಾಯಿತು.
ಆದರೆ, ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರದ ಅಧೋಗತಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆಂದು ಸಚಿವ ವೈ.ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಪೂರಕವಾಗಿದ್ದ ಪಠ್ಯವನ್ನು ಬದಲಾವಣೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಶಿಕ್ಷಕ ಹುದ್ದೆ ಭರ್ತಿಯಾಗಿಲ್ಲ. ರಾಜ್ಯದ 402 ಪದವಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆ ಖಾಲಿ ಇವೆ. ಪದವಿ ಕಾಲೇಜಿನಲ್ಲಿ 5500 ಪ್ರಾಧ್ಯಾಪಕರ ಹುದ್ದೆ ಖಾಲಿ, ಒಟ್ಟಾರೆ ಶೇ.60ರಷ್ಟು ಪಾಠಗಳಾಗಿಲ್ಲ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಾದರೂ ಏನು ಎಂದು ಪ್ರಶ್ನಿಸಿದರು.
ರಾಜ್ಯದ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ನಾನು ಸದಾ ಬೆಂಬಲ ನೀಡುತ್ತಾ ಬಂದಿದ್ದೇನೆ. ಇತ್ತೀಚೆಗೆ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರಿಗೆ ಗದರಿಹಾಕಿ ಪಾಠಮಾಡಿದರೆ ಮಾತ್ರ ಸಂಬಂಳಕೊಡುತ್ತೇವೆ ಎಂದಿರುವುದು ಸರಿಯಲ್ಲ, ಇದನ್ನು ನಾನು ಖಂಡಿಸುವೆ. ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ಕತ್ತಲಲ್ಲಿಟ್ಟ ಖ್ಯಾತಿ ಕಾಂಗ್ರೆಸ್ ಪಕ್ಷದ ಸರ್ಕಾರದ್ದು ಎಂದರು. ಚುನಾವಣಾ ಸಂದರ್ಭದಲ್ಲಿ ಎನ್‌ಪಿಎಸ್ ತೆಗೆದು, ಒಪಿಎಸ್ ಜಾರಿಗೆ ತರುವ ಭರವಸೆ ನೀಡಿದ್ದರು. ಏಳನೇ ವೇತನ ಆಯೋಗ ಜಾರಿಗೆ ತರುವ ಆಶ್ವಾಸನೆ ನೀಡಿದ್ದರು ಆದರೆ ಯಾವುದೂ ಆಗಿಲ್ಲ.ಈ ಸರ್ಕಾರದ ವಿಶೇಷವೆಂದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಾರದ ಧೋರಣೆಯನ್ನು ಖಂಡಿಸುತ್ತಿದ್ದಾರೆ. ಗ್ಯಾರಂಟಿಗಳ ಗಲಾಟೆಯಲ್ಲಿ ಯಾವ ಶಾಸಕನಿಗೂ ಅಭಿವೃದ್ದಿಗೆ ಹಣ ನೀಡದೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದ್ದು ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮುಂದಿನ ಚುನಾವಣೆಯಲ್ಲಿ ಅಡ್ಡಿಯಾಗುವರು ಎಂದರು.
೨೦೨೪ರ ಜೂನ್ ತಿಂಗಳಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು ನಾನು ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕಳೆದ ೧೮ ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದೇನೆ. ಪ್ರಸ್ತುತ ಚಳ್ಳಕೆರೆ ತಾಲ್ಲೂಕು ಸೇರಿದಂತೆ ಒಟ್ಟು 21 ಸಾವಿರ ಮತಗಳಿದ್ದು ಆ ಪೈಕಿ 15 ಸಾವಿರ ಮತದಾರರು ನಮ್ಮ ಪರವಾಗಿದ್ದಾರೆಂದರು. ಈ ಬಾರಿಯೂ ಗೆಲುವು ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲೂ ಸಹ ಮತ್ತೊಮ್ಮೆ ಮೋದಿ ಜನಪ್ರಿಯತೆಯಿಂದ 250 ಸ್ಥಾನಗಳನ್ನು ಗಳಿಸಿ ಮೋದಿ ಪ್ರಧಾನಿಯಾಗಿ ಮುಂದುವರೆಯುವರು ಎಂಭ ಆಶಾಭಾವನೆ ವ್ಯಕ್ತಪಡಿಸಿದರು.---------
೨೨ಸಿಎಲ್ಕೆ೧ವೈ.ಎ.ನಾರಾಯಣಸ್ವಾಮಿ ಭಾವಚಿತ್ರ