ಕಪ್‌ ತುಳಿತದಲ್ಲಿ ಸಾವಿಗೆ ಸರ್ಕಾರವೇ ಹೊಣೆ: ಅಶೋಕ್‌

| Published : Aug 13 2025, 12:30 AM IST

ಕಪ್‌ ತುಳಿತದಲ್ಲಿ ಸಾವಿಗೆ ಸರ್ಕಾರವೇ ಹೊಣೆ: ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಆರ್‌ಸಿಬಿ ಕಪ್‌ ತುಳಿತ ದುರಂತದಲ್ಲಿ ಸಣ್ಣ ಮಕ್ಕಳು ಸೇರಿ ಹನ್ನೊಂದು ಮಂದಿ ಸಾವಿಗೆ ಸರ್ಕಾರವೇ ನೇರ ಕಾರಣ. ಹೀಗಾಗಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರು ‘ಮಕ್ಕಳೇ ತಪ್ಪಾಯ್ತು’ ಎಂದು ಬಹಿರಂಗವಾಗಿ ಸರ್ಕಾರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮೂರೂ ಮಂದಿ ರಾಜೀನಾಮೆ ನೀಡಬೇಕು’ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಆಗ್ರಹ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಆರ್‌ಸಿಬಿ ಕಪ್‌ ತುಳಿತ ದುರಂತದಲ್ಲಿ ಸಣ್ಣ ಮಕ್ಕಳು ಸೇರಿ ಹನ್ನೊಂದು ಮಂದಿ ಸಾವಿಗೆ ಸರ್ಕಾರವೇ ನೇರ ಕಾರಣ. ಹೀಗಾಗಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರು ‘ಮಕ್ಕಳೇ ತಪ್ಪಾಯ್ತು’ ಎಂದು ಬಹಿರಂಗವಾಗಿ ಸರ್ಕಾರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮೂರೂ ಮಂದಿ ರಾಜೀನಾಮೆ ನೀಡಬೇಕು’ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಆಗ್ರಹ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ‘ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿ ನಡೆದ ದುರಂತದಲ್ಲೇ ಜನರಿಗೆ ರಕ್ಷಣೆ ನೀಡಲಾಗಿಲ್ಲ. ಇನ್ನು ರಾಜ್ಯದ ಜನತೆಗೆ ರಕ್ಷಣೆ ನೀಡಲು ನಿಮ್ಮಿಂದ ಆಗುತ್ತದೆಯೇ?’ ಎಂದು ಪ್ರಶ್ನಿಸಿದರು.

ಆರ್‌ಸಿಬಿ ಗೆದ್ದಿರುವ ಕಪ್‌ ಜತೆ ಫೋಟೋ ಅವಕಾಶಕ್ಕಾಗಿ ಮಕ್ಕಳ ಫೋಟೋಗೆ ಹಾರ ಹಾಕುವಂತೆ ಮಾಡಿದ್ದೀರಿ. ಹನ್ನೊಂದು ಮಂದಿ ಸಾವಿನ ಸೂತಕದಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೆ ಮುತ್ತು ಕೊಡುತ್ತಾರೆ. ಹೀಗಾಗಿ ಎ-1 ಆರೋಪಿ ಸಿದ್ದರಾಮಯ್ಯ, ಎ-2 ಡಿ.ಕೆ.ಶಿವಕುಮಾರ್‌, ಎ-3 ಡಾ.ಜಿ.ಪರಮೇಶ್ವರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಂಟಿ ಸದನ ಸಮಿತಿ/ಸಿಬಿಐ ತನಿಖೆ ನಡೆಸಿ:

ಕಪ್‌ ತುಳಿತ ದುರಂತವನ್ನು ಸುದೀರ್ಘವಾಗಿ ವಿವರಿಸಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಇನ್ನು ಮುಂದಾದರೂ ಇಂತಹ ಘಟನೆ ನಡೆಯದಿರಲು ನಿಯಮ ರೂಪಿಸಬೇಕು ಹಾಗೂ ಸದನ ಸಮಿತಿ ನೇಮಕ ಮಾಡಬೇಕು. ನೋವಿನಲ್ಲಿ ಕೈ ತೊಳೆಯುತ್ತಿರುವ ಮೃತರ ತಂದೆ-ತಾಯಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಆರ್‌.ಅಶೋಕ್‌ ಹೇಳಿದರು.

ಜೂ.3 ರಂದು ಆರ್‌ಸಿಬಿ ಕ್ರಿಕೆಟ್ ತಂಡ ಗೆದ್ದ ನಂತರ ಇಡೀ ರಾಜ್ಯದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಈ ಸಂಭ್ರಮದ ಕ್ರೆಡಿಟ್‌ ಅನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಳ್ಳಲು ‘ಕ್ರೆಡಿಟ್‌ ವಾರ್‌ʼ ನಡೆಯಿತು.

ವಿಧಾನಸೌಧ ಭದ್ರತಾ ಡಿಸಿಪಿ ಕರಿಬಸಪ್ಪ ಅವರು ಬಂದೋಬಸ್ತ್‌ಗೆ ಸಿಬ್ಬಂದಿ ಇಲ್ಲ, ಸಿ.ಸಿ.ಟೀವಿ ಇಲ್ಲ ಎಂದೆಲ್ಲ ವರದಿ ನೀಡಿದ್ದರು. ಇದರ ಹೊರತಾಗಿಯೂ ವಿಧಾನಸೌಧ ಭವ್ಯ ಮೆಟ್ಟಿಲ ಮೇಲೆ ಕಾರ್ಯಕ್ರಮ ಮಾಡುವಂತೆ ಸರ್ಕಾರ ಮಾಡಿದೆ.

