ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಡಂಬಳ
ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗುತ್ತಿದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಿ ಎಂದು ತಹಶೀಲ್ದಾರ ಯರಿಸ್ವಾಮಿ ಪಿ.ಎಸ್ ಹೇಳಿದರು.ಡಂಬಳ ಹೋಬಳಿಯ ಜಂತ್ಲಿ-ಶಿರೂರ ಗ್ರಾಮದ ಹಳೆಯ ಗ್ರಾಪಂ ಕಟ್ಟಡದಲ್ಲಿ ಮುಂಡರಗಿ ತಾಲೂಕ ಆಡಳಿತ ಮುಂಡರಗಿ, ಜಂತ್ಲಿ-ಶಿರೂರ ಗ್ರಾಪಂ ಹಾಗೂ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಗ್ರಾಪಂ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಎಲ್ಲ ಮನೆಗೂ ತಲುಪಿಸುವುದು ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವುಗಳನ್ನು ಗುಣಾತ್ಮಕವಾಗಿ ವಿಲೇವಾರಿ ಮಾಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆಯನ್ನು ಪ್ರತ್ಯೇಕವಾಗಿ ರಚಿಸಿರುವುದು ಈ ಆಂದೋಲನದ ವಿಶೇಷತೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಗ್ಯಾರಂಟಿ ಸಮಿತಿ ಸದಸ್ಯ ನಾಗರಾಜ ಸಜ್ಜನ ಮಾತನಾಡಿದರು.
ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ, ವಿಕಲಚೇತನರ ಒಟ್ಟು 25 ಮಂದಿಗೆ ಮಾಸಾಶನದ ಆದೇಶ ಪ್ರತಿ ನೀಡಲಾಯಿತು.ಜಂತ್ಲಿ-ಶಿರೂರ ಗ್ರಾಪಂಗೆ ಶೀಘ್ರವಾಗಿ ಸ್ವಚ್ಚತಾ ಸಿಬ್ಬಂದಿ ನೇಮಕ ಮಾಡಿ, ಗ್ರಾಮದ ಕೆಲ ಬಡಾವಣೆಯ ರಸ್ತೆಗಳನ್ನು ಸಿಸಿ ರಸ್ತೆ ನಿರ್ಮಿಸಿ ಮತ್ತು ರೈತರ ಜಮೀನುಗಳಿಗೆ ತೆರಳುವ ರಸ್ತೆಗಳನ್ನು ಮುಳ್ಳು ಕಂಟಿ ತೆರವುಗೊಳಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಇಒ ವಿಜಯಕುಮಾರ ಬೆಣ್ಣಿ ಮಾತನಾಡಿ, ತಾತ್ಕಾಲಿಕವಾಗಿ ಸ್ವಚ್ಛತಾ ಸಿಬ್ಬಂದಿಯ ಮೂಲಕ ನಾಳೆಯಿಂದಲೆ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ವಿವಿಧ ಇಲಾಖೆಗಳಿಗೆ ಗ್ರಾಮಸ್ಥರು 38 ಅರ್ಜಿ ಸಲ್ಲಿಸಿದರು.
ಗ್ರಾಮದ ಹಿರಿಯರಾದ ಹೇಮಣ್ಣ ಪೂಜಾರ, ರವಿ ದೊಡ್ಡಮನಿ, ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಬಿಇಒ ಗಂಗಾಧರ ಅಣ್ಣಿಗೇರಿ, ಹಿರಿಯ ತೋಟಗಾರಿಕಾ ಅಧಿಕಾರಿ ಎಂ.ಎಂ. ತಾಂಬೋಟಿ, ಅಧಿಕಾರಿಗಳಾದ ನಾಗೇಂದ್ರ ಪಟ್ಟಣಶೆಟ್ಟಿ, ಡಾ. ಎಸ್.ವಿ. ತಿಗರಿಮಠ, ಸುನಿತಾ ಬಿ.ಎಸ್., ವಿಜಯಲಕ್ಷ್ಮಿ ಎಸ್.ಜಿ, ಡಾ. ಕೀರ್ತಿಹಾಸ ಎಚ್.ಸಿ., ಪ್ರಾಣೇಶ, ಎಸ್. ಆನಂದಕುಮಾರ, ಎಸ್.ಎಸ್. ಬಿಚಾಲಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಗ್ರಾಪಂ ಪಿಡಿಒಗಳು, ಆಶಾ, ಅಂಗನವಾಡಿ ಮತ್ತು ಎಲ್ಲಾ ಇಲಾಖೆಗಳ ಹಿರಿಯ ಕಿರಿಯ ಅಧಿಕಾರಿಗಳು, ಗ್ರಾಮ ಒನ್ ಸೇವಾ ಕೇಂದ್ರದವರು ಇದ್ದರು.