ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ: ಅಂತರಗೊಂಡ

| Published : Sep 17 2025, 01:09 AM IST

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಾದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಯುಕೆಪಿ ಯೋಜನೆ ಕುರಿತಾಗಿ ತೆಗೆದುಕೊಂಡ ನಿರ್ಣಯ ಸ್ವಾಗತಾರ್ಹವಾಗಿದೆ ಎಂದು ಮುಳುಗಡೆ ಹೋರಾಟ ಸಮಿತಿ ಸಂಚಾಲಕ ಪ್ರಕಾಶ ಅಂತರಗೊಂಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಾದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಯುಕೆಪಿ ಯೋಜನೆ ಕುರಿತಾಗಿ ತೆಗೆದುಕೊಂಡ ನಿರ್ಣಯ ಸ್ವಾಗತಾರ್ಹವಾಗಿದೆ ಎಂದು ಮುಳುಗಡೆ ಹೋರಾಟ ಸಮಿತಿ ಸಂಚಾಲಕ ಪ್ರಕಾಶ ಅಂತರಗೊಂಡ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹೂ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೋಂದಣಿ ಕಚೇರಿಯಲ್ಲಿ ವಾಸ್ತವ ಮಾರುಕಟ್ಟೆ ದರಕ್ಕಿಂತ 20-30ಪಟ್ಟು ಕಡಿಮೆ ದರ ಮಾಡಿದ್ದರಿಂದ ನ್ಯಾಯಾಲಯದಲ್ಲಿ ಯೋಗ್ಯ ಪರಿಹಾರ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಹಿನ್ನೀರಿನ ಯೋಜಾನಾಬಾಧಿತರ ಭೂಮಿಗಳಿಗೆ ನೀರಾವರಿ ಪ್ರತಿ ಎಕರೆಗೆ ₹40 ಲಕ್ಷ ಒಣಬೇಸಾಯಕ್ಕೆ ₹30 ಲಕ್ಷ ದರ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಪ್ರತಿ ವರ್ಷ ಶೇ.10ರಷ್ಟು ವಾರ್ಷಿಕ ಬೆಳವಣಿಗೆ ದರ ಹೆಚ್ಚಳವಾಗುವುದರಿಂದ ಈ ಆರ್ಥಿಕ ವರ್ಷದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಲಾಶಯದ ಎತ್ತರ 524.256 ಮೀಟರ್‌ ಎತ್ತರದಿಂದ ಬಾಧಿತಗೊಳ್ಳಲಿರುವ ಜಮೀನನ್ನು ಏಕಕಾಲಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅನವೀರಯ್ಯ ಪ್ಯಾಟಿಮಠ ಮಾತನಾಡಿ, ರಾಜ್ಯ ಸರ್ಕಾರ ಸಂತ್ರಸ್ತರ ಪರವಾಗಿ ಹೇಳಿದಂತೆ ನೆಡೆದುಕೊಂಡಿದೆ, ನುಡಿದಂತೆ ನೆಡೆದುಕೊಂಡ ಸಿಎಂ ಸಿದ್ದರಾಮಯ್ಯ ಅವರು ,ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಆರ್.ಬಿ. ತಿಮ್ಮಾಪುರ, ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕರಾದ ಜೆ.ಟಿ. ಪಾಟೀಲ ಅವರಿಗೆ ಈ ಭಾಗದ ರೈತರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.

ಹಿರಿಯರಾದ ಶಿವನಗೌಡ ಪಾಟೀಲ, ಹಣಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಕಿರಣ ಬಾಳಗೋಳ, ಬಸವರಾಜ ಹಳ್ಳದಮನಿ, ಅಶೋಕ ಜೋಶಿ, ವೆಂಕಟೇಶ ನಾಯಕ, ಯಲ್ಲಪ್ಪ ಮೇಟಿ, ಸಿದ್ದು ಮೇಟಿ, ಚಿದಾನಂದ ನಂದ್ಯಾಳ ಸೇರಿದಂತೆ ಇತರರು ಇದ್ದರು.