ಜತೆಗೆ ಡಿ.ಕೆ.ಶಿವಕುಮಾರ್‌ ಅವರು ಜನ ನೇರವಾಗಿ ವಿಧಾನಸೌಧಕ್ಕೆ ಬನ್ನಿ, ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು. ನಂತರ ಆರ್‌ಸಿಬಿ ತಂಡವನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಕಾರ್‌ನಲ್ಲಿ ಕುಳಿತು ರಾಯಲ್‌ ಚಾಲೆಂಜರ್ಸ್‌ ವಿಸ್ಕಿ ಬಾವುಟ ಹಿಡಿದುಕೊಂಡು ವೀಡಿಯೋ ಮಾಡಿದ್ದರು. ಇದು ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ಘನತೆಗೆ ಶೋಭೆ ತರುತ್ತದೆಯೇ ಎಂದು ಅಶೋಕ್‌ ಪ್ರಶ್ನಿಸಿದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದೂರವಾಣಿ ಮೂಲಕ ರಾಜ್ಯಪಾಲರನ್ನು ಆಹ್ವಾನಿಸುತ್ತಾರೆ. ಆದರೆ ಕಾಲ್ತುಳಿತ ದುರಂತ ನಡೆದ ಬಳಿಕ ನಾನು ರಾಜ್ಯಪಾಲರನ್ನು ಆಹ್ವಾನಿಸಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವಿಧಾನಸೌಧದ ಭವ್ಯ ಮೆಟ್ಟಿಲ ಮೇಲೆ ಕಾರ್ಯಕ್ರಮ ಶುರುವಾಗುವ ಮೊದಲೇ ಆರು ಮಂದಿ ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲೂ ಶಿಷ್ಟಾಚಾರ ಪಾಲನೆಯಾಗಿಲ್ಲ. ಜತೆಗೆ ಎಲ್ಲ 11 ಮಂದಿ ಮೃತಪಟ್ಟ ಬಳಿಕವೂ ಮುಖ್ಯಮಂತ್ರಿಗಳಿಗೆ ಮಾಹಿತಿ ಸಿಗುವುದಿಲ್ಲ ಎಂದರೆ ಸರ್ಕಾರದ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರ ವಿಫಲ:

ಸರ್ಕಾರ ಈ ಪ್ರಕರಣದಲ್ಲಿ ಎಲ್ಲಾ ಹಂತದಲ್ಲೂ ವಿಫಲವಾಗಿದೆ. ಸರ್ಕಾರದ್ದೇ ವೈಫಲ್ಯ ಎಂದು ಆರ್‌ಸಿಬಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಈವರೆಗೆ ಸರ್ಕಾರದ ಯಾರೊಬ್ಬರೂ ಕ್ಷಮೆ ಕೂಡ ಯಾಚಿಸಿಲ್ಲ. ಹೀಗಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಮೂವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

-ಬಾಕ್ಸ್-

‘ಸಿದ್ದರಾಮಯ್ಯ ಬೈದರೆವರ ಎಂದು ಸ್ವೀಕರಿಸುವೆ’

ಆರ್‌ಸಿಬಿ ಕಪ್‌ ತುಳಿತ ದುರಂತದ ಬಗ್ಗೆ ಮಾತನಾಡುತ್ತಾ ಆರ್.ಅಶೋಕ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಎಷ್ಟು ಬೈದರೂ ನಾವು ವರ ಎಂದು ಸ್ವೀಕರಿಸುತ್ತೇವೆ.‌ ಸಿದ್ದರಾಮಯ್ಯ ಅವರ ಅನುಭವದಿಂದ ನಾವು ಕಲಿಯುವುದು ಸಾಕಷ್ಟಿದೆ. ನಾನು ಈಗಷ್ಟೇ ಈ ಸ್ಥಾನಕ್ಕೆ ಬಂದಿದ್ದೇನೆ. ಆದರೆ ಸಿದ್ದರಾಮಯ್ಯ ಏಳೆಂಟು ವರ್ಷ ಈ ಸ್ಥಾನದಲ್ಲಿದ್ದವರು ಎಂದು ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು. -ಬಾಕ್ಸ್-

ಸರ್ಕಾರದ ಬಗ್ಗೆ ಪ್ರಶ್ನಿಸಿ: ಯತ್ನಾಳ್‌ ಕಿಡಿ

ಆರ್‌ಸಿಬಿ ಕಪ್‌ ದುರಂತದಲ್ಲಿ ಅಧಿಕಾರಿಗಳ ವೈಫಲ್ಯದ ಬಗ್ಗೆ ವಿವರಿಸುತ್ತಿದ್ದ ಆರ್.ಅಶೋಕ್‌ ಮಾತಿಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ ವ್ಯಕ್ತಪಡಿಸಿದರು. ‘ಸರ್ಕಾರ ಬಿಟ್ಟು ಅಧಿಕಾರಿಗಳ ಮೇಲೆ ಹೊರೆ ಹಾಕ್ತಿದ್ದೀರಲ್ಲ. ಇಷ್ಟು ಜನ ಸತ್ತಿದ್ದು ಸರ್ಕಾರದ ಬೇಜವಾಬ್ದಾರಿಯಿಂದ ಅಂಥ ಹೇಳಿ. ಕರಿಬಸವ, ಬಿಳಿ ಬಸವ ಎಂದು ಹೇಳುತ್ತಾ ಕೂತಿದ್ದೀರಾ?’ ಎಂದು ತರಾಟೆಗೆ ತೆಗೆದುಕೊಂಡರು.